ADVERTISEMENT

ಶಿರಸಿ | ಬೆಳೆ 'ಬರ'ದ ಕಾಲದಲ್ಲಿ ಸಾಲ ಶೂಲ

ಆರ್ಥಿಕ ಸಂಸ್ಥೆಗಳಿಂದ ಸಾಲ ಮರುಪಾವತಿಸುವಂತೆ ರೈತರಿಗೆ ನೊಟೀಸ್

ರಾಜೇಂದ್ರ ಹೆಗಡೆ
Published 16 ಏಪ್ರಿಲ್ 2024, 4:46 IST
Last Updated 16 ಏಪ್ರಿಲ್ 2024, 4:46 IST
ಶಿರಸಿಯ ಬನವಾಸಿ ಭಾಗದಲ್ಲಿ ಬರ ಹಾಗೂ ನೀರ ಕೊರತೆಯ ಕಾರಣಕ್ಕೆ ಬೆಳೆ ಒಣಗಿರುವುದು
ಶಿರಸಿಯ ಬನವಾಸಿ ಭಾಗದಲ್ಲಿ ಬರ ಹಾಗೂ ನೀರ ಕೊರತೆಯ ಕಾರಣಕ್ಕೆ ಬೆಳೆ ಒಣಗಿರುವುದು   

ಶಿರಸಿ: ಬರದ ನಡುವೆ ಜೀವನ ನಡೆಸುವುದೇ ಕಷ್ಟವಾಗಿರುವಾಗ ಕೃಷಿ ಸಾಲ ತೆಗೆದುಕೊಂಡ ರೈತರಿಗೆ ಆರ್ಥಿಕ ಸಂಸ್ಥೆಗಳು ಏಪ್ರಿಲ್ ಅಂತ್ಯದೊಳಗೆ ಸಂಪೂರ್ಣ ಸಾಲ ತುಂಬುವಂತೆ ನೋಟಿಸ್‌ ನೀಡುತ್ತಿದ್ದು, ಜೀವನ ನಿರ್ವಹಣೆಗೆ ಪರದಾಡುತ್ತಿರುವ ರೈತರ ಸ್ಥಿತಿ ‘ಬೆಂಕಿಯಿಂದ ಬಾಣಲೆಗೆ’ ಎಂಬಂತಾಗಿದೆ.

ಮಳೆಯಾಶ್ರಿತ ಕೃಷಿ ವ್ಯವಸ್ಥೆ ಹೊಂದಿರುವ ತಾಲ್ಲೂಕಿನ ಪೂರ್ವ ಭಾಗ ಬನವಾಸಿ ಹೋಬಳಿಯ ಒಂಬತ್ತು ಪಂಚಾಯಿತಿ ವ್ಯಾಪ್ತಿಯಲ್ಲಿ ತೀವ್ರ ಬರದಿಂದ ಅಡಿಕೆ, ಬಾಳೆ, ಭತ್ತ, ಅನಾನಸ್, ಮೆಕ್ಕೆಜೋಳ, ಶುಂಠಿ ಹಾಗೂ ಇನ್ನಿತರ ಬೆಳೆಗಳು ಒಣಗಿವೆ. ವರದಾ ನದಿ, ಕೊಳವೆ ಬಾವಿ, ಕೆರೆ, ತೆರೆದ ಬಾವಿ, ಕೃಷಿ ಹೊಂಡಗಳು ಬತ್ತಿ ಹೋಗಿದ್ದು, ಬೆಳೆ ರಕ್ಷಣೆಗೆ ರೈತರು ಮಾಡಿದ ಪ್ರಯತ್ನಗಳು ಯಶಸ್ವಿಯಾಗಿಲ್ಲ. ತುತ್ತಿನ ಚೀಲಕ್ಕಾಗಿ ಪರದಾಡುತ್ತಿರುವ ಇಂಥ ಸನ್ನಿವೇಶದಲ್ಲಿ ಕೃಷಿ ಸಾಲ ನೀಡಿದ ಆರ್ಥಿಕ ಸಂಸ್ಥೆಗಳು ಮರುಪಾವತಿಗೆ ಒತ್ತಡ ಹಾಕುತ್ತಿರುವುದು ರೈತರನ್ನು ಇನ್ನಷ್ಟು ಕಂಗೆಡಿಸಿದೆ.

‘ಹೋಬಳಿ ವ್ಯಾಪ್ತಿಯಲ್ಲಿ ಸುಮಾರು ಏಳು ಸಾವಿರ ಹೆಕ್ಟೇರ್ ಕೃಷಿ ಭೂಮಿಯಿದ್ದು, ಬಹುತೇಕ ರೈತರು ಸಣ್ಣ, ಮಧ್ಯಮ ವರ್ಗದವರು ಕೃಷಿ ಮಾಡಿ ಜೀವನ ನಡೆಸುತ್ತಿದ್ದಾರೆ. ಹಲವು ರೈತರು ಕೃಷಿಗಾಗಿ ಸಾಲ ಮಾಡುವುದು ಅನಿವಾರ್ಯವಾಗಿದೆ. ಹೆಚ್ಚಿನ ರೈತರು ನೀರಾವರಿ ಉದ್ದೇಶದಿಂದ ಸಾಲ ಮಾಡಿದ್ದಾರೆ. ಆದರೆ ನೀರ ಕೊರತೆ ಹಾಗೂ ಬರದ ಕಾರಣಕ್ಕೆ ಫಸಲು ರೈತರ ಕೈಸೇರಿಲ್ಲ’.

