ಶಿರಸಿ: ಬೇಸಿಗೆಯಲ್ಲೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಕುಂಠಿತಗೊಳ್ಳದಿರುವುದು ಹೈನುಗಾರರಲ್ಲಿ ಆಶಾಭಾವ ಮೂಡಿಸಿದೆ. ಆದರೆ, ಈ ಹೊತ್ತಿಗೆ ಪಶು ಆಹಾರದ ದರ ಇಳಿಸುತ್ತಿದ್ದ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ದರ ಇಳಿಕೆಗೆ ಮುಂದಾಗದಿರುವುದು ಚಿಂತೆ ತಂದಿದೆ.
ಜಿಲ್ಲೆಯಲ್ಲಿ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ 39,000 ಲೀಟರ್ ಹಾಲು ಉತ್ಪಾದನೆಯಿತ್ತು. ಈ ಬಾರಿ ಆ ಪ್ರಮಾಣ 49,700 ಲೀ.ಗೆ ಏರಿಕೆಯಾಗಿದೆ. ರಸಮೇವು ಬಳಕೆ ಹಾಗೂ ಹೈನೋದ್ಯಮದತ್ತ ಆಕರ್ಷಿತರಾದ ಕೂಲಿಕಾರ್ಮಿಕರೇ ಇದಕ್ಕೆ ಕಾರಣ ಎಂಬುದಾಗಿ ಅಂದಾಜಿಸಲಾಗಿದೆ.
ಜಿಲ್ಲೆಯಲ್ಲಿ 2,000 ಹೆಚ್ಚು ಹಾಲು ನೀಡುವ ಜಾನುವಾರುಗಳಿವೆ. ಕಳೆದ ವರ್ಷಗಳಲ್ಲಿ ಪಶು ಆಹಾರದ ದರ ಏರಿಕೆಯ ಕಾರಣ ಹಾಲಿನ ಇಳುವರಿ ಕುಸಿದಿತ್ತು. ಹೈನೋದ್ಯಮಕ್ಕೂ ಸಮಸ್ಯೆ ಆಗಿತ್ತು.
‘ಪಶು ಆಹಾರದ ಬೆಲೆ ಏರಿಕೆಯಾದರೂ ಹಿಂಡಿಯ ಬದಲು ಕಡಿಮೆ ದರಕ್ಕೆ ಸಿಗುವ ಜೋಳದ ದಂಟಿನಿಂದ ಮಾಡಿದ ರಸಮೇವು ಬಳಸಲಾಯಿತು. ಇದನ್ನು ಅನುಸರಿಸಿ ಉತ್ತಮ ಗುಣಮಟ್ಟ ಹಾಲು ಪಡೆಯಲು ಸಾಧ್ಯವಾಗಿದೆ’ ಎಂದು ಜಾನುವಾರು ಸಾಕಣೆದಾರರೊಬ್ಬರು ಹೇಳುತ್ತಾರೆ.
‘ರಸಮೇವು ಬಳಕೆಯಿಂದ ಶೇ 50ರಷ್ಟು ಪಶುಆಹಾರ (ಹಿಂಡಿ) ಬಳಕೆ ಕಡಿಮೆ ಮಾಡಬಹುದು. ಇದರಿಂದ ಹಾಲಿನ ಇಳುವರಿಯಾಗಲೀ, ಗುಣಮಟ್ಟವಾಗಲಿ ವ್ಯತ್ಯಾಸವಾಗದು. ಸಾವಿರಾರು ರೂಪಾಯಿಯ ಹಿಂಡಿ ಬಳಸುವ ಬದಲು ಕೆ.ಜಿಗೆ ₹7.09ಕ್ಕೆ ಸಿಗುವ ರಸಮೇವು ಬಳಕೆಯೇ ಉತ್ತಮ’ ಎನ್ನುತ್ತಾರೆ ಹೈನುಗಾರ ರಾಜೇಶ ನಾಯ್ಕ.
‘ಕೂಲಿಗೆ ಹೋಗುತ್ತಿದ್ದ ಹಳಿಯಾಳ, ಮುಂಡಗೋಡ, ದಾಸನಕೊಪ್ಪ, ಬನವಾಸಿ ಭಾಗದ ಸಣ್ಣ ಹಿಡುವಳಿದಾರರು ಹಾಗೂ ಅರಣ್ಯ ಅತಿಕ್ರಮಣದಾರರಿಗೆ ಹೈನೋದ್ಯಮದತ್ತ ಆಸಕ್ತಿ ಮೂಡಿಸಲಾಗಿತ್ತು. ಬಹುತೇಕರು 2–3 ಜಾನುವಾರು ಕಟ್ಟಿಕೊಂಡಿದ್ದಾರೆ. ಈ ಹೈನುಗಾರರಿಂದ 5,000 ಲೀಟರ್‌ಗೂ ಹೆಚ್ಚಿನ ಪ್ರಮಾಣದಲ್ಲಿ ನಿತ್ಯ ಹಾಲು ಸಂಗ್ರಹಣೆ ಆಗುತ್ತಿದೆ. ಸ್ವತಃ ದಡ್ಡಿ ಗೊಬ್ಬರ ತಯಾರಿಸಿ, ಮಾರಾಟ ಮಾಡಿ ಆದಾಯ ಪಡೆಯುತ್ತಿದ್ದಾರೆ. ಆದಾಯಕ್ಕಾಗಿ ಗುಳೆ ಹೋಗುವುದೂ ತಪ್ಪಿದೆ’ ಎನ್ನುತ್ತಾರೆ ಧಾಮುಲ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ.
ಜಿಲ್ಲೆಯಲ್ಲಿ ರಸಮೇವು ಬಳಕೆಗೆ ಹೈನುಗಾರರ ಒಲವಿದೆ. ಸದ್ಯ 60 ಟನ್ ಬೇಡಿಕೆಯಿದ್ದುರಸಮೇವಿಗೆ ಒತ್ತು ನೀಡಿದರೆ ಹಿಂಡಿ ಬಳಕೆ ಪ್ರಮಾಣ ತಗ್ಗಿಸಬಹುದುಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಧಾಮುಲ್ ನಿರ್ದೇಶಕ
ದರ ಇಳಿಕೆಗೆ ಆಗ್ರಹ
‘ಪ್ರತಿ ವರ್ಷ ಫೆಬ್ರುವರಿ ತಿಂಗಳಲ್ಲಿ ಪಶು ಆಹಾರ ಬೆಲೆಯನ್ನು ಕೆಎಂಎಫ್ ಪರಿಷ್ಕರಣೆ ಮಾಡಬೇಕು. ಆದರೆ 2024ರಿಂದ ಪಶು ಆಹಾರ ದರ ಪರಿಷ್ಕರಣೆ ಮಾಡದೇ ಒಂದೇ ದರ ಮುಂದುವರಿಸಿರುವ ಕಾರಣ ಅದರ ನೇರ ಪರಿಣಾಮ ಹಾಲು ಉತ್ಪಾದಕರ ಮೇಲಾಗುತ್ತಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಫೆಬ್ರುವರಿಯಿಂದ ಜೂನ್‌ವರೆಗೂ ಹಾಲು ಉತ್ಪಾದನೆ ಕುಸಿತ ಕಾಣುತ್ತದೆ. ಲಾಭದಲ್ಲಿರುವ ಕೆಎಂಎಫ್ ತಕ್ಷಣ ಪಶು ಆಹಾರದ ದರ ಕಡಿಮೆ ಮಾಡುವ ಅಗತ್ಯವಿದೆ’ ಎಂಬುದು ಹೈನುಗಾರರ ಆಗ್ರಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.