ADVERTISEMENT

ದಾರಿ ಮಧ್ಯೆ ಕೆಟ್ಟು ನಿಲ್ಲುವ ಸ್ಥಿತಿ: ವಿದ್ಯಾರ್ಥಿಗಳಿಗೆ ಬಸ್ ವ್ಯತ್ಯಯದ ಚಿಂತೆ

ರಸ್ತೆ ಹದಗೆಟ್ಟ ಹಳ್ಳಿಗಿಲ್ಲ ಸಾರಿಗೆ ಸಂಪರ್ಕ

ಗಣಪತಿ ಹೆಗಡೆ
Published 30 ಜೂನ್ 2025, 5:16 IST
Last Updated 30 ಜೂನ್ 2025, 5:16 IST
ಕಾರವಾರದ ಬೈತಕೋಲದಲ್ಲಿ ಪ್ರಯಾಣಿಕರು ಖಾಸಗಿ ವಾಹನಗಳಿಗಾಗಿ ರಸ್ತೆ ಪಕ್ಕ ನಿಂತು ಕಾಯುತ್ತಿರುವುದು.
ಕಾರವಾರದ ಬೈತಕೋಲದಲ್ಲಿ ಪ್ರಯಾಣಿಕರು ಖಾಸಗಿ ವಾಹನಗಳಿಗಾಗಿ ರಸ್ತೆ ಪಕ್ಕ ನಿಂತು ಕಾಯುತ್ತಿರುವುದು.   

ಕಾರವಾರ: ಕೆಲದಿನಗಳ ಹಿಂದಷ್ಟೆ ಮಲ್ಲಾಪುರದಿಂದ ಕಾರವಾರದತ್ತ ಬರುತ್ತಿದ್ದ ಬಸ್‌ ಹಪಕರ್ಣಿ ಬಳಿ ಬರುತ್ತಿದ್ದಂತೆ ಬಸ್ ಒಳಗೆ ದಟ್ಟ ಹೊಗೆ ಆವರಿಸಿಕೊಂಡು ಪ್ರಯಾಣಿಕರು ದಿಗಿಲುಗೊಂಡಿದ್ದರು. ವಿದ್ಯಾರ್ಥಿಗಳು, ಉದ್ಯೋಗಿಗಳು, ಕಾರ್ಮಿಕರಿದ್ದ ಬಸ್‌ನ್ನು ಅಲ್ಲಿಯೇ ನಿಲುಗಡೆ ಮಾಡಲಾಯಿತು. ಪ್ರಯಾಣ ಮುಂದುವರಿಸಲು ಖಾಸಗಿ ವಾಹನಗಳ ಮೊರೆಹೋಗುವ ಸ್ಥಿತಿ ಎದುರಾಯಿತು.

ಇದು ಕೇವಲ ಒಂದು ಘಟನೆಯಲ್ಲಿ. ಜಿಲ್ಲೆಯಾದ್ಯಂತ ನಿತ್ಯವೂ ಇಂತಹ ರಸ್ತೆ ಮಧ್ಯೆ ಬಸ್ ಕೆಟ್ಟು ನಿಲ್ಲುವ ಘಟನೆಗಳು ನಡೆಯುತ್ತಲೇ ಇವೆ. ಮಳೆಗಾಲದಲ್ಲಂತೂ ಈ ಪ್ರಮಾಣ ಹೆಚ್ಚುತ್ತಿದೆ. ಸರಿಯಾದ ಸಮಯಕ್ಕೆ ಬಸ್‌ಗಳು ಬಾರದಿರುವುದು ಒಂದೆಡೆಯಾದರೆ, ಬಂದ ಬಸ್‌ಗಳು ಕೆಟ್ಟು ನಿಲ್ಲುವ ಸ್ಥಿತಿ ಇದೆ ಎಂಬುದು ಪ್ರಯಾಣಿಕರ ಆರೋಪ.

ಶಿರಸಿ ವಿಭಾಗದಲ್ಲಿ ಈ ಹಿಂದೆ 510 ಮಾರ್ಗಗಳಿಗೆ ಬಸ್‌ಗಳು ಸಂಚರಿಸುತ್ತಿದ್ದವು. ಈಗ ಅದು 498ಕ್ಕೆ ಇಳಿಕೆಯಾಗಿದೆ. ಕೋವಿಡ್ ವೇಳೆ ಸ್ಥಗಿತಗೊಂಡಿದ್ದ ಹಲವು ಮಾರ್ಗಗಳಿಗೆ ಇಂದಿಗೂ ಬಸ್ ಸಂಚಾರ ಪುನರಾರಂಭಿಸಿಲ್ಲ ಎಂಬ ದೂರುಗಳಿವೆ. ಮಳೆಗಾಲದಲ್ಲಂತೂ ಕೆಸರುಗದ್ದೆಯಂತಾಗುವ ಹಳ್ಳಿ ರಸ್ತೆಗಳಿಗೆ ಬಸ್ ಓಡಿಸಲು ಹಿಂದೇಟು ಹಾಕಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು, ಕಾರ್ಮಿಕರು ಪರದಾಡುವುದು ಹೆಚ್ಚುತ್ತಿದೆ.

