ADVERTISEMENT

‘ಬಾಡಿಗೆ ಮೊತ್ತ ಪಾವತಿಸದಿದ್ದರೆ ಮಾರುಕಟ್ಟೆಗೆ ಬೀಗ’

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 3:18 IST
Last Updated 19 ಆಗಸ್ಟ್ 2025, 3:18 IST
ಶರ್ಮಿಳಾ ಮಾದನಗೇರಿ 
ಶರ್ಮಿಳಾ ಮಾದನಗೇರಿ    

ಶಿರಸಿ: ನಗರದ ನಿಲೇಕಣಿ ಮೀನು ಮಾರುಕಟ್ಟೆಯ ವ್ಯಾಪಾರಿಗಳು 13 ತಿಂಗಳಿನಿಂದ ಬಾಡಿಗೆ ಭರಣ ಮಾಡಿಲ್ಲ. ಅಂದಾಜು ₹15.98 ಲಕ್ಷ ಬಾಕಿ ಇದೆ. ಈಗಾಗಲೇ ನೋಟಿಸ್ ನೀಡಲಾಗಿದ್ದು, ಒಂದು ವಾರದೊಳಗಡೆ ಹಣ ಪಾವತಿಸಿದ್ದರೆ ಮಾರುಕಟ್ಟೆ ಸ್ಥಗಿತ  ಮಾಡಲಾಗುತ್ತದೆ ಎಂದು ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಎಚ್ಚರಿಕೆ ನೀಡಿದರು.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಿಲೇಕಣಿಯ ಮೀನು ಮಾರುಕಟ್ಟೆಗೆ ನಗರಸಭೆಯಿಂದ ಎಲ್ಲ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಆದರೆ ಸಾರ್ವಜನಿಕರು ಹಾಗೂ ಮೀನು ಮಾರಾಟ ಮಹಿಳೆಯರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಬೀದಿ ಬದಿಯಲ್ಲಿ ಮೀನು ಮಾರಾಟ ಮಾಡುವುದನ್ನು ತಪ್ಪಿಸಲು ಹಿಂದಿನ ಶಾಸಕರು, ನಗರಸಭೆ ಹಿಂದಿನ ಆಡಳಿತ ಮಂಡಳಿಯವರು ನಿಲೇಕಣಿಯಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಸೌಲಭ್ಯ ನೀಡಿದ್ದಾರೆ. ಅವರ ಮೇಲೂ ದೂರು ಬಂದಿದೆ. ಹಿಂದಿನ ವರ್ಷದ 2 ತಿಂಗಳು ಹಾಗೂ ಈ ವರ್ಷದ 11 ತಿಂಗಳಿನ ಬಾಡಿಗೆ ಬಾಕಿ ಉಳಿದಿದ್ದು, ಬಾಡಿಗೆ ಸಂದಾಯ ಮಾಡಲು ಈಗಾಗಲೇ ಒಂದು ನೋಟಿಸ್ ನೀಡಲಾಗಿದೆ. 2ನೇ ನೋಟಿಸ್ ನೀಡುತ್ತೇವೆ. ಬಾಡಿಗೆ ಭರಣ ಮಾಡದಿದ್ದರೆ ಮಾರುಕಟ್ಟೆಯ ಶಟರ್ ಎಳೆಯಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ನಗರದ ಬಿಡ್ಕಿಬೈಲ್‍ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ವೇಳೆ ನಗರಸಭೆ ಅಧ್ಯಕ್ಷರಿಗೆ ಪೊಲೀಸ್ ಇಲಾಖೆ ಗಾರ್ಡ್ ಆಫ್ ಹಾನರ್ ನೀಡಬೇಕಿತ್ತು. ಆದರೆ ಈ ವರ್ಷ ಆ ಪದ್ಧತಿ ಮಾಡಿಲ್ಲ. ಅದಕ್ಕೆ ಕಾರಣ ಯಾರು ಎಂಬುದನ್ನು ಸ್ಪಷ್ಟಪಡಿಸಬೇಕು. ಇಲ್ಲಿ ಹೆಸರು ಮುಖ್ಯವಲ್ಲ ಬದಲಾಗಿ ನಗರಸಭೆ ಅಧ್ಯಕ್ಷೆ ಸ್ಥಾನ ಮುಖ್ಯ. ನಗರಸಭೆ ಅಧ್ಯಕ್ಷರಿಗೆ ಅಗೌರವ ತೋರಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಂಸದ, ಶಾಸಕ, ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯುತ್ತಿದ್ದೇನೆ’ ಎಂದು ಹೇಳಿದರು.

ADVERTISEMENT

ನಗರಸಭೆ ಉಪಾಧ್ಯಕ್ಷ ರಮಾಕಾಂತ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಸದಸ್ಯರಾದ ಆನಂದ ಸಾಲೇರ, ಕುಮಾರ ಬೋರ್ಕರ, ಗೀತಾ ಶೆಟ್ಟಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.