ಶಿರಸಿ: ದಶಕಗಳಿಂದ ಮಳೆ ನೀರು ಸೋರಿಕೆಯಾಗುತ್ತಿದ್ದ ಬನವಾಸಿಯ ಮಧುಕೇಶ್ವರ ದೇವಾಲಯದ ಮೇಲ್ಭಾಗವನ್ನು ಬೇಸಿಗೆ ಕಾಲದಲ್ಲಿ ದುರಸ್ತಿ ಕಾರ್ಯ ನಡೆಸಿದ್ದ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಯು ಮಳೆ ಆರಂಭದೊಂದಿಗೆ ಮತ್ತೆ ಸೋರುವ ದೇವಾಲಯಕ್ಕೆ ತಾಡಪತ್ರಿ ಹೊದಿಸುವ ಕೆಲಸ ಮಾಡಿದೆ. ಇದು ದೇವಾಲಯದ ಸೌಂದರ್ಯವನ್ನು ಮರೆಮಾಡಿದೆ.
ಮಧುಕೇಶ್ವರ ದೇವಾಲಯದಲ್ಲಿ ಹಲವು ವರ್ಷಗಳಿಂದ ಮಳೆಗಾಲದಲ್ಲಿ ನೀರು ಹನಿಯುತ್ತಲೇ ಇದೆ. ಗರ್ಭಗುಡಿ, ನಂದಿ ಮಂಟಪ, ಸಂಕಲ್ಪ ಮಂಟಪ, ಘಂಟೆ ಮಂಟಪ ಮತ್ತು ದೇವಾಲಯದ ಇತರ ಸ್ಥಳಗಳಲ್ಲಿನ ಸೀಲಿಂಗ್ ಪ್ಲಾಸ್ಟರ್ ಕಳಚಿ ನೀರು ಒಳಗೆ ಬರುತ್ತಿದೆ. ಮಳೆ ಬಿಸಿಲಿನ ಘಾಸಿಗೊಳಗಾಗಿ ನವೆದಿದ್ದ ಈ ಶಿಲಾದೇಗುಲ 1970ರ ದಶಕದಲ್ಲಿ ಮೊದಲ ಬಾರಿಗೆ ಸೋರಲು ಆರಂಭವಾಗಿತ್ತು. ಆ ಸಂದರ್ಭದಲ್ಲಿ ಪುರಾತತ್ವ ಇಲಾಖೆ ದೇವಸ್ಥಾನದ ರಿಪೇರಿ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಆ ಸಂದರ್ಭದಲ್ಲಿ ಮಧುಕೇಶ್ವರನ ದೇವಾಲಯದ ಮೇಲ್ಚಾವಣಿಯ ಗಾರೆ ಲೇಪ ತೆಗೆದು ರಾಸಾಯನಿಕ ಲೇಪವನ್ನು ಬಳಿದಿತ್ತೆನ್ನಲಾಗಿದೆ. ನಂತರವೂ ಕೆಲ ಬಾರಿ ದುರಸ್ತಿ ನಡೆದಿದೆ. ಆದರೂ ಇಂದಿನವರೆಗೆ ದೇವಾಲಯ ಸೋರುವ ಪ್ರಕರಣ ಪುನರಾವರ್ತಿತವಾಗುತ್ತಿದೆ.
2023ರಲ್ಲಿ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಯ ಹಾವೇರಿ ವಿಭಾಗದ ಸಿಬ್ಬಂದಿ ದೇವಾಲಯದ ಗರ್ಭ ಗುಡಿಗೆ ತಾತ್ಕಾಲಿಕವಾಗಿ ತಾಡಪತ್ರಿ ಅಳವಡಿಸಿದ್ದರು. ಸೋರಿಕೆ ಪ್ರಮಾಣ ನಿಲ್ಲದ ಕಾರಣ ದೇವಾಲಯದ ಆಡಳಿತ ಮಂಡಳಿಯು ದೇವಾಲಯದ ಶಾಶ್ವತ ದುರಸ್ತಿಗಾಗಿ ಪುರಾತತ್ವ ಇಲಾಖೆಗೆ ಹಲವಾರು ಪತ್ರಗಳನ್ನು ಬರೆದಿತ್ತು. ಕಾರಣ ಕಳೆದ ಬೇಸಿಗೆಯಲ್ಲಿ ಚಿಕ್ಕಪುಟ್ಟ ದುರಸ್ತಿ ಕಾರ್ಯ ಮಾಡಲಾಗಿದ್ದರೂ ಸೋರಿಕೆ ಮಾತ್ರ ನಿಂತಿಲ್ಲ. ಹೀಗಾಗಿ ದೇವಾಲಯದ ಮೇಲ್ಛಾವಣಿಗೆ ಮತ್ತೆ ಕಪ್ಪು ಬಣ್ಣದ ತಾಡಪತ್ರಿಯನ್ನು ಇಲಾಖೆ ಮುಚ್ಚಿದ್ದು, ಸುಂದರ ಶಿಲಾ ಕೆತ್ತನೆಗಳಿಗೆ ಹೆಸರುವಾಸಿಯಾದ ಮಧುಕೇಶ್ವರ ದೇವಾಲಯದ ಸೌಂದರ್ಯ ಮಾಯವಾಗಿದೆ ಎಂಬುದು ಸ್ಥಳಿಕರ ದೂರು.
