ADVERTISEMENT

ಅಂಕೋಲಾ: ಕಿರಿದಾದ ರಸ್ತೆಯಲ್ಲಿ ಅಪಘಾತದ ಆತಂಕ

ಕೇಂದ್ರ ಸಚಿವ ನಾಯಕ್ ಕಾರು ಅಪಘಾತವಾದ ಹಿಲ್ಲೂರು–ಮಾದನಗೇರಿ ಮಾರ್ಗ

ಮಾರುತಿ ಹರಿಕಂತ್ರ
Published 12 ಜನವರಿ 2021, 19:30 IST
Last Updated 12 ಜನವರಿ 2021, 19:30 IST
ಕೇಂದ್ರ ಸಚಿವ ಶ್ರೀಪಾದ ನಾಯಕ್ ಅವರ ಕಾರು ಅಪಘಾತವಾದ ಸ್ಥಳದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ
ಕೇಂದ್ರ ಸಚಿವ ಶ್ರೀಪಾದ ನಾಯಕ್ ಅವರ ಕಾರು ಅಪಘಾತವಾದ ಸ್ಥಳದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ   

ಅಂಕೋಲಾ: ಕೇಂದ್ರ ಆಯುಷ್ ಖಾತೆ ಸಚಿವ ಶ್ರೀಪಾದ ನಾಯಕ್ ಅವರ ಕಾರು ಅಪಘಾತವಾದ ತಾಲ್ಲೂಕಿನ ಹಿಲ್ಲೂರು– ಮಾದನಗೇರಿ ರಸ್ತೆಯಲ್ಲಿ ವಾಹನಗಳ ದಟ್ಟಣೆ ಈಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಕಿರಿದಾಗಿರುವ ಈ ರಸ್ತೆಯು ಕೆಲವೆಡೆ ಹದಗೆಟ್ಟಿದ್ದು, ಅಪಘಾತಗಳ ಆತಂಕ ಪ್ರಯಾಣಿಕರನ್ನು ಕಾಡುತ್ತದೆ.

ಹುಬ್ಬಳ್ಳಿ– ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63ರಿಂದ ಗೋಕರ್ಣಕ್ಕೆ ಈ ರಸ್ತೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಬಹಳ ವರ್ಷಗಳ ಹಿಂದಿನಿಂದಲೇ ಇಲ್ಲಿ ರಸ್ತೆಯಿದ್ದರೂ ಹೆಚ್ಚಿನ ಬಳಕೆ ಇರಲಿಲ್ಲ. ಮೊದಲು ಯಲ್ಲಾಪುರದಿಂದ ಗೋಕರ್ಣಕ್ಕೆ ತೆರಳುವವರು ಬಾಳೆಗುಳಿ ತನಕ ಪ್ರಯಾಣಿಸಿ ಅಂಕೋಲಾ ಮಾರ್ಗವಾಗಿ ತೆರಳಬೇಕಿತ್ತು. ಹಿಲ್ಲೂರು ರಸ್ತೆಯ ಮೂಲಕ ನೇರವಾಗಿ ಗೋಕರ್ಣಕ್ಕೆ ಹೋದರೆ ಸುಮಾರು 20 ಕಿಲೋಮೀಟರ್ ಉಳಿತಾಯವಾಗುತ್ತದೆ.

ಮಾಸ್ತಿಕಟ್ಟೆ ವಲಯದಲ್ಲಿ ಹೆಚ್ಚಿನ ಅಪಘಾತಗಳು ಆಗುತ್ತಿರುತ್ತವೆ. ಆದ್ದರಿಂದ, ಹೆದ್ದಾರಿಯನ್ನು ಬಿಟ್ಟು ಹಲವರು ಈ ರಸ್ತೆಯಲ್ಲಿ ಸಾಗುತ್ತಾರೆ. ಯಲ್ಲಾಪುರದಿಂದ ಯಾಣ ಮತ್ತು ವಿಭೂತಿಫಾಲ್ಸ್‌ಗೆ ಕೂಡ ಇದೇ ರಸ್ತೆಯಲ್ಲಿ ಪ್ರಯಾಣಿಸಬೇಕು. ಈ ಹಿಂದೆ ಕೇವಲ ಸಾರಿಗೆ ಸಂಸ್ಥೆಯ ಬಸ್‌ಗಳು, ಟೆಂಪೊ ಮತ್ತು ಪ್ರವಾಸಿಗರ ವಾಹನಗಳು ಇಲ್ಲಿ ಸಂಚರಿಸುತ್ತಿದ್ದವು. ಈಗ ಸರಕು ಸಾಗಣೆಯ ದೊಡ್ಡ ವಾಹನಗಳೂ ಸಾಗುತ್ತವೆ.