ADVERTISEMENT

ಮಳೆ ಆರಂಭದೊಂದಿಗೆ ಶಿರಸಿ ತಾಲ್ಲೂಕಿನ ಕೆಲ ಕುಗ್ರಾಮಗಳಿಗೆ ಬಸ್ ಸಂಚಾರ ಸ್ಥಗಿತವಾಗಿದೆ ಎಂಬ ದೂರುಗಳಿವೆ. ದೋರಣಗಿರಿ, ಮುಸ್ಕಿ ಭಾಗದಲ್ಲಿ ಮಳೆಯೊಂದಿಗೆ ರಸ್ತೆ ಹದಗೆಟ್ಟ ಕಾರಣ ಬಸ್ ಸಂಚಾರ ಸ್ಥಗಿತವಾಗಿದೆ. ಶಿರಸಿ–ಕುಮಟಾ ರಸ್ತೆಯಲ್ಲೂ ಬಸ್ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ದೇವಿಮನೆ, ರಾಗಿಹೊಸಳ್ಳಿ ಭಾಗದ ಜನರು ತೊಂದರೆ ಎದುರಿಸುತ್ತಿದ್ದಾರೆ.

ಜೊಯಿಡಾ ತಾಲ್ಲೂಕಿನ ಬಸ್ ಸಮಸ್ಯೆ ಕಾರಣಕ್ಕೆ ಸಂಚಾರಕ್ಕೆ ಖಾಸಗಿ ವಾಹನಗಳನ್ನು ಅವಲಂಬಿಸಿದ್ದು, ಹಲವು ವಿದ್ಯಾರ್ಥಿಗಳು ಬಾಡಿಗೆ ಮನೆ ಮಾಡಿಕೊಂಡು ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದಾರೆ.

ಡಿಗ್ಗಿ ಭಾಗದಲ್ಲಿ ಕಿರಿದಾದ ರಸ್ತೆ ಮತ್ತು ರಸ್ತೆ ದುರಸ್ತಿ ಕಾರಣ ನೀಡಿ ಸಾರಿಗೆ ಅಧಿಕಾರಿಗಳು ಕೇವಲ ಒಂದು ತಿಂಗಳು ಬಸ್ ಸಂಪರ್ಕ ಕಲ್ಪಿಸಿ ಕಳೆದ ಮಳೆಗಾಲದಿಂದ ಬಸ್ ಸಂಪರ್ಕವನ್ನು ಶಾಶ್ವತವಾಗಿ ಬಂದ್ ಮಾಡಿದ್ದಾರೆ. ಉಳವಿ ಮತ್ತು ಅಣಶಿಯಿಂದ ಬೆಳಿಗ್ಗೆ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ರಾತ್ರಿ ತಂಗುವ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸುತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ. ಉಳವಿ ಭಾಗದ ಸುಮಾರು ಹದಿನೈದು ಹಳ್ಳಿಗಳ ವಿದ್ಯಾರ್ಥಿಗಳು ಕುಂಬಾರವಾಡ, ಜೊಯಿಡಾ, ದಾಂಡೇಲಿ ಶಾಲಾ ಕಾಲೇಜುಗಳಿಗೆ ಪ್ರಯಾಣಿಕರಿಂದ ಕಿಕ್ಕಿರಿದು ತುಂಬುವ ಬಸ್ಸುಗಳಲ್ಲಿ ನಿಂತುಕೊಂಡೇ ಸಂಚರಿಸುತ್ತಿದ್ದಾರೆ. ಮಳೆಗಾಲದಲ್ಲಿ ಕುಂಡಲ, ಬಜಾರಕುಣಂಗ, ಆಖೇತಿ ಭಾಗದಲ್ಲಿ ಬಸ್ ಸಂಚರಿಸುತ್ತಿಲ್ಲ.

