ADVERTISEMENT

ಯಲ್ಲಾಪುರ: ಹೊಲಕ್ಕೆ ಹಗಲಲ್ಲೇ ಒಂಟಿ ಸಲಗದ ದಾಳಿ

ಕಿರವತ್ತಿ ಗ್ರಾಮದ ತೆಂಗಿನಗೇರಿ ಕ್ರಾಸ್ ಬಳಿ ಸಂಚಾರ

ನಾಗರಾಜ ಮದ್ಗುಣಿ
Published 26 ಅಕ್ಟೋಬರ್ 2021, 19:30 IST
Last Updated 26 ಅಕ್ಟೋಬರ್ 2021, 19:30 IST
ಯಲ್ಲಾಪುರ ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಂಗಿನಗೇರಿ ಕ್ರಾಸ್ ಸಮೀಪದ ಹೊಲದಲ್ಲಿ ಸೋಮವಾರ ಸಂಜೆ ಒಂಟಿ ಸಲಗ ಮೇಯುತ್ತಿತ್ತು
ಯಲ್ಲಾಪುರ ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಂಗಿನಗೇರಿ ಕ್ರಾಸ್ ಸಮೀಪದ ಹೊಲದಲ್ಲಿ ಸೋಮವಾರ ಸಂಜೆ ಒಂಟಿ ಸಲಗ ಮೇಯುತ್ತಿತ್ತು   

ಯಲ್ಲಾಪುರ: ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಂಗಿನಗೇರಿ ಕ್ರಾಸ್ ಸಮೀಪ ಒಂಟಿ ಸಲಗವೊಂದು ಸೋಮವಾರ ಸಂಜೆ ಕಾಣಿಸಿಕೊಂಡಿತು. ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲೇ ಇರುವ ಮನೆಯ ಸಮೀಪದ ಹೊಲದಲ್ಲಿದ್ದು ಆತಂಕ ಮೂಡಿಸಿತು.

ತಾಲ್ಲೂಕಿನ ಮಲವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರೆ ಬಳಿಯ ಕೈಗಾ ಹೆದ್ದಾರಿಯಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಎರಡು ಆನೆಗಳು ಕಾಣಿಸಿಕೊಂಡಿದ್ದವು. ಕಿರವತ್ತಿ, ಮದ್ನೂರು, ಕಣ್ಣಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆಗಳು ರೈತರ ಹೊಲ, ಗದ್ದೆಗಳಿಗೆ ಈ ಹಿಂದಿನಿಂದಲೂ ದಾಳಿ ಮಾಡುತ್ತಿವೆ. ಇಷ್ಟು ದಿನ ರಾತ್ರಿ ದಾಂಧಲೆ ಮಾಡುತ್ತಿದ್ದ ಗಜಪಡೆ, ಹಗಲಲ್ಲೇ ಕಂಡುಬರುತ್ತಿದೆ. ಅದರಲ್ಲೂ ಒಂಟಿ ಸಲಗ ಸಂಚರಿಸುತ್ತಿರುವುದು ಸ್ಥಳೀಯರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಒಂದು ತಿಂಗಳಿನಿಂದ ಐದಾರು ತಂಡಗಳಲ್ಲಿ ಆನೆಗಳು ಈ ಮೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ರೈತರ ಹೊಲಗಳನ್ನು ನಾಶ ಮಾಡುತ್ತಿವೆ. ತೆನೆ ಬಂದು ಕಾಳು ಗಟ್ಟಿ ಆಗುತ್ತಿರುವ ಸಂದರ್ಭದಲ್ಲಿ ತುತ್ತಿನ ಚೀಲ ಆನೆಗಳ ಪಾಲಾಗುವುದನ್ನು ಕಂಡು ರೈತರು ಕಣ್ಣೀರಿಡುತ್ತಿದ್ದಾರೆ.

ADVERTISEMENT

ಕಿರವತ್ತಿ ಭಾಗದ ಗುಡಂದೂರು, ಯಲವಳ್ಳಿ, ಆನೆಹೊಂಡ ಭಾಗಗಳಲ್ಲಿ 12, 8, 3, 4 ಹೀಗೆ ವಿವಿಧ ಸಂಖ್ಯೆಗಳಲ್ಲಿರುವ ಆನೆಗಳ ಹಿಂಡು ಕಾಡಿನಲ್ಲಿವೆ. ಮಂಗ್ಯಾನ ತಾವರೆಗೆರೆ ಎಂಬಲ್ಲಿ ಇನ್ನೂ ಒಂದು ಹಿಂಡು ಇದೆ ಎನ್ನಲಾಗುತ್ತಿದೆ. ಈ ಪೈಕಿ ಒಂದೆರಡು ತಂಡಗಳಲ್ಲಿ ಮರಿಗಳೂ ಇವೆ ಎಂದು ಈ ಭಾಗದ ರೈತರು ಹೇಳುತ್ತಾರೆ.

