ADVERTISEMENT

ಶಿರಸಿ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಫೆ.11ಕ್ಕೆ

ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಶಾಸಕ ಭೀಮಣ್ಣ ನಾಯ್ಕ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 4:49 IST
Last Updated 27 ಜನವರಿ 2026, 4:49 IST
ಶಿರಸಿ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣವನ್ನು ಶಾಸಕ ಭೀಮಣ್ಣ ನಾಯ್ಕ ಬಿಡುಗಡೆ ಮಾಡಿದರು
ಶಿರಸಿ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣವನ್ನು ಶಾಸಕ ಭೀಮಣ್ಣ ನಾಯ್ಕ ಬಿಡುಗಡೆ ಮಾಡಿದರು   

ಶಿರಸಿ: ಕನ್ನಡ ಸಾಹಿತ್ಯ ಪರಿಷತ್ ಶಿರಸಿ ತಾಲ್ಲೂಕು ಘಟಕದ ವತಿಯಿಂದ ಶಿರಸಿ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಥೆಗಾರ ಡಿ.ಎಸ್.ನಾಯ್ಕಅಧ್ಯಕ್ಷತೆಯಲ್ಲಿ ಫೆ.11ರಂದು ನಗರದ ಬಣ್ಣದ ಮಠದಲ್ಲಿ ನಡೆಯಲಿದೆ.

ಸೋಮವಾರ ನಗರದ ಹೊಟೇಲ್ ಸುಪ್ರಿಯಾ ಇಂಟರ್ ನ್ಯಾಶನಲ್‍ನಲ್ಲಿ ಶಾಸಕ ಭೀಮಣ್ಣ ನಾಯ್ಕ ಸಮ್ಮೇಳನದ ಆಮಂತ್ರಣ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು,‘ಸಮ್ಮೇಳನವು ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆ ಪೂರಕವಾಗಿದೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮ್ಮೇಳನ ಯಶಸ್ಸುಗೊಳಿಸಬೇಕು’ ಎಂದರು. 

ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಮಾಹಿತಿ ನೀಡಿ, ‘ಅಂದು ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ, 9.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. 10 ಗಂಟೆಗೆ ಬಣ್ಣದ ಮಠದ ಶಿವಲಿಂಗ ಸ್ವಾಮೀಜಿ ಉದ್ಘಾಟಿಸುವರು. ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ ಆಶಯ ನುಡಿಗಳನ್ನಾಡುವರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಶಾಸಕ ಭೀಮಣ್ಣ ನಾಯ್ಕ ಪುಸ್ತಕ ಲೋಕಾರ್ಪಣೆ ಮಾಡುವರು. ದಿ.ಡಿ.ಎಂ.ಭಟ್ ಕುಳವೆ ದ್ವಾರವನ್ನು ಉಪವಿಭಾಗಾಧಿಕಾರಿ ಚಂದ್ರಶೇಖರ ಆರ್.ಜಿ. ಉದ್ಘಾಟಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ರಾಜೀವ ಅಜ್ಜೀಬಳ ಧ್ವಜ ಹಸ್ತಾಂತರ ಮಾಡುವರು’ ಎಂದು ತಿಳಿಸಿದರು. 

ADVERTISEMENT

‘12.30ರಿಂದ ಸಹಕಾರ ಕ್ಷೇತ್ರದ ಸವಾಲುಗಳ ಕುರಿತು ವಿಚಾರ ಗೋಷ್ಠಿ ನಡೆಯಲಿದೆ. 2.30ರಿಂದ ಸಾಹಿತಿ ವಾಸುದೇವ ಶಾನಭಾಗ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. 4 ಗಂಟೆಗೆ ನಡೆಯುವ ಸಮಾರೋಪದಲ್ಲಿ ಶಾಸಕ ಶಿವರಾಮ ಹೆಬ್ಬಾರ ಹಾಗೂ ಇತರರು ಪಾಲ್ಗೊಳ್ಳುವರು. ಇದೇ ವೇಳೆ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಜಿ.ಎಂ.ಹೆಗಡೆ ಮುಳಖಂಡ, ಕಲಾಕ್ಷೇತ್ರದಲ್ಲಿ ರೇಖಾ ಭಟ್ ನಾಡಗುಳಿ, ವೈದ್ಯಕೀಯ ಕ್ಷೇತ್ರದಿಂದ ಡಾ.ವೆಂಕಟರಮಣ ಹೆಗಡೆ, ಸಂಗೀತ ಕ್ಷೇತ್ರದಿಂದ ರೇಖಾ ದಿನೇಶ, ಸಹಕಾರ ಕ್ಷೇತ್ರದಿಂದ ಡಿ.ಎಸ್.ಹೆಗಡೆ ಶೇಡಿಕೊಡ್ಲು ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು’ ಎಂದರು.

‘6 ಗಂಟೆಯಿಂದ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ’ ಎಂದು ಹೇಳಿದರು. 

ಪರಿಷತ್ ಶಿರಸಿ ಘಟಕದ ಗೌರವ ಕಾರ್ಯದರ್ಶಿ ವಾಸುದೇವ ಶಾನಭಾಗ, ಸಂಘ ಸಂಸ್ಥೆ ಪ್ರತಿನಿಧಿ ಕೆ.ಎನ್.ಹೊಸ್ಮನಿ, ಕಾರ್ಯಕಾರಿಣಿ ಸದಸ್ಯರಾದ ಆರ್.ಡಿ.ಹೆಗಡೆ, ಕೃಷ್ಣ ಪದಕಿ, ರಾಜೇಶ ದೇಶಭಾಗ, ಜಗದೀಶ ಭಂಡಾರಿ,  ಪ್ರಮುಖರಾದ ಎಸ್.ಕೆ.ಭಾಗವತ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.