ಶಿರಸಿ: ನಗರಸಭೆ ಮಾಲೀಕತ್ವದ ಕೋಣನಬಿಡಕಿ ಸೇರಿದಂತೆ ಶಿವಾಜಿಚೌಕ ಪ್ರದೇಶದಲ್ಲಿ ‘ಶುಲ್ಕ ಸಹಿತ ವಾಹನ ನಿಲುಗಡೆ’ ವ್ಯವಸ್ಥೆ ಜಾರಿಗೆ ನಗರಾಡಳಿತ ಮುಂದಡಿ ಇಟ್ಟಿದೆ.
ನಗರದ ಹಳೆಯ ಬಸ್‌ನಿಲ್ದಾಣ ನಿರ್ಮಾಣದ ವೇಳೆ ತಾತ್ಕಾಲಿಕ ಬಸ್ ನಿಲುಗಡೆ ತಾಣವಾಗಿದ್ದ ಕೋಣನಬಿಡಕಿ ಪ್ರದೇಶ, ಸದ್ಯ ಬಸ್ ಹಾಗೂ ಇತರೆ ವಾಹನಗಳ ಸಂಚಾರ, ನಿಲುಗಡೆಯ ಪ್ರದೇಶವಾಗಿ ಮಾರ್ಪಟ್ಟಿದೆ. ಮಾರುಕಟ್ಟೆ ಸಮೀಪದ ಈ ಜಾಗ ವಾಹನ ದಟ್ಟಣೆಯಿಂದ ಕೂಡಿದೆ. ಹಾಗಾಗಿ, ಈ ಪ್ರದೇಶದಲ್ಲಿ ಶುಲ್ಕ ಸಹಿತ ವಾಹನ ನಿಲುಗಡೆ ವ್ಯವಸ್ಥೆ ಜಾರಿಗೆ ತರಲು ನಗರಸಭೆ ಮುಂದಾಗಿದೆ.
‘ಪ್ರತಿ ಎರಡು ವರ್ಷಕ್ಕೊಮ್ಮೆ ಮಾರಿಕಾಂಬಾ ಜಾತ್ರೆ ನಡೆಯುವ ವೇಳೆ ಕೋಣನಬಿಡಕಿ ಜಾಗವನ್ನು ಬಾಡಿಗೆ ನೀಡಲಾಗುತ್ತದೆ. ಹೀಗಾಗಿ, ಶಾಶ್ವತ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ದ್ವಿಚಕ್ರ ವಾಹನ ಸವಾರರಿಗೆ ಶುಲ್ಕ ಸಹಿತ ವಾಹನ ನಿಲುಗಡೆಗೆ ಅವಕಾಶ ನೀಡಿದರೆ, ನಗರಸಭೆಗೆ ಸಾಕಷ್ಟು ಆದಾಯ ಸಿಗುತ್ತದೆ. ಇದರಿಂದ ಮಾರುಕಟ್ಟೆ ವ್ಯಾಪ್ತಿಯಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆಗೂ ತಡೆ ಬೀಳಲಿದೆ’ ಎನ್ನುತ್ತಾರೆ ಕಂದಾಯ ನಿರೀಕ್ಷಕ ಆರ್.ಎಂ. ವೇರ್ಣೇಕರ್.
‘ಕೋಣನಬಿಡಕಿ ಮಾತ್ರವಲ್ಲದೇ ಶಿವಾಜಿಚೌಕದಲ್ಲೂ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸಲಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಆ ಜಾಗದಲ್ಲೂ ಶಿಸ್ತು ತರುವ ಜತೆಗೆ, ಆದಾಯದ ಉದ್ದೇಶದಿಂದ ಶುಲ್ಕ ಸಹಿತ ವಾಹನ ನಿಲುಗಡೆ ವ್ಯವಸ್ಥೆ ಅನುಷ್ಠಾನಕ್ಕೆ ಸಿದ್ಧತೆ ನಡೆಸಲಾಗಿದೆ. ಪ್ರಸ್ತುತ ಸಂಚಾರ ಪೊಲೀಸ್ ವ್ಯವಸ್ಥೆ ಶಿರಸಿಯಲ್ಲಿ ಜಾರಿಯಲ್ಲಿದ್ದು, ನಗರಾಡಳಿತದ ಯೋಜನೆ ಅನುಷ್ಠಾನಕ್ಕೆ ಪೂರಕವಾಗಿದೆ’ ಎನ್ನುತ್ತಾರೆ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ.
‘ವಾಹನ ಸವಾರರಿಗೆ ಅನುಕೂಲ’ ‘
ಬಸ್‌ನಿಲ್ದಾಣ ನಿರ್ಮಾಣದ ಮೇಳೆ ಕೋಣನಬಿಡಕಿ ಜಾಗವನ್ನೂಕೊಡುವಂತೆ ಒತ್ತಡವಿತ್ತು. ಆದರೆ ನಗರಸಭೆಯು ಆಸ್ತಿ ಪರಭಾರೆ ಮಾಡಿಲ್ಲ. ಈ ಹಿಂದೆ ಹಲವು ಅಂಗಡಿಕಾರರಿಗೆ ಜಾಗವನ್ನು ಬಾಡಿಗೆ ನೀಡಲಾಗುತ್ತಿತ್ತು. ಇಲ್ಲಿನ ಪ್ರದೇಶ ಬಸ್‌ಸಂಚಾರಕ್ಕೆ ಬಳಕೆಯಾದಂದಿನಿಂದ ಕೆಲವೇ ಅಂಗಡಿಕಾರರಿಗೆ ಅಲ್ಲಿ ಜಾಗ ನೀಡಲಾಗಿದೆ. ಇದರಿಂದ ನಗರಸಭೆಗೂ ಆದಾಯ ನಷ್ಟವಾಗುತ್ತಿದೆ’ ಎಂದು ಕಂದಾಯ ನಿರೀಕ್ಷಕ ಆರ್.ಎಂ. ವೇರ್ಣೇಕರ್ ಹೇಳಿದರು. ‘ಕೋಣನಬಿಡಕಿಯಲ್ಲಿ 250ಕ್ಕೂ ಹೆಚ್ಚು ದ್ವಿಚಕ್ರ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲು ಅವಕಾಶವಿದೆ. ಗಂಟೆ ಇಲ್ಲವೇ ದಿನಕ್ಕೆ ದರ ನಿಗದಿ ಮಾಡಿ ಜಾಗ ನೀಡಲಾಗುವುದು. ನಿತ್ಯ ಈ ಭಾಗದಲ್ಲಿ ನೂರಾರು ವಾಹನ ಸವಾರರು ವಾಹನಗಳನ್ನು ನಿಲ್ಲಿಸಿ ಹೊರ ಊರುಗಳಿಗೆ ತೆರಳುತ್ತಾರೆ. ಅಂಥವರಿಗೆ ಈ ವ್ಯವಸ್ಥೆಯಿಂದ ಅನುಕೂಲ ಆಗಲಿದೆ. ಮಾರಿಕಾಂಬಾ ಜಾತ್ರೆ ಸಂದರ್ಭದಲ್ಲಿ ಮಾತ್ರ ಇತರೆ ಚಟುವಟಿಕೆಗೆ ಇಲ್ಲಿ ಅನುಕೂಲ ಕೊಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.