ಶಿರಸಿ: ಶೈಕ್ಷಣಿಕ ಜಿಲ್ಲೆಯ ನೂರಾರು ಸರ್ಕಾರಿ ಶಾಲೆಗಳ ಸುತ್ತ ಸೂಕ್ತ ಆವರಣ ಗೋಡೆ (ಕಾಂಪೌಂಡ್) ಇಲ್ಲ. ಹೀಗಾಗಿ ಮಕ್ಕಳ ಸುರಕ್ಷತೆಯ ಜತೆಗೆ ಶಾಲೆ ಆಸ್ತಿ ಬಗ್ಗೆ ಶಾಲಾ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಸದಾ ಜಾಗೃತರಾಗಿ ಇರಬೇಕಿದೆ.
ಶೈಕ್ಷಣಿಕ ಜಿಲ್ಲೆಯ 6 ತಾಲ್ಲೂಕುಗಳಲ್ಲಿ 1,183 ಸರ್ಕಾರಿ ಶಾಲೆಗಳಿವೆ. ನೂರಾರು ಶಾಲೆಗಳಿಗೆ ಭಾಗಶಃ ಆವರಣ ಗೋಡೆ ನಿರ್ಮಿಸಲಾಗಿದೆ. ಬೆರಳೆಣಿಕೆ ಶಾಲೆಗಳಲ್ಲಿ ಆವರಣ ಗೋಡೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 25ಕ್ಕೂ ಹೆಚ್ಚು ಶಾಲೆಗಳ ಆವರಣ ಗೋಡೆಗಳು ಕುಸಿದಿವೆ ಅಥವಾ ಮುರಿದಿವೆ. ಶಾಲೆಯ ಸುತ್ತಲೂ ಆವರಣ ಗೋಡೆಗಳಿಲ್ಲದ ಕಾರಣ ಹಂದಿಗಳು, ಜಾನುವಾರುಗಳು ಶಾಲೆಯ ಆವರಣವನ್ನು ಹಾಳು ಮಾಡುತ್ತಿವೆ. ಅಲ್ಲದೇ, ಅನೇಕ ಕಡೆ ನಿರ್ಜನ ಪ್ರದೇಶಗಳಲ್ಲಿರುವ ಶಾಲೆಗಳ ಆವರಣವು ರಾತ್ರಿ ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿವೆ’ ಎಂಬುದು ಶಿಕ್ಷಕರ ಆರೋಪವಾಗಿದೆ.
‘ಹಲವು ಶಾಲೆಯ ಮುಂಭಾಗದಲ್ಲಿ ಮಾತ್ರ ಗೋಡೆಗಳಿದ್ದು, ಉಳಿದ ಮೂರು ದಿಕ್ಕುಗಳು ತೆರೆದುಕೊಂಡಿವೆ. ಹೀಗಾಗಿ ಮಕ್ಕಳ ಸುರಕ್ಷತೆ ಸವಾಲಾಗಿದೆ. ನಗರದಲ್ಲಿ ಹೆಚ್ಚಿನ ಸಮಸ್ಯೆ ಇಲ್ಲದಿದ್ದರೂ ಗ್ರಾಮೀಣ ಭಾಗದಲ್ಲಿ ಆವರಣ ಗೋಡೆಗಳಿಲ್ಲದೇ ಸಾಕಷ್ಟು ತೊಂದರೆ ಆಗುತ್ತಿದೆ. ಸೂಕ್ತ ಗೋಡೆಗಳಿದ್ದರೆ ಶಾಲೆಯ ಜಾಗ ಅತಿಕ್ರಮಣವನ್ನೂ ತಪ್ಪಿಸಬಹುದು’ ಎಂಬುದು ಶಿಕ್ಷಕ ವಲಯದ ಮಾತಾಗಿದೆ.