ADVERTISEMENT

‘ರೈತರ ಕೈಹಿಡಿಯಬೇಕಾಗಿದ್ದ ವಾಣಿಜ್ಯ ಬೆಳೆಗಳು ಕೂಡ ಸಂಪೂರ್ಣ ಹಾನಿಯಾಗಿ ಬಿತ್ತನೆಗೆ ಖರ್ಚು ಮಾಡಿದ ಹಣವೂ ಇಲ್ಲವಾಗಿ ಸಾಲದಲ್ಲಿ ಕೈ ತೊಳೆದುಕೊಳ್ಳುವಂತಾಗಿದೆ. ಬಂದ ಸಲ್ಪಸ್ವಲ್ಪ ಉತ್ಪನ್ನದಿಂದ ಕಷ್ಟಪಟ್ಟು ದಿನದೂಡುತ್ತಿರುವ ಇಂಥ ಸಂದಿಗ್ದ ಸಂದರ್ಭದಲ್ಲಿ ಸಹಕಾರಿ ಸಂಘ, ಬ್ಯಾಂಕ್‌ಗಳಿಂದ ಕೃಷಿ ಉದ್ದೇಶಕ್ಕೆ ಪಡೆದ ಸಾಲ ಮರುಪಾವತಿಸುವಂತೆ ನೋಟಿಸ್‌ ನೀಡಲಾಗುತ್ತಿದೆ. ಏ.30ರೊಳಗೆ ಬೆಳೆಸಾಲ ಮತ್ತು ಮಾಧ್ಯಮಿಕ ಸಾಲ ತುಂಬುವಂತೆ ನೂರಾರು ರೈತರಿಗೆ ನೋಟಿಸ್ ನೀಡಲಾಗಿದೆ’ ಎಂಬುದು ರೈತ ಬಸವರಾಜ ಗೌಡರ ಮಾತಾಗಿದೆ.

‘ಬರದ ಕಾರಣಕ್ಕೆ ಕೃಷಿ ಕಾರ್ಮಿಕರಿಗೆ, ರೈತರಿಗೆ ಉದ್ಯೋಗ ಇಲ್ಲದಂತಾಗಿದೆ. ಜತೆಗೆ ಸಾಲ ತೀರಿಸುವಂತೆ ಆರ್ಥಿಕ ಸಂಸ್ಥೆಗಳಿಂದ ಒತ್ತಡ ಬರುತ್ತಿದೆ. ಇದರ ಪರಿಣಾಮ ಕೆಲ ಕೃಷಿಕರು, ಕಾರ್ಮಿಕರು ಹೊರ ಊರಿನತ್ತ ವಲಸೆ ಹೋಗುತ್ತಿದ್ದಾರೆ’ ಎಂದು ಅವರು ವಿವರಿಸಿದರು. 

‘ಕೃಷಿಗಾಗಿ ಮಾಡಿದ್ದ ಸಾಲ ತೀರಿಸಲಾಗದೆ ಮನನೊಂದು ಹೋಬಳಿಯಲ್ಲಿ ಈಗಾಗಲೇ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂಥ ಕಾಲಘಟ್ಟದಲ್ಲಿ ಸಾಲ ತುಂಬುವಂತೆ ನೋಟಿಸ್ ನೀಡಲಾಗುತ್ತಿದೆ. ಬೆಳೆಯೇ ಇಲ್ಲದ ಸಂದರ್ಭದಲ್ಲಿ ಸಾಲ  ಮರುಪಾವತಿ ಅಸಾಧ್ಯ. ತಕ್ಷಣ ಸರ್ಕಾರ ಮಧ್ಯ ಪ್ರವೇಶಿಸಿ ರೈತರಿಗೆ ಸಹಾಯ ಮಾಡಬೇಕು’ ಎಂಬುದು ರೈತ ವರ್ಗದ ಆಗ್ರಹವಾಗಿದೆ. 

2016-17ನೇ ಸಾಲಿನ ಬರಗಾಲದ ಸಂದರ್ಭದಲ್ಲಿ ರೈತ ಪಡೆದ ಸಾಲಗಳನ್ನು ಒಂದು ವರ್ಷ ಮುಂದೂಡಲಾಗಿತ್ತು. ಈ ವರ್ಷ ತೀವ್ರ ಬರ ಇರುವುದರಿಂದ ರೈತರ ಸಾಲ ಕಟ್ಟುವ ಅವಧಿಯನ್ನು ಒಂದು ವರ್ಷ ಕಾಲ ಮುಂದೂಡಬೇಕು.
ಯುವರಾಜ ಗೌಡ, ಕೃಷಿಕ
ಈಗಾಗಲೇ ರೈತರಿಂದ ಬಂದ ದೂರುಗಳನ್ನು ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ. ಅವರಿಂದ ನಿರ್ದೇಶನ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಅಪರ್ಣಾ ರಮೇಶ, ಉಪವಿಭಾಗಾಧಿಕಾರಿ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.