‘ಇಲಾಖೆಯವರು ಬೇಸಿಗೆಯಲ್ಲಿ ತಾತ್ಕಾಲಿಕ ಕೆಲಸ ಮಾಡಿದ್ದಾಗಿ ತಿಳಿಸಿದ್ದಾರೆ. ಆದರೆ ಅದು ಪರಿಪೂರ್ಣವಾದಂತೆ ಇಲ್ಲ. ದುರಸ್ತಿ ಆದಾಗ ಸೋರಿಕೆ ನಿಲ್ಲುವುದೆಂಬ ಭಾವನೆಯಿತ್ತಾದರೂ ಮಳೆಗಾಲದೊಂದಿಗೆ ಅದು ಸುಳ್ಳಾಗಿದೆ. ತಾಡಪತ್ರಿ ಹೊದೆಸಿರುವ ಕಾರಣ ಅಷ್ಟು ಜಾಗ ಹೊರತುಪಡಿಸಿ ಉಳಿದಲ್ಲಿ ಸೋರಿಕೆ ಪ್ರಮಾಣ ಅದೇ ರೀತಿಯಿದೆ. ಮಧುಕೇಶ್ವರ ದೇವಸ್ಥಾನ ಮಾತ್ರ ಈ ಪರಿಸ್ಥಿತಿಯಲ್ಲಿಲ್ಲ. ಪಾರ್ವತಿ ದೇವಸ್ಥಾನ ಮತ್ತು ಲಕ್ಷ್ಮಿನರಸಿಂಹ ದೇವಸ್ಥಾನ ಕೂಡ ಸೋರುತ್ತಿವೆ. ಅವುಗಳನ್ನೂ ಶಾಶ್ವತವಾಗಿ ರಕ್ಷಿಸುವ ಕೆಲಸ ಮಾಡಬೇಕು’ ಎಂದು ಸ್ಥಳೀಯರು ಹೇಳುತ್ತಾರೆ.
‘ಮಳೆಗಾಲದಲ್ಲಿ ನೀರು ಸೋರಿಕೆಯಾಗದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ’ ಎಂದು ಪುರಾತತ್ವ ಇಲಾಖೆಯ ಉದ್ಯೋಗಿಯೊಬ್ಬರು ತಿಳಿಸಿದರು. ‘ಇಲಾಖೆಯ ಹಿರಿಯ ಅಧಿಕಾರಿಗಳು ಮಳೆಗಾಲದ ನಂತರ ಶಾಶ್ವತ ಕೆಲಸ ಮಾಡುವಂತೆ ತಿಳಿಸಿದ್ದಾರೆ’ ಎಂದು ಮಾಹಿತಿ ಹಂಚಿಕೊಂಡರು.
‘ತಾತ್ಕಾಲಿಕ ದುರಸ್ತಿ ಕಾರ್ಯದಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಮಳೆಗಾಲ ಮುಗಿದ ನಂತರ ಶಾಶ್ವತ ಕಾಮಗಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ದೇವಾಲಯ ಆಡಳಿತ ಮಂಡಳಿ ನಿಕಟಪೂರ್ವ ಅಧ್ಯಕ್ಷ ರಾಜಶೇಖರ ಒಡೆಯರ್.
ರಾಜ್ಯದ ಪ್ರಾಚೀನ ದೇವಾಲಯಗಳಲ್ಲಿ ಮಧುಕೇಶ್ವರ ದೇವಾಲಯವೂ ಒಂದಾಗಿದೆ. ಹೀಗಾಗಿ ಶಾಶ್ವತವಾಗಿ ದುರಸ್ತಿ ಕಾರ್ಯ ಕೈಗೊಳ್ಳುವ ಮೂಲಕ ಪ್ರಾಚ್ಯವಸ್ತು ಇಲಾಖೆ ಪ್ರಾಚ್ಯ ಪ್ರಜ್ಞೆ ಮೆರೆಯಬೇಕುಲಕ್ಷ್ಮೀಶ ಸೋಂದಾ ಇತಿಹಾಸ ಸಂಶೋಧಕ
2010ರ ಆಸುಪಾಸಿನಲ್ಲಿ ಮತ್ತೆ ದುರಸ್ಥಿ ಕಾರ್ಯ ಕೈಗೆತ್ತಿಕೊಂಡು ಶಿಲೆಗಳಿಗೆ ಲೋಪವಾಗದಿರಲು ಬೆಲ್ಲ ಮಣ್ಣು ಸುಣ್ಣ ದಾಲ್ಚಿನ್ನಿ ಎಣ್ಣೆ ಹಾಗೂ ರಾಸಾಯನಿಕಗಳನ್ನು ಸೇರಿಸಿ ಇಡೀ ದೇವಾಲಯದ ಮೇಲಿನ ಛಾವಣಿಯನ್ನು ಸ್ಥಳಿಕರನ್ನು ದೂರವೇ ಇಟ್ಟು ಪುರಾತತ್ವ ಇಲಾಖೆ ಗುಟ್ಟಾಗಿ ಮಾಡಿ ಮುಗಿಸಿತ್ತು. ಪುರಾತತ್ವ ಇಲಾಖೆಯ ಈ ಕಾರ್ಯದ ಬಗ್ಗೆ ಆ ಸಂದರ್ಭದಲ್ಲಿ ಅಸಮಧಾನವೂ ವ್ಯಕ್ತವಾಗಿತ್ತು. ಪಾರದರ್ಶಕತೆ ಇಲ್ಲದೆ ಈವರೆಗೆ ಮೂರ್ನಾಲ್ಕು ಬಾರಿ ದುರಸ್ಥಿ ಕಾರ್ಯ ಕೈಗೊಂಡರೂ ಸೋರುವುದು ಮಾತ್ರ ನಿಲ್ಲದಿರುವುದು ದುರಂತ ಎನ್ನುತ್ತಾರೆ ಬನವಾಸಿಗರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.