ಶಿರಸಿ: ಕದಂಬರು ಆಳಿದ ಬನವಾಸಿ ಪಟ್ಟಣದಲ್ಲಿ ಎರಡು ದಿನಗಳ ಕಾಲ ನಡೆಸಲಾಗುವ ಕದಂಬೋತ್ಸವಕ್ಕೆ ಮುನ್ನುಡಿಯಾಗಿ ನಡೆದ ಸಾಂಸ್ಕೃತಿಕ ಕಲಾ ನಡಿಗೆ ಸುಡುವ ಬಿಸಿಲನ್ನೂ ಲೆಕ್ಕಿಸದೇ ಸಂಭ್ರಮದಿಂದ ಆಕರ್ಷಕವಾಗಿ ನಡೆಯಿತು.
ನಾಡಿನ ಪ್ರಸಿದ್ದ ಮಧುಕೇಶ್ವರ ದೇವರ ದೇವಾಲಯದ ಎದುರಿನಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಉತ್ಸವ ನಡೆಯುವ ಸುಮಾರು ಮೂರು ಕಿ.ಮೀ. ದೂರದ ಮೈದಾನದವರೆಗೂ ಮೆರವಣಿಗೆ ಸಾಗಿತು. 50ಕ್ಕೂ ಹೆಚ್ಚು ಕಲಾ ತಂಡಗಳು ಕಲಾ ಮೆರಗು ನೀಡಿದವು. ದೇವಾಲಯದಿಂದ ಹೊರಟ ಮೆರವಣಿಗೆ ಬಸ್ ನಿಲ್ದಾಣ, ಬನವಾಸಿಯ ಮಯೂರವರ್ಮ ಕದಂಬ ವೃತ್ತದ ತನಕ ಸಾಗಿ ಮೈದಾನದಲ್ಲಿ ಸಂಪನ್ನಗೊಂಡಿತು.
ವಿದ್ಯಾರ್ಥಿನಿಯರ ಪೂರ್ಣಕುಂಭ ಸ್ವಾಗತ, ಶಿರಸಿ ಬೇಡರವೇಷ, ಕಲಾವಿದ ಶಾಂತಾರಾಮ ಶೆಟ್ಟಿ ಅವರ ಆಂಜನೇಯ, ಬನವಾಸಿಯ ನಾಗಶ್ರೀ ಪ್ರೌಢಶಾಲೆಯ ಸಮವಸ್ತ್ರ ತಂಡ, ಬಾವುಟ ತಂಡ, ನರಗುಂದ ಮಹಿಳಾ ತಂಡದ ಡೊಳ್ಳುಕುಣಿತ, ಶಿರಸಿ ತಾಲ್ಲೂಕಾ ದೈವಜ್ಞ ಮಹಿಳಾ ಮಂಡಳದ ಚಂಡೆ ವಾದ್ಯ, ಶಿವಶಂಕರ ತುಮಕೂರು ತಂಡದ ಅರೆವಾದ್ಯ, ಆನಂದ ಜೋಗಿಯ ಕೀಲುಕುದುರೆ, ಉದಯಕುಮಾರ ಕಾರಬಾಳಿಯ ವೀರಗಾಸೆ, ಹೊನ್ನಾವರದ ಸುಗ್ಗಿ ತಂಡದ ಸುಗ್ಗಿ ಕುಣಿತ, ಡೊಳ್ಳುಚಂದ್ರ ಬೆಂಗಳೂರ ಅವರ ಕೋಳಿ ನೃತ್ಯ ಜನಮನ ರಂಜಿಸಿದವು.
ನಿಖಿಲ ನಾಯಕ ಸಂಗಡಿಗರ ಮರಕಾಲು ನೃತ್ಯ, ಫಕೀರಪ್ಪ ಭಜಂತ್ರಿ ಬನವಾಸಿಯ ಪಂಚವಾದ್ಯ, ಕಲಘಟಗಿಯ ಮಾರಿಕಾಂಬಾ ಯುವತಿ ಸಂಘದ ಲಮಾಣಿ ನೃತ್ಯ, ಮೊಗವಳ್ಳಿಯ ಬಸವೇಶ್ವರ ಡೊಳ್ಳು ಮೇಳದ ಡೊಳ್ಳು ಕುಣಿತ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಯ ರೂಪಕ ತಂಡ, ಶಿರಸಿಯ ಶಾಸಕರ ಮಾದರಿ ಶಾಲೆಯ ವಿದ್ಯಾರ್ಥಿಗಳ ವಾದ್ಯತಂಡ, ಬನವಾಸಿ, ಭಾಷಿ, ತಿಗಣಿ, ಅಂಡಗಿ, ನರೂರು, ಸಣ್ಣಮನೆ, ಗುಡ್ನಾಪುರ ಶಾಲೆಗಳ ಸಮವಸ್ತ್ರ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಕದಂಬ ಜ್ಯೋತಿಗೆ ಪೂಜಿಸಿ, ನಂತರ ಕದಂಬ ಲಾಂಛನಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ, ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ, ತಹಶೀಲ್ದಾರ್ ಶೈಲೇಶ ಪರಮಾನಂದ, ಡಿಡಿಪಿಐ ಬಸವರಾಜ್ ಪಿ, ತಾಲ್ಲೂಕು ಪಂಚಾಯಿತಿ ಇಒ ಸತೀಶ ಹೆಗಡೆ, ಬಿಇಒ ನಾಗರಾಜ ನಾಯ್ಕ ಇತರರು ಇದ್ದರು.
Highlights - ಮೆರವಣಿಗೆಗೆ ಮೆರುಗು ನೀಡಿದ ಕಲಾ ತಂಡಗಳು ಜನಮನ ರಂಜಿಸಿದ ಬೆಂಗಳೂರಿನ ಕೋಳಿ ನೃತ್ಯ ಕದಂಬ ಜ್ಯೋತಿ ಪೂಜಿಸಿದ ಗಣ್ಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.