ADVERTISEMENT

ಸಮರ್ಥ, ಸ್ವಾಭಿಮಾನಿ ಭಾರತದತ್ತ ದಿಟ್ಟ ಹೆಜ್ಜೆ: ಸಚಿವ ಶ್ರೀನಿವಾಸ ಪೂಜಾರಿ ಹೇಳಿಕೆ

‘ಒಂದು ದೇಶ ಒಂದು ಸಂವಿಧಾನ’ ಗೋಷ್ಠಿಯನ್ನು ಉದ್ಘಾಟಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 14:12 IST
Last Updated 19 ಸೆಪ್ಟೆಂಬರ್ 2019, 14:12 IST
ಕಾರವಾರದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ಒಂದು ದೇಶ ಒಂದು ಸಂವಿಧಾನ’ ಗೋಷ್ಠಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು
ಕಾರವಾರದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ಒಂದು ದೇಶ ಒಂದು ಸಂವಿಧಾನ’ ಗೋಷ್ಠಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು   

ಕಾರವಾರ: ‘ಚುನಾವಣೆಯ ಸಂದರ್ಭದಲ್ಲಿ ಸಮರ್ಥ ಮತ್ತು ಸ್ವಾಭಿಮಾನಿ ಭಾರತ ನಿರ್ಮಾಣ ಮಾಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿತ್ತು. ಅದರ ಭಾಗವಾಗಿಒಂದೇ ದೇಶ ಒಂದೇಸಂವಿಧಾನವನ್ನು ಪಾಲನೆ ಮಾಡಲಾಗುತ್ತಿದೆ’ ಎಂದು ಮೀನುಗಾರಿಕೆ, ಬಂದರು ಹಾಗೂ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದಲ್ಲಿ ಗುರುವಾರ ಬಿಜೆಪಿ ಹಮ್ಮಿಕೊಂಡ‘ಒಂದು ದೇಶ ಒಂದು ಸಂವಿಧಾನ’ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಶ್ಮೀರದಲ್ಲಿ ಜಾರಿಯಲ್ಲಿದ್ದ 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ಈ ಹಿಂದೆ ನೀಡಿದ ಭರವಸೆಯನ್ನು ಬಿಜೆಪಿ‌ ಈಡೇರಿಸಿದೆ. ಕಾಶ್ಮಿರದಲ್ಲಿಭಾರತೀಯ ಸೈನಿಕರಿಗೆಕಲ್ಲು ಹೊಡೆಯುತ್ತಿದ್ದ ಉಗ್ರರನ್ನು ನಿಯಂತ್ರಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ವಿಶೇಷ ಉಪನ್ಯಾಸ‌ ನೀಡಿದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮ.ನಾಗರಾಜ್, ‘ಜಮ್ಮು ಕಾಶ್ಮೀರದ ಸಮಸ್ಯೆ ಉಲ್ಬಣಿಸಲು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಕಾರಣ. ನಾನು ಸಾಂಸ್ಕೃತಿಕವಾಗಿ ಮುಸ್ಲಿಂ, ಹಿಂದೂ ಆಗಿ ಹುಟ್ಟಿದ್ದೇನೆ ಎನ್ನುತ್ತ ಕಾಶ್ಮೀರವನ್ನು ಭಾರತದಲ್ಲಿ ವಿಲೀನಗೊಳಿಸುವ ಯತ್ನ ಮಾಡಲಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರೋಧವಿದ್ದರೂ ಸಂವಿಧಾನದಲ್ಲಿ 370 ಹಾಗೂ 35ಎ ವಿಧಿಯನ್ನು ಸೇರಿಸಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದರು. ಈ ಮೂಲಕ ಒಂದೇ ದೇಶದಲ್ಲಿ ಎರಡು ಸಂವಿಧಾನಗಳು ಜಾರಿಯಾದವು’ ಎಂದು ಹೇಳಿದರು.

ನಾಲ್ಕು ವರ್ಷಗಳಿಂದ ಸಿದ್ಧತೆ:‘ಬ್ರಿಟಿಷರು ಹಿಂದೂ ಮುಸ್ಲಿಮರ ನಡುವೆ ವೈಷಮ್ಯ ಮೂಡಿಸಿ ತಮ್ಮ ಕೆಲಸ ಮಾಡಿಕೊಂಡಂತೆ ಕಾಂಗ್ರೆಸ್‌ನವರೂ ಮಾಡಿದರು. 370ನೇ ವಿಧಿಯನ್ನು ರದ್ದು ಮಾಡುವಂತೆ ಮೊದಲಿನಿಂದಲೂ ಬಿಜೆಪಿ ಹೋರಾಡುತ್ತಿತ್ತು. ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಮಂಡಿಸಿದ ಮಸೂದೆಗೆ ನಾಲ್ಕು ವರ್ಷಗಳಿಂದ ಸಿದ್ಧತೆ ಮಾಡಿಕೊಳ್ಳಲಾಗಿತ್ತು’ ಎಂದು ಮ.ನಾಗರಾಜ್ತಿಳಿಸಿದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ದೇಶದ ಕಾನೂನೇ ಈಗ ಜಮ್ಮು ಮತ್ತು ಕಾಶ್ಮೀರಕ್ಕೂಅನ್ವಯಿಸುತ್ತಿದೆ. ಈವರೆಗೆ ಇದ್ದ ಸಮಸ್ಯೆಗಳು, ಅಭದ್ರತೆಯ ಭಾವನೆ ಇನ್ನುಮುಂದೆ ಅಲ್ಲಿಲ್ಲ’ ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದಪಕ್ಷದ ಮುಖಂಡ ಸುನೀಲ ಹೆಗಡೆ, ‘ದೇಶದ ಹಲವುಸಂಸ್ಕೃತಿಗಳ ಮೂಲ ಕಾಶ್ಮೀರದಲ್ಲಿದೆ. ಅಂಬೇಡ್ಕರ್ ವಿರೋಧದ ನಡುವೆಯೂ ವಿಶೇಷ ಸ್ಥಾನಮಾನದ ವಿಧಿಯನ್ನು ಜಾರಿ ಮಾಡಲಾಯಿತು. ಈಗ ಪುನಃ ಇಡೀ ಕಾಶ್ಮೀರನಮ್ಮದು ಎಂಬ ಭಾವನೆಯನ್ನು ಜನರಲ್ಲಿ ಮೂಡಿಸಬೇಕಿದೆ’ ಎಂದರು.

ಶಾಸಕ‌ ದಿನಕರ ಶೆಟ್ಟಿ,ಪಕ್ಷದ ಜಿಲ್ಲಾ ಘಟಕದ ಸಹ ಪ್ರಭಾರಿ ಈಶ್ವರ ನಾಯ್ಕ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯ್ಕ, ನಗರ ಘಟಕದ ಅಧ್ಯಕ್ಷ ಮನೋಜ ಭಟ್, ಗ್ರಾಮೀಣ ಘಟಕದ ಅಧ್ಯಕ್ಷ ಮಾರುತಿ ನಾಯ್ಕ, ಪ್ರಮುಖರಾದ ಎನ್.ಎಸ್.ಹೆಗಡೆ, ನಿತ್ಯಾನಂದ ಗಾಂವ್ಕರ್ ಇದ್ದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ಸ್ವಾಗತಿಸಿದರು. ಪದ್ಮಜಾ ಜೋಯಿಸ್ ಪ್ರಾರ್ಥಿಸಿದರು.ಸುಭಾಷ ಗುನಗಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.