ADVERTISEMENT

ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಇಂದಿನಿಂದ

ನಗರದ ಆರು ಕೇಂದ್ರಗಳಿಗೆ 885 ಶಿಕ್ಷಕರ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 14:08 IST
Last Updated 12 ಜುಲೈ 2020, 14:08 IST
ಮೌಲ್ಯಮಾಪನ ನಡೆಯಲಿರುವ ಶಿರಸಿಯ ಕೇಂದ್ರದಲ್ಲಿ ಶಿಕ್ಷಕರಿಗೆ ಪ್ರಾತ್ಯಕ್ಷಿಕೆ ಮೂಲಕ ಕೇಂದ್ರಕ್ಕೆ ಹಾಜರಾಗುವ ಕ್ರಮವನ್ನು ತಿಳಿಸಲಾಯಿತು
ಮೌಲ್ಯಮಾಪನ ನಡೆಯಲಿರುವ ಶಿರಸಿಯ ಕೇಂದ್ರದಲ್ಲಿ ಶಿಕ್ಷಕರಿಗೆ ಪ್ರಾತ್ಯಕ್ಷಿಕೆ ಮೂಲಕ ಕೇಂದ್ರಕ್ಕೆ ಹಾಜರಾಗುವ ಕ್ರಮವನ್ನು ತಿಳಿಸಲಾಯಿತು   

ಶಿರಸಿ: ನಗರದ ಆರು ಕೇಂದ್ರಗಳಲ್ಲಿ ಸೋಮವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಾರಂಭವಾಗಲಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯ 885 ಶಿಕ್ಷಕರು ಮೌಲ್ಯಮಾಪನ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ.

ಮಾರಿಕಾಂಬಾ ಪ್ರೌಢಶಾಲೆಯ ಎರಡು ಕೇಂದ್ರಗಳು, ಉರ್ದು ಪ್ರೌಢಶಾಲೆ, ಆವೆಮರಿಯಾ, ಲಯನ್ಸ್ ಶಾಲೆ, ಎಂಇಎಸ್ ಕಾಲೇಜಿನ ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆಗಳು ನಡೆಯುತ್ತವೆ. ಭಾಷಾ ವಿಷಯದ ಸುಮಾರು 7000 ಹಾಗೂ ಇತರ ವಿಷಯಗಳ 14ಸಾವಿರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಇಲ್ಲಿ ನಡೆಯುತ್ತದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮಾದರಿಯಲ್ಲೇ ಮೌಲ್ಯಮಾಪನ ಕೂಡ ನಡೆಯುತ್ತದೆ. ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಕೈಗೆ ಸ್ಯಾನಿಟೈಸರ್ ಹಾಕಿ ಮೌಲ್ಯಮಾಪಕರನ್ನು ಕೊಠಡಿಯ ಒಳಗೆ ಬಿಡಲಾಗುತ್ತದೆ. ಪ್ರತಿ ಕೊಠಡಿಯಲ್ಲಿ 14 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಕೇಂದ್ರದಲ್ಲಿ ಸುಮಾರು 10 ಕೊಠಡಿಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಹಳಿಯಾಳ, ಜೊಯಿಡಾ, ರಾಮನಗರ, ದಾಂಡೇಲಿ ಹಾಗೂ ಮುಂಡಗೋಡ ಭಾಗದ ಶಿಕ್ಷಕರಿಗೆ ಮೌಲ್ಯಮಾಪನ ಕೇಂದ್ರಕ್ಕೆ ಬರಲು ಅನುಕೂಲವಾಗುವಂತೆ ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಡಿಡಿಪಿಐ ದಿವಾಕರ ಶೆಟ್ಟಿ ತಿಳಿಸಿದರು.

ADVERTISEMENT

ಕುಳಿತಲ್ಲೇ ಪತ್ರಿಕೆ ಪೂರೈಕೆ:

ಪ್ರತಿ ಬಾರಿ ಪತ್ರಿಕೆ ಭದ್ರವಾಗಿಟ್ಟಿರುವ ಸ್ಟ್ರಾಂಗ್‌ರೂಮ್‌ನಲ್ಲಿ ಶಿಕ್ಷಕರು ಉತ್ತರ ಪತ್ರಿಕೆಗಳನ್ನು ನೀಡಲಾಗುತ್ತಿತ್ತು. ಈ ಬಾರಿ ಮುನ್ನೆಚ್ಚರಿಕೆಯಾಗಿ, ಒಮ್ಮೆಲೇ ಕೊಠಡಿಯೊಳಗೆ ಜನದಟ್ಟಣಿಯಾಗಬಾರದೆಂಬ ಕಾರಣಕ್ಕೆ ಶಿಕ್ಷಕರಿಗೆ ಕುಳಿತಲ್ಲೇ ಉತ್ತರ ಪತ್ರಿಕೆ ಪೂರೈಸಲಾಗುತ್ತದೆ. ಶಿಕ್ಷಕರು ಪರಸ್ಪರ ಶಾರೀರಿಕ ಅಂತರ ಕಾಪಾಡಿಕೊಳ್ಳಬೇಕು. ಮೌಲ್ಯಮಾಪನಕ್ಕೆ ಬರುವ ಶಿಕ್ಷಕರು ನೀರು, ತಿಂಡಿ, ಬಿಸ್ಕತ್ ಅನ್ನು ತಾವೇ ತಂದುಕೊಳ್ಳಬೇಕು. ಜೊತೆಗೆ ಒಂದು ಸ್ಯಾನಿಟೈಸರ್ ಬಾಟಲಿಯನ್ನು ಇಟ್ಟುಕೊಳ್ಳಬೇಕು. ತಿಂಡಿಗಳನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದು ಎಂದು ಸೂಚನೆ ನೀಡಲಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಈಗಾಗಲೇ ಶಿಕ್ಷಕರಿಗೆ ಎರಡು ಸುತ್ತಿನಲ್ಲಿ ಮೌಲ್ಯಮಾಪನ ಕುರಿತು ಮಾಹಿತಿ ನೀಡಲಾಗಿದೆ. ಕೇಂದ್ರಕ್ಕೆ ಹಾಜರಾಗುವ ಬಗ್ಗೆ, ಶಾರೀರಿಕ ಅಂತರ ಕಾಪಾಡಿಕೊಳ್ಳುವ ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಗಿದೆ. ಭಾಷಾ ವಿಷಯಗಳಿಗೆ ಐದು ದಿನ, ಉಳಿದ ವಿಷಯಗಳಿಗೆ 10 ದಿನಗಳಲ್ಲಿ ಮೌಲ್ಯಮಾಪನ ಪೂರ್ಣಗೊಳಿಸಲು ಯೋಚಿಸಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.