ADVERTISEMENT

ಮೊಟ್ಟೆ ಎಸೆತ: ಕಾನೂನು ಸಂಘರ್ಷಕ್ಕೆ ಒಳಗಾದ 6 ಬಾಲಕರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 15:36 IST
Last Updated 9 ಏಪ್ರಿಲ್ 2022, 15:36 IST
ಆರೋಪಿಗಳು ಕೃತ್ಯಕ್ಕೆ ಬಳಿಸಿದ್ದ ದ್ವಿಚಕ್ರ ವಾಹನವನ್ನು ಭಟ್ಕಳದ ರಾಘವೇಂದ್ರ ಮಠದ ಬಳಿ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದರು
ಆರೋಪಿಗಳು ಕೃತ್ಯಕ್ಕೆ ಬಳಿಸಿದ್ದ ದ್ವಿಚಕ್ರ ವಾಹನವನ್ನು ಭಟ್ಕಳದ ರಾಘವೇಂದ್ರ ಮಠದ ಬಳಿ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದರು   

ಭಟ್ಕಳ: ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಕಿಡಿಗೇಡಿಗಳು ವಿನಾಕಾರಣ ಕೆಲವು ಕಡೆ ಸಾರ್ವಜನಿಕರ ಮೇಲೆ ಮೊಟ್ಟೆಗಳನ್ನು ಎಸೆದಿದ್ದಾರೆ. ಈ ಸಂಬಂಧ ರಾತ್ರಿಯೇ ಸಾರ್ವಜನಿಕರು ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೂ ಐವರನ್ನು ಪೊಲೀಸರು ಶನಿವಾರ ಬೆಳಿಗ್ಗೆ ವಶಕ್ಕೆ ಪಡೆದಿದ್ದು, ಬಾಲ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

ಪಟ್ಟಣದ ಬಂದರು ರಸ್ತೆ ನಿವಾಸಿಗಳಾದ ಆರೋ‍ಪಿಗಳೆಲ್ಲರೂ 17 ವರ್ಷದ ಆಸುಪಾಸಿನವರು. ಆರು ಮಂದಿ ಮೂರು ದ್ವಿಚಕ್ರ ವಾಹನಗಳಲ್ಲಿ ತೆರಳಿ ಈ ಕೃತ್ಯ ಎಸಗಿದ್ದಾರೆ. ಹನುಮಾನ್ ನಗರದಲ್ಲಿ ಆಟೊರಿಕ್ಷಾ ಚಾಲಕ ಕೃಷ್ಣ ಮಾಸ್ತಪ್ಪ ನಾಯ್ಕ ಎಂಬುವವರ ಎದೆಯ ಮೇಲೆ ಮೊಟ್ಟೆಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಪುರವರ್ಗ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಂಜುನಾಥ ಎಂಬುವವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈ ಹಾಗೂ ಕಾಲುಗಳಿಗೆ ಮೊಟ್ಟೆ ಎಸೆದಿದ್ದಾರೆ. ಇದನ್ನು ಗಮನಿಸಿದ ಮಂಜುನಾಥನ ಸಹೋದರ, ಯುವಕರನ್ನು ಬೆನ್ನಟ್ಟಿ ರಾಘವೇಂದ್ರ ಮಠದ ಬಳಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಶುಕ್ರವಾರ ರಾತ್ರಿ ನೂರಾರು ಜನರು ಶಹರ ಪೊಲೀಸ್ ಠಾಣೆ ಎದುರು ಜಮಾಯಿಸಿದರು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಲಾಠಿ ಬೀಸಿ ಗುಂಪನ್ನು ಚದುರಿಸಿದರು.

ADVERTISEMENT

ಈ ಸಂಬಂಧ ಭಟ್ಕಳ ಶಾಸಕ ಸುನೀಲ ನಾಯ್ಕ ಶನಿವಾರ ಪಟ್ಟಣದಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ಕರೆದರು. ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚಿಸಿದರು. ಘಟನೆ ಹಿಂದೆ ಇರುವವರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಹೇಳಿದರು.

ಉಪವಿಭಾಗಾಧಿಕಾರಿ ಮಮತಾ ದೇವಿ, ಡಿ.ವೈ.ಎಸ್ಪಿ ಕೆ.ಯು. ಬೆಳ್ಳಿಯಪ್ಪ, ಸಿ.ಪಿ.ಐ ದಿವಾಕರ, ಮಹಾಬಲೇಶ್ವರ ನಾಯ್ಕ ಇದ್ದರು.

ಬ್ರಹ್ಮರಥೋತ್ಸವಕ್ಕೆ ಬಂದೋಬಸ್ತ್:

‘ಭಟ್ಕಳದಲ್ಲಿ ಏ.10ರಂದು ಚನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವ ನೆರವೇರಲಿದೆ. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ನೇಮಿಸಿ ಬಂದೋಬಸ್ತ್ ಮಾಡಲಾಗಿದೆ. ಕೆ.ಎಸ್.ಆರ್.ಪಿ ಹಾಗೂ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಕರೆಸಲಾಗಿದೆ. ಟವರ್ ವಾಚರ್‌ಗಳನ್ನು ಜನಸಂದಣಿ ಪ್ರದೇಶದಲ್ಲಿ ಅಳವಡಿಸಲಾಗಿದೆ. ಯಾರೂ ಭಯ ಪಡುವ ಅಗತ್ಯ ಇಲ್ಲ’ ಎಂದು ಡಿ.ವೈ.ಎಸ್ಪಿ ಕೆ.ಯು.ಬೆಳ್ಳಿಯಪ್ಪ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.