ADVERTISEMENT

ಶಿರಸಿ | ದುರಸ್ತಿ ನೆಪದಲ್ಲಿ ವಿದ್ಯುತ್‌ ಅಡಚಣೆ

ಹೆಸ್ಕಾಂ ನಡೆಗೆ ಸಾರ್ವಜನಿಕರ ಆಕ್ರೋಶ

ರಾಜೇಂದ್ರ ಹೆಗಡೆ
Published 25 ಫೆಬ್ರುವರಿ 2025, 5:14 IST
Last Updated 25 ಫೆಬ್ರುವರಿ 2025, 5:14 IST
ಶಿರಸಿಯಲ್ಲಿರುವ ಹೆಸ್ಕಾಂ ಕಚೇರಿ (ಪ್ರಾತಿನಿಧಿಕ) 
ಶಿರಸಿಯಲ್ಲಿರುವ ಹೆಸ್ಕಾಂ ಕಚೇರಿ (ಪ್ರಾತಿನಿಧಿಕ)    

ಶಿರಸಿ: ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಕುಡಿಯುವ ಹಾಗೂ ಕೃಷಿ ಕಾರ್ಯಕ್ಕೆ ನೀರಿನ ಅಗತ್ಯತೆ ತೀವ್ರಗೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ಹೆಸ್ಕಾಂನಿಂದ ವಿದ್ಯುತ್ ಮಾರ್ಗಗಳ ದುರಸ್ತಿ ನೆಪದಲ್ಲಿ ಪದೇ ಪದೇ ವಿದ್ಯುತ್‌ ಅಡಚಣೆ ಮಾಡಲಾಗುತ್ತಿದ್ದು, ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. 

ಶಿರಸಿ ಉಪವಿಭಾಗ ವ್ಯಾಪ್ತಿಯಲ್ಲಿ 5 ಸೆಕ್ಷನ್‌ಗಳಿದ್ದು, 23 ಫೀಡರ್‌ಗಳಿವೆ. ಅಂದಾಜು 2,760 ಕಿಮೀ ಎಲ್‍ಟಿ ಲೈನ್  ಹಾಗೂ 8,800 ಕಿಮೀ ಎಚ್‌ಟಿ ಲೈನ್ ಮಾರ್ಗವಿದೆ. ಈ ಮಾರ್ಗಗಳ ನಿರ್ವಹಣೆಗೆ ತಿಂಗಳಲ್ಲಿ ಐದಕ್ಕಿಂತ ಬಾರಿ ವಿದ್ಯುತ್ ನಿಲುಗಡೆ ಕುರಿತು ಅಧಿಕೃತ ಪ್ರಕಟಣೆ ಹೆಸ್ಕಾಂನಿಂದ ಹೊರಡಿಸಲಾಗುತ್ತದೆ. ಅದು ಹೊರತುಪಡಿಸಿದರೆ ನಿತ್ಯವೂ ಒಂದಲ್ಲ ಒಂದು ಭಾಗದಲ್ಲಿ ಎಲ್.ಸಿ, ಲೈನ್ ಟ್ರಿಪ್ ಎಂದು ವಿದ್ಯುತ್ ಕಡಿತಗೊಳಿಸುವ ದುರಭ್ಯಾಸ ಹೆಸ್ಕಾಂ ಅಧಿಕಾರಿಗಳಿಗೆ ಬಂದಿದೆ’ ಎಂಬುದು ಸಾರ್ವಜನಿಕರ ದೂರು.

‘ಹೆಸ್ಕಾಂ ಸಿಬ್ಬಂದಿ ಯಾವುದಾದರೂ ಒಂದು ಕಡೆ ನಿತ್ಯ ಕೆಲಸ ಮಾಡುತ್ತಿರುತ್ತಾರೆ. ಈಚೆಗೆ ಪೂರ್ಣ ಪ್ರಮಾಣದ ದುರಸ್ತಿ ಮಾಡಿದ ಮಾರ್ಗದಲ್ಲೇ ಮತ್ತೆ ದುರಸ್ತಿ ಮಾಡುವುದು ಕಾಣುತ್ತದೆ. ಇಂದು ಒಂದು ಮಾರ್ಗ ಸಿದ್ಧವಾದರೆ ಮತ್ತೆ ನಾಳೆ ಅಲ್ಲಿಯೇ ಏನು ಕೆಲಸ ಮಾಡುತ್ತಾರೆ?, ನಗರ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆಯಿಂದ ವ್ಯಾಪಾರ ವಹಿವಾಟಿನ ಜೊತೆ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಕ್ಕೂ ತೀವ್ರ ತೊಂದರೆ ಆಗುತ್ತಿದೆ. ಇದರ ಜೊತೆ ನಗರದಲ್ಲಿ ಹಲವು ಮನೆಗಳಿಗೆ ನಗರಸಭೆಯ ನಳ ಸಂಪರ್ಕವಿಲ್ಲ. ಅಂಥ ಮನೆಗಳಲ್ಲಿ ನೀರೆತ್ತಲು ತೊಡಕಾಗುತ್ತಿದೆ' ಎಂದು ನಗರದ ನಿವಾಸಿ ರಮೇಶ ನಾಯ್ಕ ದೂರಿದ್ದಾರೆ.