ಹಳಿಯಾಳ ತಾಲ್ಲೂಕಿನ ಶಿವಪುರದಿಂದ ಹಸರಂಬಿವರೆಗೆ ರಸ್ತೆ ಹದಗೆಟ್ಟಿದ್ದರಿಂದ ಈ ಭಾಗಕ್ಕೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಮಾಗವಾಡ, ಮಾವಿನಕೊಪ್ಪಕ್ಕೆ ತೆರಳಲು ಸಂಜೆ ವೇಳೆ ಬಸ್ ವ್ಯವಸ್ಥೆ ಇಲ್ಲದೆ ಪರದಾಡಬೇಕಾಗುತ್ತಿದೆ ಎಂದು ವಿದ್ಯಾರ್ಥಿ ಪ್ರಕಾಶ ಕಲ್ಲಪ್ಪ ಮಡಿವಾಳ ದೂರಿದರು.

ಹೊನ್ನಾವರದಲ್ಲೂ ಗ್ರಾಮೀಣ ಪ್ರದೇಶದ ಕೆಲವೆಡೆ ಸಕಾಲಕ್ಕೆ ಬಸ್ ಸಂಚರಿಸದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ‘ಬೆಳಿಗ್ಗೆ 7 ಗಂಟೆಗೆ ಬರಬೇಕಿದ್ದ ಬಸ್ ಬರಲಿಲ್ಲ. ಇನ್ನು ನಂತರದ ಬಸ್‍ಗೆ ಹೋಗುವಷ್ಟರಲ್ಲಿ ಹೆಚ್ಚಿನ ತರಗತಿಗಳು ಮುಗಿದಿರುತ್ತವೆ’ ಎಂದು ಗುಂಡಿಬೈಲ್‍ನ ಹರ್ಷ ನಾಯ್ಕ ಹೇಳಿದರು.

‘ಖಾಸಗಿ ಸಾರಿಗೆ ವಾಹನಗಳು ಹೋಗದಿರುವ ಕೆಲ ರಸ್ತೆಗಳಲ್ಲಿ ಇಲಾಖೆ ಬಸ್ ಸೇವೆ ಒದಗಿಸಿದೆ. ಆದರೆ ರಸ್ತೆ ದುರವಸ್ಥೆಯ ಬಗ್ಗೆ ಯಾರೂ ಮಾತನಾಡುವುದಿಲ್ಲ’ ಎಂದು ಬಸ್ ಚಾಲಕರೋರ್ವರು ತಮ್ಮ ಅಳಲು ತೋಡಿಕೊಂಡರು.

‘ಹೊನ್ನಾವರದಿಂದ ಕುಮಟಾ ಕಡೆ ಹೋಗುವ ಬಸ್‌ಗಳ ಸಂಖ್ಯೆ ತೀರ ಕಡಿಮೆ ಇದ್ದು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ’ ಎಂದು ಕಡತೋಕಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ಭಟ್ಟ ತಿಳಿಸಿದರು.

ಮಳೆಗಾಲದಲ್ಲಿ ಚಾಂದೆವಾಡಿ, ಪಟೋಲಿ ಮಾರ್ಗದಲ್ಲಿ ಪದೇ ಪದೇ ಸೇತುವೆ ಹಾಳಾಗುವ ಕಾರಣಕ್ಕೆ ಬಸ್ ಸಂಚಾರಕ್ಕೆ ತೊಂದರೆ ಆಗುತ್ತಿದೆ ಎನ್ನುತ್ತಾರೆ ದಾಂಡೇಲಿ ಬಸ್ ಘಟಕ ವ್ಯವಸ್ಥಾಪಕ ಎಲ್.ಎಚ್.ರಾಥೋಡ್. ‘ಹಳ್ಳಿಗಳಿಗೆ ರಸ್ತೆ ಸರಿ ಇಲ್ಲ ಕಾರಣಕ್ಕೆ ಬಸ್ ತಡವಾಗಿ ಬರುತ್ತದೆ. ತರಗತಿಗಳಿಗೆ ತಲುಪಲು ತಡವಾಗಿ, ಶಿಕ್ಷಕರಿಂದ ಬೈಸಿಕೊಂಡು ಉದಾಹರಣೆಗಳಾಗಿವೆ’ ಎನ್ನುತ್ತಾರೆ ವಿದ್ಯಾರ್ಥಿ ಧೀರಜ್.

ಯಲ್ಲಾಪುರ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಬಸ್ ಸಂಪರ್ಕ ಸರಿ ಇಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. ಬೀಗಾರ–ಬಾಗಿನಕಟ್ಟಾ ರಾತ್ರಿ ತಂಗುವ ಬಸ್ ಸಂಚಾರ ರದ್ದಾಗಿದೆ. ಹೊನ್ನಗದ್ದೆ ಬಸ್ ನಿಯಮಿತವಾಗಿ ಬರುತ್ತಿಲ್ಲ ಎಂಬ ದೂರು ಇದೆ.

