ADVERTISEMENT

ಸ್ವರ್ಣವಲ್ಲೀ: ರಥೋತ್ಸವ ಸಂಪನ್ನ

​ಪ್ರಜಾವಾಣಿ ವಾರ್ತೆ
Published 12 ಮೇ 2025, 12:49 IST
Last Updated 12 ಮೇ 2025, 12:49 IST
ಶಿರಸಿ ತಾಲ್ಲೂಕಿನ ಸ್ವರ್ಣವಲ್ಲೀಯಲ್ಲಿ ರಥೋತ್ಸವ ನಡೆಯಿತು
ಶಿರಸಿ ತಾಲ್ಲೂಕಿನ ಸ್ವರ್ಣವಲ್ಲೀಯಲ್ಲಿ ರಥೋತ್ಸವ ನಡೆಯಿತು   

ಶಿರಸಿ: ತಾಲ್ಲೂಕಿನ ಸ್ವರ್ಣವಲ್ಲೀ‌ ಮಹಾ‌‌ಸಂಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಸಲಾಗುವ ನರಸಿಂಹ ಜಯಂತಿ ಹಿನ್ನೆಲೆಯ ರಥೋತ್ಸವ ಸೋಮವಾರ ಬೆಳಗಿನ‌ ಜಾವ ಸಂಪನ್ನಗೊಂಡಿತು. 

ಸಂಸ್ಥಾನದ ಆರಾಧ್ಯ ದೇವರಾದ ಲಕ್ಷ್ಮೀನರಸಿಂಹ ದೇವರ ರಥೋತ್ಸವು ಮಠಾಧೀಶ ಗಂಗಾಧರೇಂದ್ರ ಸರಸ್ವತೀ‌ ಸ್ವಾಮೀಜಿ‌ ಹಾಗೂ ಆನಂದಬೋಧೇಂದ್ರ ಸರಸ್ವತೀ‌ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಿತು.

ರಥೋತ್ಸವದ ಅಂಗವಾಗಿ ಕಲ್ಪೋಕ್ತ ಮಹಾ ಪೂಜೆ, ಮಹಾ ಮಂಗಳಾರತಿ, ಮಹಾರಥೋತ್ಸವಕ್ಕೆ ದೇವರನ್ನು ಪಲ್ಲಕ್ಕಿಯ ಮೇಲೆ ಮೆರವಣಿಗೆ ಮಾಡುವ ಮೂಲಕ ಚಂಡೆ, ವೇದಘೋಷ, ವಾದ್ಯಗಳ ಮೂಲಕ ಒಯ್ದು ತಡರಾತ್ರಿ ಮಹಾರಥದಲ್ಲಿ ದೇವರ ಸ್ಥಾಪನೆ ನಡೆಯಿತು. 

ADVERTISEMENT

ರಥದಲ್ಲಿ ದೇವರನ್ನು ರಥಾರೂಢಗೊಳಿಸುವಾಗ ಭಕ್ತರು ಹರ್ಘೋದ್ಘಾರ‌ ಮೊಳಗಿಸಿದರು. ಸ್ವಾಮೀಜಿ ಅವರು ಪೂಜೆ ನಡೆಸಿದರು. ರಾತ್ರಿ 1 ಗಂಟೆ ವೇಳೆಗೆ ರಥ ಎಳೆಯುವ ಕಾರ್ಯಕ್ರಮ ಜರುಗಿತು. 

ಸ್ವರ್ಣವಲ್ಲೀ ಸ್ವಾಮೀಜಿ ಸೂಚನೆ ಮೇರೆಗೆ ರಥೋತ್ಸವ ವೇಳೆ ಸುಡು‌ಮದ್ದು ಪ್ರದರ್ಶನ ಕೈ ಬಿಡಲಾಗಿತ್ತು. ಪ್ರತೀ ವರ್ಷ ಅಂಕೋಲಾದ ಕ್ರೈಸ್ತ‌ ಸಮುದಾಯದವರು‌ ಈ ಸೇವೆ ಸಲ್ಲಿಸುತ್ತಿದ್ದರು. ರಥೋತ್ಸವದ ‌ಸಂಭ್ರಮಕ್ಕೆ ಇದು ಮೆರಗಾಗುತ್ತಿತ್ತು. ಈ ವೇಳೆ ಯುದ್ಧದಲ್ಲಿ ಭಾರತಕ್ಕೆ ವಿಜಯ ಪ್ರಾಪ್ತವಾಗಲೆಂದು ಹಾಗೂ ಸೈನಿಕರ ರಕ್ಷಣೆಗೂ ವಿಶೇಷವಾಗಿ ಪ್ರಾರ್ಥಿಸಲಾಯಿತು. 

ರಾತ್ರಿ ಯಕ್ಷ ಶಾಲ್ಮಲಾ ನೇತೃತ್ವದಲ್ಲಿ ಕಲಾವಿದರಿಂದ ಕಂಸ ದಿಗ್ವಿಜಯ -ಕಂಸ ವಧೆ ಯಕ್ಷಗಾನ ಬಯಲಾಟ ನಡೆಯಿತು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ, ಕಾರ್ಯದರ್ಶಿ ಜಿ.ವಿ.ಹೆಗಡೆ ಗೊಡವೆಮನೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.