ADVERTISEMENT

ಶಿರಸಿ-ಕುಮಟಾ NH ವಿಸ್ತರಣೆ: ದೇವಿಮನೆ ಘಟ್ಟದಲ್ಲಿ ವೇಗ ಕಾಣದ ಕಾಮಗಾರಿ

ಮಳೆಗಾಲ ಪೂರ್ವ ರಸ್ತೆ ವಿಸ್ತರಣೆ ಅನುಮಾನ

ರಾಜೇಂದ್ರ ಹೆಗಡೆ
Published 24 ಏಪ್ರಿಲ್ 2025, 6:16 IST
Last Updated 24 ಏಪ್ರಿಲ್ 2025, 6:16 IST
ಶಿರಸಿ ಕುಮಟಾ ರಸ್ತೆ ದೇವಿಮನೆ ಘಟ್ಟದಲ್ಲಿ ನಿಧಾನ ಗತಿಯಲ್ಲಿ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿ 
ಶಿರಸಿ ಕುಮಟಾ ರಸ್ತೆ ದೇವಿಮನೆ ಘಟ್ಟದಲ್ಲಿ ನಿಧಾನ ಗತಿಯಲ್ಲಿ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿ    

ಶಿರಸಿ: ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ (766ಇ) ವಿಸ್ತರಣೆ ಹಾಗೂ ಸೇತುವೆಗಳ ನಿರ್ಮಾಣ ಕಾರ್ಯ ಈವರೆಗೆ ಪೂರ್ಣಗೊಳ್ಳಬೇಕಿತ್ತಾದರೂ  ದೇವಿಮನೆ ಘಟ್ಟ ಪ್ರದೇಶದ ರಸ್ತೆ ಕಾರ್ಯ ಅರ್ಧದಷ್ಟು  ಪೂರ್ಣಗೊಂಡಿಲ್ಲ. ಜತೆ ಸೇತುವೆ ನಿರ್ಮಾಣ ಕಾರ್ಯ ಇನ್ನೂ ಆಗಬೇಕಿದೆ. ಹೀಗಾಗಿ  ಮಳೆಗಾಲ ಪೂರ್ವ ಕಾಮಗಾರಿ ಮುಗಿಯುವುದು ಅನುಮಾನವಾಗಿದೆ. 

ಸಾಗರಮಾಲಾ ಯೋಜನೆಯಡಿ ಶಿರಸಿ ಕುಮಟಾ ರಸ್ತೆ ವಿಸ್ತರಣೆ ಕಾಮಗಾರಿ ವರ್ಷಗಳಿಂದ ನಡೆಯುತ್ತಿದೆ. ರಸ್ತೆ ವಿಸ್ತರಣೆ ಹಾಗೂ ಸೇತುವೆಗಳ ನಿರ್ಮಾಣಕ್ಕಾಗಿ 2024ರ ಡಿಸೆಂಬರ್ ತಿಂಗಳಿನಿಂದ ಈ ರಸ್ತೆಯಲ್ಲಿ ಬೃಹತ್ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಆದರೆ ಇನ್ನೂ ರಸ್ತೆ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ.

ಫೆಬ್ರುವರಿ ಅಂತ್ಯದ ವೇಳೆಗೆ ದೇವಿಮನೆ ಘಟ್ಟ ಪ್ರದೇಶದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದ ಗುತ್ತಿಗೆ ಕಂಪನಿ ಆರ್.ಎನ್.ಎಸ್. ಇನ್ಫ್ರಾಸ್ಟ್ರಕ್ಚರ್ ಇಂದಿಗೂ ಘಟ್ಟದಲ್ಲೇ ರಸ್ತೆ ಕಾಮಗಾರಿ ನಡೆಸುತ್ತಿದೆ. ಒಂದು ಪಾರ್ಶ್ವವನ್ನು ಮಾತ್ರ ಮುಗಿಸಿ ಈಗ ರಸ್ತೆಯ ಎರಡನೇ ಪಾರ್ಶ್ವ ನಿರ್ಮಾಣಕ್ಕೆ ಮುಂದಾಗಿದೆ. ಆದರೆ ಅಕಾಲಿಕವಾಗಿ ಸುರಿದ ಮಳೆ, ಕೂಲಿಕಾರ್ಮಿಕರ ಕೊರತೆ, ಯಂತ್ರಗಳು ಕೈಕೊಟ್ಟ ಕಾರಣ ನಿರೀಕ್ಷಿತ ವೇಗದಲ್ಲಿ ಕಾಮಗಾರಿ ನಡೆಯುತ್ತಿಲ್ಲ ಎಂಬ ಆರೋಪ  ಸಾರ್ವಜನಿಕರದ್ದು. 

