ADVERTISEMENT

ಹಲವು ಪ್ರಕರಣಗಳ ಆರೋಪಿ ಬಂಧನ: ಕೋರ್ಟ್‍ಗೆ ಹಾಜರು

ಈತನಿಗಾಗಿ ಕೇಂದ್ರ ತನಿಖಾ ತಂಡಗಳಿಂದ ನಡೆದಿದ್ದ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 14:03 IST
Last Updated 28 ಏಪ್ರಿಲ್ 2025, 14:03 IST
ಮೌಸಿನ್ (ಇಮ್ತಿಯಾಜ್) ಅಬ್ದುಲ್ ಶೂಕುರ ಹೊನ್ನಾವರ
ಮೌಸಿನ್ (ಇಮ್ತಿಯಾಜ್) ಅಬ್ದುಲ್ ಶೂಕುರ ಹೊನ್ನಾವರ   

ಶಿರಸಿ: ಬೆಂಗಳೂರಿನ ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿ, ನಿಷೇಧಿತ ಪಿಎಫ್ಐ ಸಂಘಟನೆ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷನಾಗಿದ್ದ ಇಲ್ಲಿನ ಟಿಪ್ಪೂ ನಗರದ ಮೌಸಿನ್ (ಇಮ್ತಿಯಾಜ್) ಅಬ್ದುಲ್ ಶೂಕುರ ಹೊನ್ನಾವರ (35)ನನ್ನು ಬಂಧಿಸಿ ಕೋರ್ಟ್‍ಗೆ ಹಾಜರುಪಡಿಸುವ ಜತೆ ಈತನ ರಕ್ಷಣೆಗೆ ನೆರವಾದ ಆರೋಪದ ಮೇಲೆ ಕುಟುಂಬದ ಐದು ಸದಸ್ಯರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಎಂ.ನಾರಾಯಣ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಪಿಎಫ್ಐ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಮೌಸಿನ್ ಹಲವಾರು ಜನರಿಗೆ ಪಿಎಫ್ಐಗೆ ಸೇರುವಲ್ಲಿ ತರಬೇತಿ ನೀಡಿದ್ದು, ಎನ್ಐಎ ಸೇರಿದಂತೆ ಕೇಂದ್ರ ಸರ್ಕಾರದ ತನಿಖಾ ತಂಡಗಳು ಈತನ ಹುಡುಕಾಟ ನಡೆಸಿದ್ದರು. ಹಲವು ಪ್ರಕರಣಗಳ ಆರೋಪಿಯಾಗಿರುವ ಈತ  2019ರಿಂದ ತಲೆ ಮರೆಸಿಕೊಂಡಿದ್ದ. ಅಲ್ಲಿಂದಾಚೆಗೆ ಯಾರೊಂದಿಗೂ ಮೊಬೈಲ್ ಸಂಪರ್ಕ ಮಾಡದ ಆರೋಪಿಯನ್ನು ಶನಿವಾರ  ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆತ ತನ್ನ ಕುಟುಂಬದವರೊಂದಿಗೆ ಹೈದರಾಬಾದ್‌ಗೆ ಹೋಗಿ ಅಲ್ಲಿಂದ ವಾಪಸ್ ಬರುತ್ತಿರುವ ಸಂದರ್ಭದಲ್ಲಿ ಸಿಂದಗಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದರು.

‘ಆರೋಪಿ ಮನೆ ಮೇಲೆ ಈ ಹಿಂದೆ ಎನ್‍ಐಎ ದಾಳಿ ಮಾಡಿದ ವಿಷಯ ತಿಳಿದು ಮುಖ್ಯ ಆರೋಪಿ ತಲೆಮರೆಸಿಕೊಳ್ಳಲು ಸಹಕಾರ ನೀಡಿದ ಹಾಗೂ ನಂತರದ ದಿನಗಳಲ್ಲಿ ನಿರಂತರ ಒಡನಾಟಹೊಂದಿದ್ದ ಆರೋಪಿ ಕುಟುಂಬದ ಸದಸ್ಯರಾದ ರಿಹಾ‌ನಾ ಅಬ್ದುಲ್ ಶೂಕೂರ (55), ಅಬ್ದುಲ್ ಹಜೀಜ್ ಅಬ್ದುಲ್ ಶೂಕೂರ (38), ಇಜಾಜ್ ಅಬ್ದುಲ್‌ ಶುಕೂರ (33), ಅಬ್ದುಲ್ ರಜಾಕ್ ಅಬ್ದುಲ್ ಶೂಕೂರ (32), ಮಹಮದ್ ಸುಹೇಲ್ ಕರಿಂಸಾಬ ಶೇಖ (32) ವಿರುದ್ಧ ದೂರು ದಾಖಲಿಸಲಾಗಿದೆ.

ADVERTISEMENT

ಈ‌ ಮಧ್ಯೆ‌ ಮೌಸಿನ್ ಐದು ವರ್ಷದಲ್ಲಿ ಐದು ಮಕ್ಕಳ‌ ತಂದೆಯಾಗಿದ್ದು, ಹಲವು ಪ್ರಕರಣಗಳ ಆರೋಪಿ‌ ಎಂದು ಗೊತ್ತಿದ್ದೂ ಕುಟುಂಬಸ್ಥರು ಮನೆಯಲ್ಲಿ ಆಶ್ರಯ ನೀಡುವ ಜತೆ ಹಲವು ಬಾರಿ ಪೊಲೀಸರಿಗೆ ದಾರಿ ತಪ್ಪುಸುವ ಕೆಲಸ ಮಾಡಿದ್ದ ಕಾರಣ ಐದು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.

ಈ ವೇಳೆ ಡಿಎಸ್ ಪಿ ಗಣೇಶ ಕೆ.ಎಲ್, ಸಿಪಿಐಗಳಾದ ಶಶಿಕಾಂತ ವರ್ಮಾ, ಮಂಜುನಾಥ ಗೌಡ, ಪಿಎಸ್ಐಗಳಾದ ರಾಜಕುಮಾರ ಉಕ್ಕಲಿ, ರತ್ನ ಕುರಿ, ನಾಗಪ್ಪ ಬಿ, ಮಹಂತೇಶ ಕಂಬಾರ  ಇದ್ದರು.

ಶಿರಸಿಯ ಕೋರ್ಟ್‍ಗೆ ಮೌಸಿನ್ (ಇಮ್ತಿಯಾಜ್) ಅಬ್ದುಲ್ ಶೂಕುರ ಹೊನ್ನಾವರ ಹಾಜರು ಪಡಿಸಿದ ಸಂದರ್ಭ

ನ್ಯಾಯಾಲಯಕ್ಕೆ ಹಾಜರು

ಶಿರಸಿಯಲ್ಲಿ ನಡೆದ ಕೊಲೆ ಪ್ರಕರಣವೊಂದರ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಮೌಸಿನ್ (ಇಮ್ತಿಯಾಜ್) ಅಬ್ದುಲ್ ಶೂಕುರ ಹೊನ್ನಾವರ ಹಾಗೂ ಈತನಿಗೆ ರಕ್ಷಣೆ ನೀಡಿದ  ಕುಟುಂಬ ಐದು ಸದಸ್ಯರನ್ನು ಪೊಲೀಸರು ಸೋಮವಾರ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.