ADVERTISEMENT

ಹಿಲ್ಲೂರಿನಿಂದ ಆಂದ್ಲೆಯವರೆಗೆ ರಸ್ತೆಯುದ್ದಕ್ಕೂ ಹೊಂಡಗಳಾಗಿವೆ. ಕೆಲವು ದಿನಗಳ ಹಿಂದೆ ಮಳೆಯಾದ ಸಂದರ್ಭದಲ್ಲಿ ಈ ರಸ್ತೆಯ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು. ಗುಂಡಬಾಳ– ಮರಾಕಲ್– ಮಾಗೋಡು– ಮೊಗಟಾದಲ್ಲಿ ರಸ್ತೆ ಅತ್ಯಂತ ಕಿರಿದಾಗಿದೆ. ರಸ್ತೆಯಲ್ಲಿ ಅಪಾಯಕಾರಿ ತಿರುವುಗಳು ವಾಹನ ಚಾಲಕರನ್ನು ಕಂಗೆಡಿಸುತ್ತವೆ. ಈಗಿರುವ ರಸ್ತೆಯನ್ನು ಅಭಿವೃದ್ಧಿಪಡಿಸಿ, ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಕಾರು ನಿಲ್ಲಿಸಲು ಪ್ರಯತ್ನ:ಕೇಂದ್ರ ಸಚಿವ ಶ್ರೀಪಾದ ನಾಯಕ್ ಅವರ ಕಾರು ಸೋಮವಾರ ಭೀಕರವಾಗಿ ಅಪಘಾತಕ್ಕೀಡಾದ ಹೊಸಕಂಬಿಯಲ್ಲಿ ರಸ್ತೆಯ ಬಲಬದಿಯಲ್ಲಿ ಸುಮಾರು 200 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಎಡಬದಿಯಲ್ಲಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ.

ಕಾಂಕ್ರೀಟ್ ರಸ್ತೆಯು ಎಡಗಡೆ ರಸ್ತೆಗಿಂತ ಒಂದು ಅಡಿ ಎತ್ತರವಾಗಿದೆ. ಕಾಮಗಾರಿ ನಡೆಯುತ್ತಿರುವ ಬಗ್ಗೆ ಅಪಘಾತ ನಡೆದ ಸ್ಥಳದಿಂದ 50 ಮೀಟರ್ ಹಿಂದೆ ಸೂಚನಾ ಫಲಕ ಅಳವಡಿಸಲಾಗಿದೆ. ಕಾಂಕ್ರೀಟ್ ರಸ್ತೆ ನಿರ್ಮಾಣದ ಸಲುವಾಗಿ ರಸ್ತೆಯ ಎತ್ತರವನ್ನು ಹೆಚ್ಚಿಸಲಾಗಿದೆ.

ವೇಗವಾಗಿ ಚಲಿಸುತ್ತಿದ್ದ ಕಾರನ್ನು ನಿಯಂತ್ರಿಸಲು ಚಾಲಕ ಪ್ರಯತ್ನಿಸಿದ್ದು, ಏಕಾಏಕಿ ಪ್ರಬಲವಾಗಿ ಬ್ರೇಕ್ ಅನ್ವಯಿಸಿದ್ದರು. ಹಾಗಾಗಿ ಚಕ್ರದ ಗುರುತುಗಳು ಕಾಂಕ್ರೀಟ್ ರಸ್ತೆಯ ಮೇಲೆ ಮೂಡಿವೆ. ಕಾರು ಉರುಳಿದ ಸ್ಥಳದಲ್ಲಿ ವಿದ್ಯುತ್ ಕಂಬವಿತ್ತು. ಅದಕ್ಕೆ ಬಡಿಯದೆ ಪಕ್ಕದಲ್ಲಿದ್ದ ಮರಳು ಮಿಶ್ರಿತ ಮಣ್ಣಿನ ಮೇಲೆ ಇಳಿಯಿತು. ಅದು ಕುಸಿದ ಪರಿಣಾಮವಾಗಿ ಕಾರು ಹೊಂಡಕ್ಕೆ ಉರುಳಿ ಮರಕ್ಕೆ ಡಿಕ್ಕಿ ಹೊಡೆಯಿತು.

ಅಪ‍ಘಾತದಲ್ಲಿ ಸಚಿವರ ಪತ್ನಿ ವಿಜಯಾ ನಾಯಕ್ ಹಾಗೂ ಆಪ್ತ ಕಾರ್ಯದರ್ಶಿ ದೀಪಕ್ ದುಮೆ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸಚಿವರಿಗೆ ಗೋವಾದ ಆಸ್ಪತ್ರೆಯಲ್ಲಿ ಮಂಗಳವಾರ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

***
ಅಕಾಲಿಕ ಮಳೆಯಿಂದ ಆಂದ್ಲೆ ಭಾಗದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಅಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಉಳಿದೆಡೆ ರಸ್ತೆ ಉತ್ತಮವಾಗಿದೆ.
– ರಾಮಾ ಅರ್ಗೇಕರ್, ಎ.ಇ.ಇ, ಲೋಕೋಪಯೋಗಿ ಇಲಾಖೆ

***
ಹಿಲ್ಲೂರು ಮಾದನಗೇರಿ ರಸ್ತೆಯಲ್ಲಿ ಅಪಾಯಕಾರಿ ತಿರುವುಗಳು ಅಧಿಕವಾಗಿದೆ. ರಸ್ತೆಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿ ಪ್ರಯಾಣಿಕರಿಗೆ ಜಾಗೃತಿ ಮೂಡಿಸಬೇಕು.
– ರಾಜು ಹರಿಕಂತ್ರ, ಕೊಳಗಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.