ADVERTISEMENT

ದೇವಿಮನೆ ಘಟ್ಟದಲ್ಲಿ ಒಟ್ಟೂ 8 ಕಿ.ಮೀ. ಕಾಂಕ್ರೀಟ್ ರಸ್ತೆ ಆಗಬೇಕಿದ್ದು, ಈವರೆಗೆ ಶೇ 45-50ರಷ್ಟು ರಸ್ತೆ ಕಾಮಗಾರಿ ನಡೆದಿದೆ. ಈಗಾಗಲೇ 9 ಸೇತುವೆಗಳನ್ನು ಕೆಡವಿ ಪುನರ್ ನಿರ್ಮಾಣ ಕಾಮಗಾರಿ ನಡೆದಿದೆ. ಮಾರ್ಗದ ಚಂಡಮುರುಕನ ಹಳ್ಳ, ಮೊಸಳೆ ಗುಂಡಿ ಹಳ್ಳ, ಬೆಣ್ಣೆ ಹೊಳೆ ಸೇರಿದಂತೆ ಇನ್ನಷ್ಟು ಕಡೆಗಳಲ್ಲಿ ದೊಡ್ಡ ಹಳ್ಳಗಳಿಗೆ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದರೂ ವೇಗ ಸಾಲುತ್ತಿಲ್ಲ. ಕೆಲವು ಸೇತುವೆಗಳು ಸ್ಲ್ಯಾಬ್ ಹಂತದವರೆಗೆ ಬಂದಿದ್ದು, ಉಳಿದವುಗಳಿಗೆ ಇನ್ನೂ ಸ್ಲ್ಯಾಬ್ ಹಾಕಬೇಕಿದೆ. ಇವೆಲ್ಲ  ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಮೂರು ತಿಂಗಳಾದರೂ ಬೇಕು. ಹೀಗಾಗಿ ಈ ಬಾರಿ ಮಳೆಗಾಲದಲ್ಲಿ ಸಂಚಾರ ಸಮಸ್ಯೆ ಆಗುವ ಸಾಧ್ಯತೆಯಿದೆ' ಎಂಬುದು ಸ್ಥಳೀಯರಾದ ರಾಮಚಂದ್ರ ಹೆಗಡೆ ಮಾತು. 

ದೇವಿಮನೆ ಘಟ್ಟ ಪ್ರದೇಶದಲ್ಲಿ ರಸ್ತೆಯ ಒಂದು ಭಾಗದಲ್ಲಿ ಕಾಂಕ್ರೀಟ್ ಹಾಕಲಾಗುತ್ತಿದೆ. ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತದ ಆದೇಶವಿದ್ದರೂ ಈ ಮಾರ್ಗದಲ್ಲಿ ಕಾರ್ ಮತ್ತು ಜೀಪ್‌ಗಳ ಓಡಾಟ ಅವ್ಯಾಹತವಾಗಿಯೇ ನಡೆದಿದೆ. ಇಲ್ಲಿಯ ಹೆಗಡೆಕಟ್ಟಾ ಹಾಗೂ ಕುಮಟಾ ತಾಲ್ಲೂಕಿನ ಅಂತ್ರವಳ್ಳಿಯಲ್ಲಿ ಪೊಲೀಸ್ ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದರೂ ಅವುಗಳನ್ನು ಸುಲಭವಾಗಿ ದಾಟಿ ಈ ವಾಹನಗಳು ಬರುತ್ತಿವೆ. ದೇವಿಮನೆ ಘಟ್ಟ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಡೆದಿದ್ದರೂ ಪಕ್ಕದ ಮಣ್ಣಿನ ರಸ್ತೆಯಲ್ಲೇ ಈ ವಾಹನಗಳು ಸಾಗುತ್ತಿವೆ. ಇದರಿಂದಾಗಿ ಕಾಮಗಾರಿಗೂ ತೊಂದರೆ, ವಾಹನ ಸಂಚಾರವೂ ಅಭದ್ರತೆಯಾಗಿ ಪರಿಣಮಿಸಿದೆ ಎಂಬುದು ಗುತ್ತಿಗೆ ಕಂಪನಿ ಕಾರ್ಮಿಕರ ಮಾತು.

ಇನ್ನೇನು ಜೋರಾಗಿ ಒಮ್ಮೆ ಮಳೆ ಸುರಿದತೆ ಘಟ್ಟದಲ್ಲಿ ರಸ್ತೆ ಕಾಮಗಾರಿ ನಡೆಸುವುದು ಕಷ್ಟವಾಗುತ್ತದೆ. ಹೆಚ್ಚುವರಿ ಕೆಲಸಗಾರರು ಯಂತ್ರ ಬಳಸಿಕೊಂಡು ತಕ್ಷಣ ಕಾಮಗಾರಿ ಮುಗಿಸಲು ಗುತ್ತಿಗೆ ಕಂಪ‌ನಿ ಮುಂದಾಗಬೇಕು
ಮಂಜುನಾಥ ನಾಯ್ಕ ಸ್ಥಳೀಯ
ದೇವಿಮನೆ ಘಟ್ಟದಲ್ಲಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಶ್ರಮಿಸಲಾಗುತ್ತಿದೆ
ಗೋವಿಂದ ಭಟ್ ಗುತ್ತಿಗೆ ಕಂಪನಿ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.