ಗೋಕರ್ಣ ಮತ್ತು ಗ್ರಾಮೀಣ ಭಾಗದಿಂದ ಹೆಚ್ಚಿನ ವಿದ್ಯಾರ್ಥಿಗಳು ಕುಮಟಾ ಅಥವಾ ಅಂಕೋಲಾ ಕಾಲೇಜಿಗೆ ಹೋಗುತ್ತಿದ್ದಾರೆ. ಕೆಲವರು ಹಿರೇಗುತ್ತಿ ಕಾಲೇಜಿಗೆ ಹೊಗುತ್ತಿದ್ದಾರೆ. ಇವರೆಲ್ಲರೂ ಬೆಳ್ಳಿಗೆ ಗೋಕರ್ಣದಿಂದ ಹೊರಡುವ ಬಸ್ ಅವಲಂಭಿಸಿದ್ದಾರೆ. ಆದರೆ, ಈ ಬಸ್‌ ಜನದಟ್ಟಣೆಯೊಂದಿಗೆ ಸಂಚರಿಸುವ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ.

‘ಗಂಗಾವಳಿ ಸೇತುವೆಯ ಕಾಮಗಾರಿ ಮುಗಿದಿದ್ದು, ಆ ರಸ್ತೆಯಲ್ಲಿ ಅಂಕೋಲಾಕ್ಕೆ ಬಸ್ ಸಂಚಾರ ಆರಂಭಿಸಬೇಕು. ಇದು ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ’ ಎನ್ನುತ್ತಾರೆ ವಿನೋದ ಗೌಡ.

ಮುಂಡಗೋಡ ಬಸ್‌ ನಿಲ್ದಾಣದಿಂದ ಹೊರಡುವ ಸಾರಿಗೆ ಬಸ್‌ನಲ್ಲಿ ವಿದ್ಯಾರ್ಥಿಗಳು ಮೆಟ್ಟಿಲು ಮೇಲೆ ನಿಂತು ಪ್ರಯಾಣಿಸುತ್ತಿರುವುದು.
ಜೊಯಿಡಾದಿಂದ ವಾಗೇಲಿಗೆ ರಾತ್ರಿ ತಂಗುವ ಬಸ್ಸು ಕಾರ್ಟೊಳಿಯವರೆಗೆ ಮಾತ್ರ ಬರುತ್ತದೆ. ಅಲ್ಲಿಂದ 10 ಕಿ.ಮೀ ದೂರದಲ್ಲಿರುವ ವಾಗೇಲಿಗೆ ನಡೆದುಕೊಂಡು ಸಂಚರಿಸಬೇಕಾಗುತ್ತದೆ
– ಯುವರಾಜ ಮೀರಾಶಿ, ಜೊಯಿಡಾ ಕಾಲೇಜು ವಿದ್ಯಾರ್ಥಿ
ಈ ಹಿಂದೆ ಸ್ಥಗಿತಗೊಂಡಿದ್ದ ಮಾರ್ಗಗಳನ್ನು ಶಕ್ತಿ ಯೋಜನೆ ಜಾರಿಯಾದ ಬಳಿಕ ಪುನರಾರಂಭಿಸಲಾಗಿದೆ. ಬಸ್‌ಗಳು ಸಾಧ್ಯವಾದಷ್ಟು ಸುಸ್ಥಿತಿಯಲ್ಲಿಡುವ ಪ್ರಯತ್ನ ಸಾಗಿದ್ದು ಬೇಡಿಕೆ ಇರುವ ಗ್ರಾಮಗಳಿಗೆ ಬಸ್ ಸಂಚರಿಸಲು ಕ್ರಮವಹಿಸುತ್ತೇವೆ
– ಬಸವರಾಜ ಅಮ್ಮನವರ್, ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ
ಕೆಳಾಸೆ ಕುದ್ರಗೋಡ ಸೇರಿ 12 ಹೊಸ ಮಾರ್ಗದಲ್ಲಿ ಬಸ್ ಓಡಿಸುವಂತೆ ಬೇಡಿಕೆಯಿದ್ದು ಈವರೆಗೆ ಸ್ಪಂದನೆಯಿಲ್ಲ. ಈ ಭಾಗದ ನಾಗರಿಕರಿಗೆ ತೊಂದರೆ ಆಗುತ್ತಿದೆ
– ಪಾರ್ವತಿ ಮರಾಠಿ ಕೆಳಾಸೆ ಗ್ರಾಮಸ್ಥೆ
ಹಳಿಯಾಳದ ಹಳೆ ಬಸ್ ನಿಲ್ದಾಣದಲ್ಲಿ ಗ್ರಾಮೀಣ ಭಾಗಕ್ಕೆ ತೆರಳುವ ಬಸ್‌ ದಟ್ಟಣೆಯಾಗುವ ಕಾರಣದಿಂದ ಏರಲು ವಿದ್ಯಾರ್ಥಿಗಳು ಪ್ರಯಾಣಿಕರು ಪೈಪೋಟಿಯಲ್ಲಿ ತೊಡಗಿದ್ದರು.

