ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುಡ್ಡ ಕುಸಿತದ ಅನೇಕ ಘಟನೆಗಳು ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೂಡಲೇ ರಾಷ್ಟ್ರೀಯ ಹೆದ್ದಾರಿ ಸಂಬಂಧಿತ ಅಧಿಕಾರಿಗಳೊಡನೆ ಸಮಾಲೋಚನೆ ನಡೆಸಿ ಮುನ್ನಚ್ಚರಿಕೆ ವಹಿಸಬೇಕು ಎಂದು ಕೆಪಿಸಿಸಿ ಸದಸ್ಯ ದೀಪಕ ದೊಡ್ಡೂರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಸ್ತೆ ನಿರ್ಮಾಣ ಗುತ್ತಿಗೆ ಕಂಪನಿಯ ಅವೈಜ್ಞಾನಿಕ ಕಾಮಗಾರಿ ಪರಿಣಾಮ, ರಾಷ್ಟ್ರೀಯ ಹೆದ್ದಾರಿ ಮೇಲೆ ಅದಕ್ಕೆ ಸಂಬಂಧಿಸಿ ಗುಡ್ಡಗಳ ಕುಸಿತ ನಿರಂತರವಾಗಿ ನಡೆಯುತ್ತಿದೆ. ಅವೈಜ್ಞಾನಿಕ ಕಾಮಗಾರಿ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಗುಡ್ಡ ಕುಸಿದು ಜನರ ಜೀವ ಹೋದ ಮೇಲೆ ಕೊಡುವ ಸರ್ಕಾರದ ಪರಿಹಾರದ ಧನ ತರಿಸಿ ಕೊಡುವುದರ ಬದಲು, ಈಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಜನರ ಜೀವಕ್ಕೆ ಗ್ಯಾರಂಟಿ ಕೊಡುವ ಕೆಲಸವನ್ನು ಸಂಸದರು ಮಾಡಬೇಕು ಎಂದಿದ್ದಾರೆ.
ಜಿಲ್ಲೆಯ ಕರಾವಳಿಯ ಮತ್ತು ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರದ ಹಲವು ಇಳಿಜಾರಾದ ಪ್ರದೇಶಗಳಲ್ಲಿ ಭೂಕುಸಿತದ ಸಾಧ್ಯತೆಗಳಿರುವುದನ್ನು ಜಿಯೊಲಾಜಿಕಲ್ ಸರ್ವೇ ಆಫ್ ಇಂಡಿಯಾ ಈಗಾಗಲೇ ಗುರುತಿಸಿದೆ. ಆ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು. ಭೂಕುಸಿತದ ಸಾಧ್ಯತೆಗಳಿರುವ ಹೆದ್ದಾರಿ ಹಾಗೂ ರಸ್ತೆಗಳಲ್ಲಿ ಸುಗಮವಾಗಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಸರಿಯಾದ ಪೂರ್ವಯೋಜಿತ ಕ್ರಮ ಕೈಗೊಂಡು ಸೂಕ್ತ ವ್ಯವಸ್ಥೆ ಮಾಡಬೇಕು.
ಭೂಕುಸಿತವಾಗಿ ಮನೆ ಹಾಗೂ ಕೃಷಿ ಭೂಮಿಯನ್ನು ಕಳೆದುಕೊಂಡ ಕುಟುಂಬಗಳಿಗೆ ಪುನರ್ವಸತಿ ಹಾಗೂ ಪರಿಹಾರ ಇನ್ನೂ ಸೂಕ್ತವಾಗಿ ತಲುಪಿಲ್ಲ. ಜಾಜಿಗುಡ್ಡೆ, ಕಳಚೆ ಗ್ರಾಮದಲ್ಲಿನ ಪುನರ್ವಸತಿ ಕೆಲಸಗಳು ಸರಿಯಾಗಿ ನಡೆಯಬೇಕು. ಈ ಕುರಿತು ಕ್ರಮವಹಿಸಲು ರಾಜ್ಯ ಸರ್ಕಾರದ ಜತೆ ಕೇಂದ್ರ ಸರ್ಕಾರ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಸಂಸದ ಕಾಗೇರಿ ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸಿದ್ದಾರೆ.
ಹೆದ್ದಾರಿಯಂಚಿನಲ್ಲಿ ಗುಡ್ಡಗಳನ್ನು ಕಡಿಯುವಾಗ ಕೈಗೊಳ್ಳಬೇಕಾದ ಸುರಕ್ಷಿತ ಕ್ರಮಗಳನ್ನು ಚಾಚು ತಪ್ಪದೇ ಪಾಲಿಸುವಂತೆ ಗುತ್ತಿಗೆದಾರರಿಗೆ ಕೇಂದ್ರ ಸರ್ಕಾರ ಸ್ಪಷ್ಟ ಆದೇಶ ನೀಡಬೇಕುದೀಪಕ ದೊಡ್ಡೂರು ಕೆಪಿಸಿಸಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.