ಆನೆಯೊಂದಿಗೆ ಸೆಲ್ಫಿ!
ಒಂಟಿಮನೆಯ ಸಮೀಪದ ಹೊಲದಲ್ಲಿ ಒಂಟಿ ಸಲಗ ನಿರಾತಂಕವಾಗಿ ಮೇಯುತ್ತಿದ್ದರೆ, ಹೊಲದ ಬೇಲಿ ಬಳಿ ನಿಂತು ಆನೆ ಕಾಣುವಂತೆ ಯುವಕರು ಸೆಲ್ಫಿ ತೆಗೆದುಕೊಳ್ಳುತ್ತಿದ್ದುದು ಕಂಡು ಬಂತು.

‘ಪರಿಹಾರಕ್ಕೆ ಕಾನೂನು ತೊಡಕು’
‘ಕಣ್ಣಿಗೇರಿ, ಕಿರವತ್ತಿ, ಮದ್ನೂರು ಭಾಗಗಳಲ್ಲಿ ಅರಣ್ಯ ಅತಿಕ್ರಮಣ ಜಮೀನುಗಳೇ ಹೆಚ್ಚಾಗಿವೆ. ಹಾಗಾಗಿ ಆನೆ ದಾಳಿ, ಕಾಡು ಪ್ರಾಣಿಗಳಿಂದ ದಾಳಿ, ಹಾನಿಗೆ ಪರಿಹಾರ ನೀಡುವುದಕ್ಕೆ ಕಾನೂನಿನಲ್ಲಿ ತೊಡಕಿದ್ದು, ರೈತರಿಗೆ ತೊಂದರೆಯಾಗಿದೆ. ಆದರೂ ಇಂತಹ ರೈತರು ಮನವಿ ಮಾಡಿದರೆ ಅರಣ್ಯ ಇಲಾಖೆಯು ಮಾನವೀಯ ನೆಲೆಯಲ್ಲಿ ಸಹಾಯ ನೀಡುತ್ತಿದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಶೋಕ ಭಟ್ಟ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೂರು ತಿಂಗಳಲ್ಲಿ ಆನೆ ದಾಳಿಯಿಂದ ಬೆಳೆ ಹಾನಿಯಾದ 51 ಪ್ರಕರಣಗಳಿಗೆ ಮಾನವೀಯ ನೆಲೆಯಲ್ಲಿ ₹2.98 ಲಕ್ಷ ಪರಿಹಾರ ನೀಡಲಾಗಿದೆ. ಇನ್ನೂ ಕೆಲವು ಪ್ರಕರಣಗಳ ಪರಿಶೀಲನೆ ನಡೆಯುತ್ತಿದೆ’ ಎಂದರು.

‘ಆತಂಕ ಪ‍ಡಬೇಕಿಲ್ಲ’
‘ಆನೆಗಳ ಐದಾರು ತಂಡಗಳು ಕಿರವತ್ತಿ ಭಾಗದಲ್ಲಿವೆ. ಪ್ರತಿವರ್ಷ ಬರುವ ಇವು, ಈಗಾಗಲೇ ಮುಂಡಗೋಡ ಕಡೆಗೆ ಹೋಗಬೇಕಿತ್ತು. ಇವುಗಳ ಚಲನವಲನಗಳನ್ನು ನಮ್ಮ ಸಿಬ್ಬಂದಿ ಗಮನಿಸುತ್ತಿದ್ದಾರೆ. ಸೋಮವಾರ ಒಂಟಿಮನೆ ಹತ್ತಿರ ಕಂಡು ಬಂದ ಒಂಟಿ ಸಲಗವು, ಗುಂಪಿನಿಂದ ಬೇರ್ಪಟ್ಟಿರಬೇಕು. ಇದು ಮತ್ತೆ ಗುಂಪನ್ನು ಸೇರಿಕೊಳ್ಳುತ್ತದೆ. ಆತಂಕ ಪಡಬೇಕಾದ ಅಗತ್ಯವಿಲ್ಲ’ ಎಂದು ಕಿರವತ್ತಿ ವಲಯ ಅರಣ್ಯಾಧಿಕಾರಿ ಎನ್.ಎಲ್.ನದಾಫ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.