ADVERTISEMENT

ಗುರು ಭಕ್ತಿಯ ಶಕ್ತಿ ಅದ್ಭುತ: ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 12:25 IST
Last Updated 8 ಜೂನ್ 2023, 12:25 IST
ಶಿರಸಿಯ ಬನವಾಸಿಯಲ್ಲಿ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು
ಶಿರಸಿಯ ಬನವಾಸಿಯಲ್ಲಿ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು   

ಶಿರಸಿ: ‘ಗುರು ಭಕ್ತಿಯ ಶಕ್ತಿ ಅದ್ಭುತ. ಗುರುವಾದವನು ಜೀವ ಜಗತ್ತಿಗೆ ಸಂಜೀವಿನಿಯಾಗಿದ್ದಾನೆ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ತಾಲ್ಲೂಕಿನ ಬನವಾಸಿಯಲ್ಲಿ ಗುರುವಾರ ಜರುಗಿದ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಅವರು, ‘ಪರಮಾತ್ಮ ಭಕ್ತರ ಕಲ್ಯಾಣಕ್ಕಾಗಿ ಗುರು ರೂಪದಲ್ಲಿ ತೋರುತ್ತಾನೆ. ಗುರು ಭಕ್ತಿ ಇಲ್ಲದಾತನಿಗೆ ಶಿವಭಕ್ತಿ ದೊರಕದು’ ಎಂದರು.

‘ಸಂಸ್ಕಾರಯುಕ್ತ ಮೌಲ್ಯಾಧಾರಿತ ಜೀವನದಿಂದ ಬದುಕಿನಲ್ಲಿ ಶಾಂತಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ. ಬದುಕಿನಲ್ಲಿ ಕಷ್ಟಗಳನ್ನು ಸಹಿಸಿಕೊಂಡು ಬಾಳಿದರೆ ಬದುಕು ಬಲಗೊಳ್ಳುತ್ತದೆ’ ಎಂದು ಹೇಳಿದ ಅವರು, ‘ಜಗದ್ಗುರು ರೇಣುಕಾಚಾರ್ಯರು ನಿರೂಪಿಸಿದ ಧರ್ಮದ ದಶ ಸೂತ್ರಗಳು ಸಾರ್ವಕಾಲಿಕ ಸತ್ಯವನ್ನು ಸಾರುತ್ತವೆ’ ಎಂದರು.

ADVERTISEMENT

ಕಡೇನಂದಿಹಳ್ಳಿ-ದುಗ್ಲಿ ಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೊಳೆಮಠದ ನಾಗಭೂಷಣ ಸ್ವಾಮೀಜಿ, ಮಳಲಿಮಠದ ನಾಗಭೂಷಣ ಸ್ವಾಮೀಜಿ, ಜಡೆ ಮಠದ ಮಹಾಂತ ಸ್ವಾಮೀಜಿ, ಶಾಂತಪುರ ಮಠದ ಶಿವಾನಂದ ಸ್ವಾಮೀಜಿ, ಜಡೆ ಹಿರೇಮಠದ ಅಮರೇಶ್ವರ ಸ್ವಾಮೀಜಿ, ಹಾರನಹಳ್ಳಿ ಮಠದ ಶಿವಯೋಗಿ ಸ್ವಾಮೀಜಿ, ಚನ್ನಗಿರಿ ಮಠದ ಕೇದಾರ ಶಿವಶಾಂತವೀರ ಸ್ವಾಮೀಜಿ ಪಾಲ್ಗೊಂಡಿದ್ದರು. ಉತ್ಸವ ಸಮಿತಿಯ ಅಧ್ಯಕ್ಷ ರಾಜಶೇಖರ ಗೌಡ ಸ್ವಾಗತಿಸಿದರು. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಬಯಲು ಬಸವೇಶ್ವರ ದೇವಸ್ಥಾನದಿಂದ ಮಧುಕೇಶ್ವರ ದೇವಸ್ಥಾನದವರೆಗೆ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ವಿವಿಧ ವಾದ್ಯ ಮೇಳ, ಚಂಡೆ, ವೀರಗಾಸೆ, ಭಜನಾ ಮಂಡಳಿಗಳು ಪಾಲ್ಗೊಂಡು ಮೆರುಗು ನೀಡಿದವು. ಮಹಿಳೆಯರ ಪೂರ್ಣಕುಂಭ ಮೆರವಣಿಗೆಯು ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.