ಜೋತುಬಿದ್ದು ಪ್ರಯಾಣಿಸುವ ಅನಿವಾರ್ಯತೆ

ಮುಂಡಗೋಡ ತಾಲ್ಲೂಕಿನ ಮುಡಸಾಲಿ ಬ್ಯಾನಳ್ಳಿ ಗ್ರಾಮಗಳಿಗೆ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚರಿಸುತ್ತಿಲ್ಲ. ಶಕ್ತಿ ಯೋಜನೆ ಜಾರಿ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ವಿದ್ಯಾರ್ಥಿಗಳು ಬಸ್‌ಗಳ ಮೆಟ್ಟಿಲುಗಳಲ್ಲಿ ಜೋತುಬಿದ್ದು ಪ್ರಯಾಣಿಸಬೇಕಾದ ಅನಿವಾರ್ಯತೆ ಕೆಲವೆಡೆ ಕಂಡುಬರುತ್ತಿದೆ.

‘ಪಟ್ಟಣದಲ್ಲಿ ಬಸ್‌ ಘಟಕ ಉದ್ಘಾಟನೆಯಾಗಿ ಒಂದೂವರೆ ವರ್ಷ ಆಗುತ್ತ ಬಂದರೂ ಇನ್ನೂ ತನಕ ಕಾರ್ಯನಿರ್ವಹಿಸುತ್ತಿಲ್ಲ. ಗ್ರಾಮೀಣ ಭಾಗದ ಸಾರಿಗೆ ಸಮಸ್ಯೆ ಇನ್ನೂ ಜೀವಂತವಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಪ್ರಕಾಶ ಹೇಳಿದರು. 

ದೂರದ ಗ್ರಾಮಗಳಿಗೆ ಬಸ್ ಸಂಚಾರ ಇಳಿಕೆ

ಅಂಕೋಲಾ ತಾಲ್ಲೂಕಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಂಜಗುಣಿ ಬೆಲೇಕೇರಿ ಕಣಗೀಲ್ ಬೆಳಂಬಾರ ಸೇರಿದಂತೆ ಅನೇಕ ಗ್ರಾಮಗಳಿಗೆ ಬಸ್ ಸಂಚಾರ ವ್ಯವಸ್ಥೆ ಕಡಿಮೆಯಾಗಿದೆ. ಶಾಲೆ–ಕಾಲೇಜು ಸಮಯಕ್ಕೆ ಒಂದೇ ಬಸ್ಸು ಸಂಚರಿಸುವುದರಿಂದ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಹೊನ್ನೇಬೈಲ್ ಗ್ರಾಮಸ್ಥ ಮಂಜುನಾಥ ಗೌಡ.

‘ದೂರದ ಅಗಸೂರು ರಾಮನಗುಳಿ ಕುಂಟಗಣಿ ಸೇರಿದಂತೆ ಈ ಭಾಗದಲ್ಲಿ ಬಸ್ ಸೌಲಭ್ಯದ ಕೊರತೆ ಇದೆ. ಇಲ್ಲಿರುವ ಬಸ್ ತಂಗುದಾಣಗಳು ಶಿಥಿಲಾವಸ್ಥೆಯಲ್ಲಿವೆ’ ಎನ್ನುತ್ತಾರೆ ಕುಂಟಗಣಿ ಗ್ರಾಮಸ್ಥ ಅಭಿಷೇಕ ನಾಯಕ.

ಬಸ್ ಕೊರತೆ ಕಾರಣದಿಂದ ಉಳವಿ ಭಾಗದ ಹಳ್ಳಿಗಳ ವಿದ್ಯಾರ್ಥಿಗಳು ಬಸ್ ಹತ್ತಲು ಕುಂಬಾರವಾಡ ಬಸ್ ನಿಲ್ದಾಣದಲ್ಲಿ ಪೈಪೋಟಿಯಲ್ಲಿ ತೊಡಗಿದ್ದರು.
ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ, ರವಿ ಸೂರಿ, ಜ್ಞಾನೇಶ್ವರ ದೇಸಾಯಿ, ಪ್ರವೀಣಕುಮಾರ ಸುಲಾಖೆ, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.