‘ಕೆಲವು ಶಾಲೆಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಆವರಣ ಗೋಡೆ ಕಟ್ಟಿಸಿಕೊಡಲಾಗಿದೆ. ಇನ್ನೂ ಕೆಲವು ಶಾಲೆಗಳಲ್ಲಿ ಪ್ರಸ್ತಾವ ಸಲ್ಲಿಸಿ ಹಲವು ವರ್ಷಗಳಿಂದ ಅನುದಾನಕ್ಕಾಗಿ ಕಾಯುತ್ತಿದ್ದಾರೆ. ಕೆಲವೆಡೆ ಅನುದಾನ ಮಂಜೂರಾಗಿದ್ದರೂ ಕಾಮಗಾರಿ ಮಾತ್ರ ನಿಂತ ನೀರಾಗಿದೆ’ ಎಂಬುದು ಪಾಲಕರ ದೂರಾಗಿದೆ.
‘ಶಾಲೆಯ ಒಂದು ಕಡೆ ಆವರಣ ಇರುವ ಬದಲು ಸುತ್ತಲೂ ಆವರಣ ಗೋಡೆಗಳಿದ್ದಲ್ಲಿ ಗೇಟಿಗೆ ಬೀಗ ಹಾಕಿ ಶಾಲೆಯನ್ನು, ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದಾಗಿದೆ. ಹಾಗಾಗಿ ಆವರಣ ಗೋಡೆ ನಿರ್ಮಿಸುವ ಸಲುವಾಗಿಯೇ ಪ್ರತ್ಯೇಕ ಅನುದಾನ ಕೊಡಬೇಕು’ ಎಂಬುದು ಶಾಲಾಭಿವೃದ್ಧಿ ಸಮಿತಿ ಪ್ರಮುಖರ ಆಗ್ರಹ.
‘ಶಾಲೆಗಳ ಸುರಕ್ಷತೆಯ ದೃಷ್ಟಿಯಿಂದ ಆವರಣ ಗೋಡೆಯ ಅಗತ್ಯತೆಯ ಕುರಿತು ಅನೇಕ ಬಾರಿ ಅಭಿವೃದ್ಧಿ ಪರಿಶೀಲನಾ ಸಭೆಗಳಲ್ಲಿ ವರದಿ ನೀಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಆದ್ಯತೆಯ ಮೇರೆಗೆ ಶಾಲೆಗಳಿಗೆ ಆವರಣ ಗೋಡೆ ನಿರ್ಮಿಸಲಾಗುತ್ತಿದೆ’ ಎಂಬುದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರ ಮಾಹಿತಿ.
ಪಾಲಕರ ಸಹಾಯದಿಂದ ಸ್ವಚ್ಛತೆ ಇತ್ತೀಚೆಗೆ ಕಾಂಪೌಂಡ್ ಇಲ್ಲದ ನಗರ ಸಮೀಪದ ಶಾಲೆಯೊಳಗೆ ಸಾಕು ಹಂದಿಗಳ ಗುಂಪು ಏಕಾಏಕಿ ಪ್ರವೇಶಿಸಿತ್ತು. ಮಕ್ಕಳ ಗಲಾಟೆಗೆ ಹೆದರಿ ಓಡಿ ಹೋದ ಉದಾಹರಣೆ ಇದೆ. ಅಲ್ಲದೇ ಕಾಂಪೌಂಡ್ ಇಲ್ಲದ ಕಾರಣ ಹಂದಿ ದನಗಳು ಶಾಲೆಯ ಬಳಿ ಬಂದು ಗಲೀಜು ಮಾಡುತ್ತವೆ. ಭಾನುವಾರದ ರಜೆಯ ಮಾರನೇ ದಿನವಂತೂ ಶಾಲಾ ಆವರಣ ಮೈದಾನವನ್ನು ತೊಳೆದು ಸ್ವಚ್ಛಗೊಳಿಸುವುದೇ ಸವಾಲಿನಂತಾಗುತ್ತದೆ. ಕೆಲವು ಕಡೆ ಪಾಲಕರ ಸಹಕಾರ ಪಡೆದು ಸ್ವಚ್ಛತೆ ಮಾಡುತ್ತೇವೆ. ಶಾಲೆಯ ಸುತ್ತ ಗೋಡೆಯಿದ್ದರೆ ಇಂಥ ಸಮಸ್ಯೆಗೆ ಆಸ್ಪದ ಇರುವುದಿಲ್ಲ ಎಂಬುದು ಶಿಕ್ಷಕ ವರ್ಗದ ಮಾತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.