ಕಾರವಾರ: ಜಿಲ್ಲಾ ಕೇಂದ್ರವಾದರೂ ಕಾರವಾರದಲ್ಲಿ ಸುಸಜ್ಜಿತ ಕ್ರೀಡಾಂಗಣ ಇಲ್ಲದ ಕೊರಗು ಮುಂದುವರಿದಿದೆ. ಶಿರವಾಡದಲ್ಲಿ ಈ ಹಿಂದೆ ಗುರುತಿಸಿದ್ದ ಅರಣ್ಯ ಭೂಮಿ ಪಡೆಯಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಅನುದಾನದ ಕೊರತೆ ಎದುರಾಗಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿದೆ.
ನಗರದ ಹೃದಯ ಭಾಗದಲ್ಲಿರುವ ಮಾಲಾದೇವಿ ಮೈದಾನ ಕ್ರೀಡಾ ಚಟುವಟಿಕೆ, ಕ್ರಿಕೆಟ್ ಪಂದ್ಯಾವಳಿಗಳ ಆಯೋಜನೆಗೆ ಆಸರೆಯಾಗಿದೆ. ಕಿರಿದಾದ ಜಾಗದಲ್ಲಿರುವ ಕ್ರೀಡಾಂಗಣದಲ್ಲಿ ದೊಡ್ಡಮಟ್ಟದ ಕ್ರೀಡಾ ಚಟುವಟಿಕೆ ನಡೆಸಲು ಸ್ಥಳದ ಅಭಾವ ಕಾಡುತ್ತಿದೆ.
ಈ ಕಾರಣಕ್ಕೆ ಶಿರವಾಡ ಗ್ರಾಮದಲ್ಲಿರುವ ಸರ್ವೆ ನಂ.17ಅ ದಲ್ಲಿರುವ ಐದು ಹೆಕ್ಟೇರ್ ಅರಣ್ಯ ಭೂಮಿಯನ್ನು 2021ರಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಪಡೆಯಲು ಪ್ರಸ್ತಾವ ಸಲ್ಲಿಕೆಯಾಗಿತ್ತು. ಈ ಅರಣ್ಯ ಪ್ರದೇಶಕ್ಕೆ ಪರ್ಯಾಯವಾಗಿ ಕದ್ರಾ ಸಮೀಪ ಅರಣ್ಯ ಇಲಾಖೆಗೆ ವನೀಕರಣಕ್ಕೆ ₹1.31 ಕೋಟಿ ಪರಿಹಾರ ರೂಪದಲ್ಲಿ ಪಾವತಿಸುವಂತೆ ಅರಣ್ಯ ಇಲಾಖೆ ಬೇಡಿಕೆ ಇಟ್ಟಿತ್ತು.
ನಾಲ್ಕು ವರ್ಷ ಕಳೆದರೂ ಅರಣ್ಯ ಇಲಾಖೆಗೆ ಪರಿಹಾರ ಪಾವತಿಯಾಗದೇ ಕ್ರೀಡಾಂಗಣ ನಿರ್ಮಾಣಕ್ಕೆ ಮೀಸಲಿಟ್ಟ ಜಾಗ ಪಡೆಯುವುದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸಾಧ್ಯವಾಗಿಲ್ಲ.
‘ಶಿರವಾಡದಲ್ಲಿ ಐದು ಹೆಕ್ಟೇರ್ ಭೂಮಿ ಪಡೆಯಲು ಅರಣ್ಯ ಇಲಾಖೆ ಕೇಳಿರುವ ಪರಿಹಾರ ಮೊತ್ತ ನೀಡಲು ಇಲಾಖೆಯಿಂದ ಸಮ್ಮತಿ ದೊರೆತಿಲ್ಲ. ಅಷ್ಟೊಂದು ದೊಡ್ಡ ಮೊತ್ತ ಪಾವತಿ ಕಷ್ಟ ಎಂಬುದಾಗಿ ಇಲಾಖೆ ಸ್ಪಷ್ಟಪಡಿಸಿದೆ’ ಎಂಬುದಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಪರಿಹಾರ ಮೊತ್ತದ ಪ್ರಮಾಣ ಕಡಿಮೆ ಮಾಡುವಂತೆ ಅರಣ್ಯ ಇಲಾಖೆಗೆ ಪುನರ್ ಪ್ರಸ್ತಾವ ಸಲ್ಲಿಸಲು ಯೋಚಿಸಲಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ. ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಿಹಾರ ಮೊತ್ತದಲ್ಲಿ ವಿನಾಯಿತಿ ಒದಗಿಸುವ ವಿಶ್ವಾಸವಿದೆ’ ಎಂದೂ ಹೇಳಿದರು.
ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಶಿರವಾಡದಲ್ಲಿ ಈ ಹಿಂದೆ ಗುರುತಿಸಿದ್ದ ಜಾಗವನ್ನು ಪಡೆಯಲು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಇನ್ನೊಮ್ಮೆ ಅರ್ಜಿ ಸಲ್ಲಿಸಲಾಗುವುದುರವಿ ನಾಯ್ಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ
ಜಿಲ್ಲಾ ಕೇಂದ್ರವಾದೂ ಈವರೆಗೆ ಕಾರವಾರದಲ್ಲಿ ಜಿಲ್ಲಾ ಕ್ರೀಡಾಂಗಣ ಇಲ್ಲ. ರಾಜ್ಯದ ಹಲವೆಡೆ ತಾಲ್ಲೂಕು ಕ್ರೀಡಾಂಗಣಕ್ಕೆ ಕೋಟ್ಯಂತರ ಅನುದಾನ ನೀಡಲಾಗುತ್ತಿದೆ. ಜಿಲ್ಲೆಯನ್ನು ನಿರ್ಲಕ್ಷಿಸಲಾಗಿದೆಸದಾನಂದ ನಾಯ್ಕ ಅಥ್ಲೆಟಿಕ್ಸ್ ಅಸೋಸಿಯೇಶನ್ ಜಿಲ್ಲಾ ಘಟಕದ ಅಧ್ಯಕ್ಷ
ಸಿಂಥೆಟಿಕ್ ಟ್ರ್ಯಾಕ್ ಇಲ್ಲ
‘ಉತ್ತರ ಕನ್ನಡ ಜಿಲ್ಲೆಯಲ್ಲಿ ನೂರಾರು ಕ್ರೀಡಾ ಪ್ರತಿಭೆಗಳು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟ ಪ್ರತಿನಿಧಿಸಿದ್ದಾರೆ. ಆದರೆ ಅವರೆಲ್ಲರೂ ಉನ್ನತ ತರಬೇತಿಗೆ ದೂರದ ನಗರಗಳಿಗೆ ಹೋಗುವ ಸ್ಥಿತಿ ಇದೆ. ಜಿಲ್ಲೆಯಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣವೇ ಇಲ್ಲ. ಅಥ್ಲೀಟ್‍ಗಳಿಗೆ ಅನುಕೂಲವಾಗುವ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾಗಿಲ್ಲ. ಹಿಂದಿನಿಂದಲೂ ಜನಪ್ರತಿನಿಧಿಗಳ ಗಮನಸೆಳೆಯಲಾಗಿದ್ದರೂ ಸ್ಪಂದನೆ ಸಿಕ್ಕಿಲ್ಲ’ ಎನ್ನುತ್ತಾರೆ ಅಥ್ಲೆಟಿಕ್ಸ್ ಅಸೋಸಿಯೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಸದಾನಂದ ನಾಯ್ಕ. ‘ಶಿರವಾಡದಲ್ಲಿ ಕ್ರೀಡಾಂಗಣ ಸ್ಥಾಪನೆಗೆ ಗುರುತಿಸಿದ್ದ ಜಾಗ ಪಡೆಯಲು ಜನಪ್ರತಿನಿಧಿಗಳು ಪ್ರಯತ್ನಿಸಲಿ. ಗ್ರಾಮೀಣ ಪ್ರದೇಶವಾಗಿರುವ ಕಾರಣಕ್ಕೆ ಖೇಲೊ ಇಂಡಿಯಾ ಯೋಜನೆಯಡಿ ಕ್ರೀಡಾಂಗಣ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದಲೂ ಅನುದಾನ ಪಡೆಯಲು ಅವಕಾಶವಿದೆ. ಶಾಸಕರು ಸಂಸದರು ಈ ಬಗ್ಗೆ ಪ್ರಯತ್ನ ನಡೆಸಲಿ’ ಎಂದೂ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.