ADVERTISEMENT

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷೆ ಮುಗಿಸಿದ ಖುಷಿ

ಪಾಲಕರು ನಿರಾಳ; ಶಿಕ್ಷಣ ಇಲಾಖೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 15:57 IST
Last Updated 3 ಜುಲೈ 2020, 15:57 IST
ಪರೀಕ್ಷಾ ಕರ್ತವ್ಯಕ್ಕೆ ಅಣಿಯಾಗಿ ನಿಂತಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದವರು
ಪರೀಕ್ಷಾ ಕರ್ತವ್ಯಕ್ಕೆ ಅಣಿಯಾಗಿ ನಿಂತಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದವರು   

ಶಿರಸಿ: ಶುಕ್ರವಾರ ತೃತೀಯ ಭಾಷೆಯ ಪರೀಕ್ಷೆ ಬರೆಯುವ ಮೂಲಕ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ಣಗೊಳಿಸಿದರು. ಕೋವಿಡ್ 19 ನಡುವೆ ಆತಂಕದಲ್ಲೇ ಮಕ್ಕಳನ್ನು ಪರೀಕ್ಷೆಗೆ ಕಳುಹಿಸುತ್ತಿದ್ದ ಪಾಲಕರು ನಿಟ್ಟುಸಿರು ಬಿಟ್ಟರು.

ಮಾರ್ಚ್‌ 28ರಿಂದ ನಡೆಯಬೇಕಿದ್ದ ಪರೀಕ್ಷೆ ಕೋವಿಡ್ 19 ಲಾಕ್‌ಡೌನ್ ಕಾರಣಕ್ಕೆ ಮುಂದೂಡಿಕೆಯಾಗಿತ್ತು. ಪರೀಕ್ಷೆ ನಡೆಯುವ ಬಗ್ಗೆ ಗೊಂದಲದಲ್ಲಿದ್ದ ಮಕ್ಕಳು, ಪರೀಕ್ಷೆಯ ಪರಿಷ್ಕೃತ ದಿನಾಂಕ ಘೋಷಣೆಯಾದ ಮೇಲೆ ಮತ್ತೆ ಓದಿಗೆ ತೊಡಗಿಸಿಕೊಂಡು, ಚಂದನ ವಾಹಿನಿಯಲ್ಲಿ ಬರುತ್ತಿದ್ದ ಪುನರ್ ಮನನ ಕಾರ್ಯಕ್ರಮ ವೀಕ್ಷಿಸಿ, ಪರೀಕ್ಷೆಗೆ ಅಣಿಯಾಗಿದ್ದರು. ಮಕ್ಕಳು ಈಗ ಎಲ್ಲ ಆರು ವಿಷಯಗಳ ಪರೀಕ್ಷೆ ಮುಗಿಸಿದ ಖುಷಿಯಲ್ಲಿದ್ದಾರೆ.

ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಹೆಸರು ನೋಂದಾಯಿಸಿದ್ದ ಒಟ್ಟು 10,216 ವಿದ್ಯಾರ್ಥಿಗಳಲ್ಲಿ 9616 ಜನರು, ಅವರಲ್ಲಿ ಹೊರ ಜಿಲ್ಲೆಗಳಿಂದ ವಲಸೆ ಬಂದಿದ್ದ 367 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಕಂಟೈನ್ಮೆಂಟ್ ಪ್ರದೇಶದ 27 ವಿದ್ಯಾರ್ಥಿಗಳು, ಅನಾರೋಗ್ಯದ ಕಾರಣ ವಿಶೇಷ ಕೊಠಡಿಯಲ್ಲಿ 15 ಮಕ್ಕಳು ಪರೀಕ್ಷೆ ಬರೆದರು. ಪರೀಕ್ಷಾ ಪ್ರಕ್ರಿಯೆ, ಮಕ್ಕಳನ್ನು ಕರೆತರಲು 105 ವಾಹನಗಳನ್ನು ಬಳಸಿಕೊಳ್ಳಲಾಯಿತು.

ADVERTISEMENT

ಪರೀಕ್ಷೆಯ ವೇಳೆ ಸಹಕರಿಸಿದ ಸ್ಕೌಟ್ಸ್ ಮತ್ತು ಗೈಡ್ಸ್ ತಂಡಕ್ಕೆ ಡಿಡಿಪಿಐ ದಿವಾಕರ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ. ‘ಅನೇಕ ಸವಾಲುಗಳು, ಆತಂಕದ ನಡುವೆ ಪರೀಕ್ಷೆ ನಡೆಸುವ ಗುರುತರ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡೆವು. ಈ ಸಂದರ್ಭದಲ್ಲಿ ಮಕ್ಕಳಿಗೆ ಮುಖಗವಸು, ಜ್ವರ ತಪಾಸಣೆ, ಸ್ಯಾನಿಟೈಸೇಷನ್ ಮೊದಲಾದ ಸಮಸ್ಯೆಗಳು ಎದುರಾದಾಗ ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂ ಸೇವಕರು ಜವಾಬ್ದಾರಿ ವಹಿಸಿಕೊಂಡು, ಎಲ್ಲರೂ ಶ್ರಮವಹಿಸಿ ದುಡಿದಿದ್ದಾರೆ’ ಎಂದು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.