ಶಿರಸಿಯ ಬನವಾಸಿ ಭಾಗದಲ್ಲಿ ಬೆಳೆಯುವ ಅನಾನಸ್
ಶಿರಸಿ: ತೋಟಗಾರಿಕಾ ಬೆಳೆಗಳಾದ ಅನಾನಸ್ ಹಾಗೂ ಶುಂಠಿ ಬೆಳೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬನವಾಸಿಗೆ ಮಂಜೂರಾದ ಶೀತಲೀಕರಣ ಘಟಕ (ಕೋಲ್ಡ್ ಸ್ಟೋರೇಜ್) ಅನುಷ್ಠಾನಕ್ಕೆ ಜಾಗದ ತೊಡಕು ಎದುರಾಗಿದೆ. ಕಂದಾಯ ಇಲಾಖೆ ಜಾಗ ನೀಡಿದರಷ್ಟೇ ಈ ಯೋಜನೆ ಕಾಮಗಾರಿಗೆ ಚಾಲನೆ ಸಿಗಲಿದೆ.
ಶಿರಸಿಯ ಪೂರ್ವ ಭಾಗ ಬನವಾಸಿ ಹೋಬಳಿಯಲ್ಲಿ ಅನಾನಸ್, ಶುಂಠಿಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿದ್ದು, ಅದರ ಸಂಗ್ರಹಕ್ಕೆ ಸೂಕ್ತ ವ್ಯವಸ್ಥೆ ಇಲ್ಲ. ಹೀಗಾಗಿ ದರ ಇಳಿಕೆಯ ಹಾದಿಯಲ್ಲಿದ್ದರೂ ಬೆಳೆಗಾರರು ತಮ್ಮ ಉತ್ಪನ್ನವನ್ನು ಮಾರುವುದು ಅನಿವಾರ್ಯ. ಈ ಕಾರಣಕ್ಕೆ ಶೀತಲೀಕರಣ ಘಟಕ ಸ್ಥಾಪನೆ ಮೂಲಕ ರೈತರಿಗೆ ಅನುಕೂಲ ಒದಗಿಸಲು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಬನವಾಸಿ ಕೇಂದ್ರಿತವಾಗಿ ಶೀತಲೀಕರಣ ಘಟಕ ಮಂಜೂರು ಮಾಡಲಾಗಿದೆ. ₹5 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಅನುಷ್ಠಾನಕ್ಕೆ ಆರಂಭಿಕವಾಗಿ ಜಾಗದ ಕೊರತೆಯ ವಿಘ್ನ ಎದುರಾಗಿದೆ.
‘2,500 ಟನ್ ಸಾಮರ್ಥ್ಯದ ಘಟಕ ಇದಾಗಿರುವ ಕಾರಣ ಜಾಗವೂ ಬಹಳಷ್ಟು ಬೇಕು. ಕನಿಷ್ಠ 2 ಎಕರೆಯಿದ್ದರೆ ಯೋಜನೆ ಜಾರಿ ಮಾಡಲು ಅನುಕೂಲ. ಆದರೆ ಬನವಾಸಿಯಲ್ಲಿ ತೋಟಗಾರಿಕಾ ಇಲಾಖೆಯ ಜಾಗವಿಲ್ಲ. ಯೋಜನೆಯು ತೋಟಗಾರಿಕಾ ಇಲಾಖೆ ಮೂಲಕವೇ ಆಗಲಿದೆ. ಈ ಕಾರಣಕ್ಕೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಕಂದಾಯ ಇಲಾಖೆಯ ಮೊರೆ ಹೋಗುವಂತಾಗಿದೆ. ಕಂದಾಯ ಪಡ ಜಾಗವಿದ್ದರೆ ನೀಡುವಂತೆ ಇಲಾಖೆಗೆ ಪತ್ರ ವ್ಯವಹಾರ ನಡೆದಿದ್ದು, ಇನ್ನಷ್ಟೇ ಪ್ರತಿಕ್ರಿಯೆ ಸಿಗಬೇಕಿದೆ’ ಎಂಬುದು ತೋಟಗಾರಿಕಾ ಇಲಾಖೆ ಅಧಿಕಾರಿಯೊಬ್ಬರ ಮಾತು.
