ಶಿರಸಿ: ಬೀದಿ ಬದಿ ಹೆಚ್ಚುತ್ತಿರುವ ವ್ಯಾಪಾರಿಗಳಿಂದ ಮಳಿಗೆಗೆ ಬಾಡಿಗೆ ನೀಡಿ ವ್ಯವಹಾರದಲ್ಲಿ ತೊಡಗಿರುವ ವ್ಯಾಪಾರಿಗಳು ಬೀದಿಗೆ ಬರುವ ಸನ್ನಿವೇಶ ಸೃಷ್ಟಿಯಾಗಿದೆ. ಆದರೆ ಈ ಬಗ್ಗೆ ಕ್ರಮವಹಿಸಬೇಕಿದ್ದ ನಗರಾಡಳಿತ ಮಾತ್ರ ಮೌನಕ್ಕೆ ಜಾರಿದ್ದು, ಅಂಗಡಿಕಾರರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಬಿಡ್ಕಿ ಬಯಲು, ಶಿವಾಜಿಚೌಕ, ದೇವಿಕೆರೆ, ಕೋಟೆಕೆರೆ, ಪಂಡಿತ ಸಾರ್ವಜನಿಕ ಆಸ್ಪತ್ರೆ, ಟಿಎಸ್ಎಸ್ ರಸ್ತೆ, ಕೋರ್ಟ್ ರಸ್ತೆ ಸೇರಿ ಜನನಿಬಿಡ ಪ್ರದೇಶದ ರಸ್ತೆ ಅಕ್ಕಪಕ್ಕ ದಿನದಿಂದ ದಿನಕ್ಕೆ ಬೀದಿ ಬದಿ ವ್ಯಾಪಾರಿಗಳು ವಿವಿಧ ವಸ್ತುಗಳ ಮಾರಾಟದಲ್ಲಿ ತೊಡಗುತ್ತಿದ್ದಾರೆ. ಇದರಿಂದ ನಗರಸಭೆಗೆ ಮಾಸಿಕ ಬಾಡಿಗೆ ಸಂದಾಯ ಮಾಡುತ್ತಿರುವ ವ್ಯಾಪಾರಸ್ಥರಿಗೆ ವ್ಯಾಪಾರವಿಲ್ಲದೇ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ನಗರಾಡಳಿತದ ಬಾಗಿಲು ಬಡಿದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ ವ್ಯಾಪಾರಿ ವಲಯದಲ್ಲಿ ಆಕ್ರೋಶ ಮಡುಗಟ್ಟುತ್ತಿದೆ.
‘ನಗರಸಭೆ ವ್ಯಾಪ್ತಿಯ 200ಕ್ಕೂ ಹೆಚ್ಚು ಮಳಿಗೆಗಳನ್ನು ಬಾಡಿಗೆ ಆಧಾರದಲ್ಲಿ ವ್ಯಾಪಾರಿಗಳಿಗೆ ನೀಡಲಾಗಿದೆ. ಅವುಗಳಲ್ಲಿ ಬಟ್ಟೆ, ಹೊಟೆಲ್, ಹಣ್ಣು, ಹೂವು, ದಿನಸಿ ಸೇರಿದಂತೆ ವಿವಿಧ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ₹2 ಸಾವಿರದಿಂದ ₹6 ಸಾವಿರ ಮಾಸಿಕ ಬಾಡಿಗೆ ನೀಡುವ ಮಳಿಗೆಗಳಿವೆ. ಆದರೆ ಬೀದಿಬದಿ ವ್ಯಾಪಾರ ಮಾಡುವವರು ನಮ್ಮ ಅಂಗಡಿ ಆಸುಪಾಸು ವ್ಯವಹಾರದಲ್ಲಿ ತೊಡಗುತ್ತಿದ್ದು, ನಮಗೆ ವ್ಯಾಪಾರದಲ್ಲಿ ತೀವ್ರ ಕುಂಠಿತವಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ನಗರಸಭೆಗೆ ಬಾಡಿಗೆ ತುಂಬಲು ಕಷ್ಟವಾಗುವ ಸಂದರ್ಭ ಬಂದಿದೆ’ ಎನ್ನುತ್ತಾರೆ ಅಂಗಡಿಕಾರ ಪ್ರದೀಪ ನಾಯ್ಕ.
‘ನಗರದಲ್ಲಿ 300ಕ್ಕೂ ಹೆಚ್ಚು ಬೀದಿ ಬದಿ ಅಂಗಡಿಗಳಿವೆ. ಅವುಗಳಿಗೆ ದಿನಕ್ಕೆ ₹30 ಮಾತ್ರ ಬಾಡಿಗೆ ನಿಗದಿ ಮಾಡಲಾಗಿದೆ. ಹೀಗಾಗಿ ಅವರು ಕಡಿಮೆ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡುವುದರಿಂದ ಗ್ರಾಹಕರು ಅಲ್ಲಿಗೆ ತೆರಳುತ್ತಾರೆ. ಇದರಿಂದ ಬಾಡಿಗೆ ಅಂಗಡಿಕಾರರಿಗೆ ವ್ಯಾಪಾರವಿಲ್ಲದೇ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ನಗರಸಭೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ನಾವೂ ಬೀದಿ ಬದಿ ವ್ಯಾಪಾರ ಮಾಡಲು ಮುಂದಾಗಬೇಕಾಗುತ್ತದೆ’ ಎಂಬುದು ಬಹುತೇಕ ಅಂಗಡಿಕಾರರ ಮಾತಾಗಿದೆ.
ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಿ ಖಾಯಂ ಅಂಗಡಿಕಾರರಿಗೆ ಅನುಕೂಲ ಕಲ್ಪಿಸಬೇಕು.ನಾರಾಯಣ ನಾಯ್ಕ ಅಂಗಡಿಕಾರ
ಬೀದಿ ಬದಿ ವ್ಯಾಪಾರಿಗಳಿಂದ ಬಾಡಿಗೆ ಅಂಗಡಿಕಾರರಿಗೆ ಆಗುವ ಸಮಸ್ಯೆ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದು ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದುಎಚ್.ಕಾಂತರಾಜ್ ಪೌರಾಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.