ಕುಮಟಾ: ತಾಲ್ಲೂಕಿನ ಕೋನಳ್ಳಿಯ ವನದುರ್ಗಾ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಬ್ರಹ್ಮಾನಂದ ಸರಸ್ವತಿ ಶ್ರೀಗಳ ಚಾತುರ್ಮಾಸ್ಯ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ನಾಲ್ಕು ತಾಸುಗಳ ‘ಗುರು ದಕ್ಷಿಣೆ’ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು.
ದ್ರೋಣಾಚಾರ್ಯರು ಹಸ್ತಿನಾಪುರದ ಗುರುಕುಲದಲ್ಲಿ ಪಾಂಡವರು ಹಾಗೂ ಕೌರವರಿಗೆ ವಿದ್ಯೆ ಕಲಿಸುವಾಗ ‘ನನಗೂ ಬಿಲ್ಲು ವಿದ್ಯೆ ಕಲಿಸಿ’ ಎಂದು ಪಕ್ಕದ ಕರಿಪುರದ ಬೇಡರ ಯುವಕ ಏಕಲವ್ಯ ಅಂಗಲಾಚುತ್ತಾನೆ. ಆದರೆ ದ್ರೋಣರು ಆತನ ಜಾತಿಯ ಕಾರಣ ನೀಡಿ ವಿದ್ಯೆ ಕಲಿಸಲು ನಿರಾಕರಿಸುತ್ತಾರೆ. ಆದರೆ ಏಕಲವ್ಯ ದ್ರೋಣರ ಮಣ್ಣಿನ ಮೂರ್ತಿ ನಿರ್ಮಿಸಿ ಅದರಿಂದ ಪ್ರೇರಣೆ ಪಡೆದು ಬಿಲ್ಲು ವಿದ್ಯೆ ಕಲಿಯುತ್ತಾನೆ. ಪಾಂಡವರಿಂದ ಈ ವಿಷಯ ತಿಳಿದ ದ್ರೋಣರು ಏಕಲವ್ಯನಲ್ಲಿಗೆ ಹೋಗಿ ಗುರುದಕ್ಷಿಣೆಯಾಗಿ ಹೆಬ್ಬೆರಳು ಕೆಳುತ್ತಾರೆ. ವಿಚಲಿತನಾಗದ ಏಕಲವ್ಯ, ‘ಭಕ್ತಿಯಿಂದ ಧ್ಯಾನಿಸಿದವರಿಗೂ ಒಲಿದು ಗುರು ಪ್ರೇರಣೆ ನೀಡಿದ್ದಿರಿ. ನೀವು ಕೇಳಿದ್ದು ಹೆಬ್ಬರಳನ್ನು ಮಾತ್ರ. ನಾನು ನನ್ನ ಕೊರಳನ್ನೇ ಕೊಡಬಲ್ಲೆ’ ಎಂದು ಹೆಬ್ಬೆರಳು ಕತ್ತರಿಸಿ ಕೊಡುತ್ತಾನೆ. ಭಾವಪರವಶರಾದ ದ್ರೋಣರು ‘ನಿನ್ನ ಗುರುಭಕ್ತಿಗೆ ನಾನೇ ತಲೆಬಾಗಬೇಕು. ನಿನ್ನ ಬೆರಳು ಕೇಳಿದ ನಾನು ಮುಂದೆ ಶಸ್ತ್ರ ಹಿಡಿಯುವ ಸಂದರ್ಭ ಬಂದರೆ ಆಗ ನನ್ನ ತಲೆಯೇ ಹೋಗಲಿ’ ಎಂದು ಶಪಿಸಿಕೊಳ್ಳುತ್ತಾರೆ.
ಏಕಲವ್ಯನಾಗಿ ಖ್ಯಾತ ಕಲಾವಿದ ಜಬ್ಬಾರ್ ಸಮೋ ಸಂಪಾಜೆ, ದ್ರೋಣನಾಗಿ ಯಕ್ಷಗಾನ ವೃತ್ತಿ ಮೇಳ ಕಲಾವಿದ ಆನಂದ ಭಟ್ಟ, ದ್ರುಪದನಾಗಿ ಶಿಕ್ಷಕ ಮಂಜುನಾಥ ಗಾಂವ್ಕರ್ ಬರ್ಗಿ, ಕೌರವನಾಗಿ ಶಿಕ್ಷನ ಎನ್.ಆರ್. ನಾಯ್ಕ, ಅರ್ಜುನನಾಗಿ ಶಿಕ್ಷಕ ತಿಮ್ಮಣ್ಣ ಭಟ್ಟ ಪಾತ್ರಗಳಿಗೆ ಜೀವ ತುಂಬಿದರು.
ದತ್ತಾತ್ರೇಯ ನಾಯ್ಕ ಕೋನಳ್ಳಿ ಭಾಗವತರಾಗಿ, ರಾಮನ್ ಭಟ್ಟ ಚಂಡೆ ವಾದಕರಾಗಿ ಹಾಗೂ ಸುಬ್ರಹ್ಮಣ್ಯ ಮೂರೂರು ಮದ್ದಲೆ ವಾದಕರಾಗಿ ಹಿಮ್ಮೇಳದಲ್ಲಿದ್ದರು. ಬ್ರಹ್ಮಾನಂದ ಸ್ವರಸ್ವತಿ ಶ್ರೀ ಕಾರ್ಯಕ್ರಮ ವೀಕ್ಷಿಸಿದರು. ಚಾತುರ್ಮಾಸ್ಯ ಸಮನ್ವಯ ಸಮಿತಿಯ ಅಧ್ಯಕ್ಷ ಎಚ್.ಆರ್. ನಾಯ್ಕ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.