ADVERTISEMENT

'ಗ್ರಾಮೀಣ ಪ್ರದೇಶದಲ್ಲಿ ಕೃಷಿ ಹಾಗೂ ತೋಟಗಾರಿಕಾ ಕ್ಷೇತ್ರಕ್ಕೆ ನೀರು ನೀಡುವ ಸಮಯ ಇದಾಗಿದೆ. ಅಸಮರ್ಪಕ ವಿದ್ಯುತ್ ಹಾಗೂ ವಿದ್ಯುತ್ ನಿಲುಗಡೆಯ ಕಾರಣ ನೀರು ಹಾಯಿಸಲು ತೀವ್ರ ತೊಡಕಾಗುತ್ತಿದೆ. ಗ್ರಾಮೀಣದ ಒಂದು ಮಾರ್ಗ ದುರಸ್ತಿಯಿದ್ದರೆ ಇಡೀ ತಾಲ್ಲೂಕಿನ ಗ್ರಾಮೀಣ ಭಾಗದ ವಿದ್ಯುತ್ ನಿಲ್ಲಿಸಲಾಗುತ್ತಿದೆ. ಇದು ಸರಿಯಲ್ಲ' ಎಂಬುದು ರೈತ ಸುರೇಶ ಮಡಿವಾಳ ಮಾತು. 'ಶಿರಸಿ ತಾಲ್ಲೂಕಿನ ಎಲ್ಲ ಮಾರ್ಗವನ್ನು ಏಕಕಾಲಕ್ಕೆ ದುರಸ್ತಿ ಮಾಡುವಷ್ಟು ಸಿಬ್ಬಂದಿ ಹೆಸ್ಕಾಂದಲ್ಲಿ ಇಲ್ಲ. ಹಾಗಿದ್ದರೂ ಒಂದೇ ವೇಳೆಗೆ  ಇಡೀ ತಾಲ್ಲೂಕು ವ್ಯಾಪ್ತಿಯ ವಿದ್ಯುತ್ ನಿಲುಗಡೆ ಅವೈಜ್ಞಾನಿಕ ಕ್ರಮವಾಗಿದೆ' ಎನ್ನುತ್ತಾರೆ ಅವರು. 

‘ಬಹುತೇಕ ಮಾರ್ಗ ಗ್ರಾಮೀಣ ಭಾಗ, ಅರಣ್ಯ ಪ್ರದೇಶದಲ್ಲಿಯೇ ಇದ್ದು, ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಜಂಗಲ್ ಕಟಿಂಗ್  ಮಾಡಲಾಗುತ್ತದೆ. ಆದರೆ, ಈ ಕಾರ್ಯ ಮಳೆಗಾಲ ಪೂರ್ವ ಹಾಗೂ ನಂತರ ವ್ಯವಸ್ಥಿತವಾಗಿ ನಡೆಯದಿರುವುದು ಕೂಡ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲು ಕಾರಣ’ ಎಂಬುದು ಹಲವರ ಆರೋಪವಾಗಿದೆ.

ದುರಸ್ತಿ ಕಾರ್ಯವಿದ್ದರಷ್ಟೇ ವಿದ್ಯುತ್ ವ್ಯತ್ಯಯದ ಪ್ರಕಟಣೆ ನೀಡಿ ವಿದ್ಯುತ್ ಸ್ಥಗಿತ ಮಾಡುತ್ತೇವೆ. ಉಳಿದಂತೆ ಸಮರ್ಪಕ ವಿದ್ಯುತ್ ನೀಡಲಾಗುತ್ತಿದೆ.
ನಾಗರಾಜ ಪಾಟೀಲ ಹೆಸ್ಕಾಂ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.