ಸಿದ್ದಾಪುರ: ದೇವರ ಕಾಡುಗಳು (ಕಿರುಅರಣ್ಯ) ಬುಡಕಟ್ಟು ಹಾಗೂ ಪಾರಂಪರಿಕ ಸಮುದಾಯಗಳ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ಸ್ಕೊಡ್‍ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಹೇಳಿದರು.
ತಾಲ್ಲೂಕಿನ ಮತ್ತಿಗಾರು, ಅರಳಿಹೊಂಡ ಗ್ರಾಮಗಳಲ್ಲಿ ರೋಟರಿ ಹೈಗ್ರೌಂಡ್ಸ್ ಬೆಂಗಳೂರು ಹಾಗೂ ಸ್ಕೊಡ್‍ವೆಸ್ ಸಂಸ್ಥೆಯ ಸಹಯೋಗದಲ್ಲಿ ಬುಡಕಟ್ಟು ಹಾಗೂ ಸಾಂಪ್ರದಾಯಿಕ ಸಮುದಾಯಗಳ ಮಕ್ಕಳಿಗೆ ಶಾಲಾ ಪರಿಕರಗಳನ್ನು ವಿತರಿಸಿ ಶನಿವಾರ ಅವರು ಮಾತನಾಡಿದರು.
ಹಲವಾರು ವರ್ಷಗಳಿಂದ ಸ್ಕೊಡ್‍ವೆಸ್ ಸಂಸ್ಥೆ ಪರಿಸರ, ಅರಣ್ಯ ರಕ್ಷಣೆಯಲ್ಲಿಯೂ ಸೇವೆ ಸಲ್ಲಿಸುತ್ತಾ ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ದೇವರಕಾಡು ಸಂರಕ್ಷಣಾ ಅಭಿಯಾನದ ಅಂಗವಾಗಿ ಸ್ಥಳೀಯ ಸಮುದಾಯಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸುವ ಕಾರ್ಯ ಮಾಡುತ್ತಿದೆ. ಇದಕ್ಕೆ ರೋಟರಿ ಹೈಗ್ರೌಂಡ್ಸ್ ಬೆಂಗಳೂರು ಸಂಸ್ಥೆಯು ಕೈ ಜೋಡಿಸಿದೆ. ಉತ್ತರ ಕನ್ನಡ ಜಿಲ್ಲೆಯೂ ಸೇರಿದಂತೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿನ ಸಮುದಾಯ ನಿರ್ವಹಿತ ದೇವರಕಾಡು (ಕಿರುಅರಣ್ಯ)ಗಳು ಹಲವಾರು ಕಾರಣಗಳಿಂದ ಕಣ್ಮರೆಯಾಗುತ್ತಿರುವ ಕಾರಣಗಳಿಂದ ಸ್ಥಳೀಯ ಅರಣ್ಯಾವಲಂಬಿತ ಸಮುದಾಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಾಗಿದೆ. ಈ ಹಿನ್ನೆಲೆಯಲ್ಲಿ ದೇವರ ಕಾಡು ಸಂರಕ್ಷಣಾ ಅಭಿಯಾನವನ್ನು ಆರಂಭಿಸಲಾಗಿದೆ ಎಂದರು.
ಸ್ಕೊಡ್‍ವೆಸ್ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ನಾರಾಯಣ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯರಾದ ಅಣ್ಣಪ್ಪ ಗೊಂಡ, ಗ್ರಾಮದ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳ ಪಾಲಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.