‘ತೋಟಗಾರಿಕಾ ಇಲಾಖೆ ಜಾಗವಿದ್ದರೆ ತಕ್ಷಣವೇ ಯೋಜನೆ ಜಾರಿ ಮಾಡಲಾಗುತ್ತಿತ್ತು. ಆದರೆ ಜಾಗವಿರದ ಕಾರಣ ಸಮಸ್ಯೆಯಾಗಿದೆ. ಕಂದಾಯ ಇಲಾಖೆ ಜಾಗ ನೀಡುವ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಯಿದ್ದು, ಕಾಮಗಾರಿ ಅನುಷ್ಠಾನ ಮತ್ತಷ್ಟು ಮುಂದೆ ಹೋಗುತ್ತದೆ. ಅದೂ ಅಲ್ಲದೇ, ಬನವಾಸಿ ಭಾಗದಲ್ಲಿ ಇತ್ತೀಚಿನ ವರ್ಷದಲ್ಲಿ ಅನಾನಸ್ ಬೆಳೆ ಪ್ರಮಾಣ ಇಳಿಕೆಯಾಗುತ್ತಿದೆ. ಹೀಗಾಗಿ ಘಟಕ ಆರಂಭವಾದರೂ ಹೆಚ್ಚಿನ ಪ್ರಯೋಜನ ಸಿಗದು’ ಎಂಬುದು ರೈತ ಪ್ರಮುಖ ಬಸವರಾಜ ಗೌಡ ಅವರ ಮಾತು.
‘ಈಗಾಗಲೇ ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದು, ಜಾಗ ನೀಡುವ ಭರವಸೆ ನೀಡಿದ್ದಾರೆ. ರೈತರಿಗೆ ಅನುಕೂಲ ಆಗುವ ಉದ್ದೇಶದಿಂದ ಈ ಘಟಕ ಆರಂಭಿಸುತ್ತಿದ್ದು, ಗ್ರಿಡ್ ಕಾರ್ಯಾರಂಭದ ನಂತರ ಯೋಜನೆ ಕಾಮಗಾರಿಗೆ ಚಾಲನೆ ನೀಡಲು ಕ್ರಮವಹಿಸಲಾಗುವುದು. ಅದಕ್ಕೂ ಪೂರ್ವ ಜಾಗ ಮಂಜೂರಾತಿ ಪ್ರಕ್ರಿಯೆ ನಡೆಸಲಾಗುವುದು’ ಎಂಬುದು ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಮಾತು.
ಗ್ರಿಡ್ ಕಾರ್ಯಾರಂಭ ಮಾಡಲಿ:
‘ಈಗಾಗಲೇ ಅಂಡಗಿಯಲ್ಲಿ ಕೃಷಿ ಇಲಾಖೆಯ ಶೀತಲೀಕರಣ ಘಟಕ ಇದ್ದು ವಿದ್ಯುತ್ ಸಮಸ್ಯೆಯಿಂದ ಆರಂಭವನ್ನೇ ಕಂಡಿಲ್ಲ. ಪ್ರಸ್ತುತ ತೋಟಗಾರಿಕಾ ಇಲಾಖೆಯಡಿ ಬೇರೊಂದು ಘಟಕ ನಿರ್ಮಾಣವಾದರೂ ಅದರ ಸ್ಥಿತಿಯೂ ಇದೇ ರೀತಿಯಾಗುತ್ತದೆ. ಹಾಗಾಗಿ ಬನವಾಸಿ ಗ್ರಿಡ್ ಕಾರ್ಯಾರಂಭ ಮಾಡಿದ ನಂತರವಷ್ಟೇ ಯೋಜನೆ ಕೈಗೆತ್ತಿಕೊಂಡರೆ ಅನುಕೂಲ ಆಗುತ್ತದೆ’ ಎಂಬುದು ಬನವಾಸಿ ಭಾಗದ ಬಹುತೇಕ ರೈತರ ಮಾತಾಗಿದೆ.
ಕಂದಾಯ ಇಲಾಖೆಯಿಂದ ಜಾಗ ಮಂಜೂರಾದರೆ ಯೋಜನೆ ನೀಲನಕ್ಷೆ ಸಿದ್ಧಪಡಿಸಿ ವರದಿ ಸಲ್ಲಿಸಿ ನಂತರ ಕಾಮಗಾರಿ ಅನುಷ್ಠಾನ ಮಾಡಲಾಗುವುದು.ಬಿ.ಪಿ.ಸತೀಶ, ತೋಟಗಾರಿಕಾ ಇಲಾಖೆ ಡಿಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.