ADVERTISEMENT

ಅಪರಾಧ ಪ್ರಕರಣ ಭೇದಿಸಲು ತಂತ್ರಜ್ಞಾನ ಬಳಕೆ

ಮುಖ್ಯಮಂತ್ರಿ ಪದಕ ಸ್ವೀಕರಿಸಿದ ವನ್ಯಜೀವಿ ಸಂರಕ್ಷಕ ಯಲ್ಲಾನಾಯಕ ಹಮಾಣಿ

ಶಾಂತೇಶ ಬೆನಕನಕೊಪ್ಪ
Published 24 ನವೆಂಬರ್ 2020, 13:07 IST
Last Updated 24 ನವೆಂಬರ್ 2020, 13:07 IST
ಉಪವಲಯ ಅರಣ್ಯಾಧಿಕಾರಿ ಯಲ್ಲಾನಾಯಕ .ಎಲ್. ಹಮಾಣಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಪದಕ ಸ್ವೀಕರಿಸಿದರು.
ಉಪವಲಯ ಅರಣ್ಯಾಧಿಕಾರಿ ಯಲ್ಲಾನಾಯಕ .ಎಲ್. ಹಮಾಣಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಪದಕ ಸ್ವೀಕರಿಸಿದರು.   

ಮುಂಡಗೋಡ: ಕ್ಲಿಷ್ಟಕರವೆನಿಸಿದ್ದ ಅರಣ್ಯಗಳ್ಳತನ ಪ್ರಕರಣಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ, ಆರೋಪಿಗಳನ್ನು ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉಪವಲಯ ಅರಣ್ಯಾಧಿಕಾರಿ ಯಲ್ಲಾನಾಯಕ ಎಲ್. ಹಮಾಣಿ ಅವರು 2018-19ನೇ ಸಾಲಿನ ವನ್ಯಜೀವಿ ಸಂರಕ್ಷಣೆ ಹಾಗೂ ಅಪರಾಧ ತಡೆಯುವಿಕೆಗಾಗಿ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಇಲ್ಲಿನ ಕಾಮಗಾರಿ ವಿಭಾಗದಲ್ಲಿ ಉಪವಲಯ ಅರಣ್ಯಾಧಿಕಾರಿ ಆಗಿ ಕೆಲಸ ಮಾಡುತ್ತಿರುವ ಯಲ್ಲಾನಾಯಕ, ಮರಗಳ್ಳರು ಯಾವುದೇ ಸುಳಿವು ಬಿಡದಂತೆ ಅರಣ್ಯ ಸಂಪತ್ತು ಲೂಟಿ ಮಾಡುತ್ತಿದ್ದ 50ಕ್ಕೂ ಹೆಚ್ಚು ಪ್ರಕರಣವನ್ನು ಸಿಡಿಆರ್‌, ಟಿಡಿಆರ್‌, ಮೊಬೈಲ್‌ ಲೊಕೇಷನ್‌, ಸಾಮಾಜಿಕ ಜಾಲತಾಣಗಳ ನೆರವು ಬಳಸಿ ಭೇದಿಸಿದ್ದಾರೆ.

ADVERTISEMENT

ಉತ್ತರ ಕನ್ನಡ ಜಿಲ್ಲೆಯ ಪ್ರಕರಣಗಳನ್ನು ಹೊರತು ಪಡಿಸಿ ಬೆಳಗಾವಿ, ಧಾರವಾಡ, ಚಿಕ್ಕಮಗಳೂರು ಜಿಲ್ಲೆಗಳ ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಿದ್ದಾರೆ.

'ಸಿಸಿಎಫ್ ಯತೀಶಕುಮಾರ, ಡಿಎಫ್‍ಒ ಗೋಪಾಲಕೃಷ್ಣ ಹೆಗಡೆ ಸೇರಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಪ್ರೋತ್ಸಾಹದಿಂದ ಮುಖ್ಯಮಂತ್ರಿಗಳ ಪದಕ ಲಭಿಸಿದೆ. ಹಲವು ಪ್ರಕರಣಗಳ ತನಿಖೆಯಲ್ಲಿ ಸಹಕರಿಸಿದ ಹೊನ್ನಾವರ ಸಿಪಿಐ ಶ್ರೀಧರ್, ಅಂಕೋಲಾ ಎಸ್.ಐ ಸಂಪತ್‌ಕುಮಾರ, ಯಲ್ಲಾಪುರ ಠಾಣೆಯ ಸಿಬ್ಬಂದಿ ಶಫಿ ಅವರ ಸಹಾಯವನ್ನು ಮರೆಯುವಂತಿಲ್ಲ. ಶ್ರೀಗಂಧ ಮರಗಳ ಅಕ್ರಮ ಕಟಾವು ತಡೆದು, ರೈತರಿಗೆ ಅನುಕೂಲ ಮಾಡಿಕೊಡಲು ಶ್ರಮಿಸುತ್ತೇನೆ' ಎಂದು ಹಮಾಣಿ 'ಪ್ರಜಾವಾಣಿ'ಗೆ ತಿಳಿಸಿದರು.‌

'ಮುಂಡಗೋಡ ತಾಲ್ಲೂಕಿನಲ್ಲಿ ನಡೆದಿದ್ದ ಗಂಧದ ಕಟ್ಟಿಗೆ ಕಳ್ಳತನ ಪ್ರಕರಣ ಭೇದಿಸುವಲ್ಲಿ, ಕಿರವತ್ತಿಯಲ್ಲಿ ನಡೆದಿದ್ದ ಸಾಗವಾನಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಟು ಜನ ಆರೋಪಿಗಳನ್ನು ಬಂಧಿಸಿರುವುದು ಸೇರಿದಂತೆ ಹಲವು ಪ್ರಕರಣಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಭೇದಿಸಿ ಇಲಾಖೆಗೆ ಹೆಸರು ತಂದುಕೊಟ್ಟಿದ್ದಾರೆ. ಇದರ ಜೊತೆಗೆ ವಿವಿಧ ಜಾತಿಯ ಹಾವುಗಳನ್ನು ರಕ್ಷಿಸಿ, ಮರಳಿ ಕಾಡಿಗೆ ಬಿಟ್ಟಿದ್ದಾರೆ‘ ಎಂದು ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲಕೃಷ್ಣ ಹೆಗಡೆ ಮೆಚ್ಚುಗೆ ವ್ಯಕ್ತಪಡಿಸಿದರು.

'ಕಳೆದ ಎರಡು ವರ್ಷಗಳಿಂದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ನೀಡಲಾಗುತ್ತಿದೆ. ರಾಜ್ಯಮಟ್ಟದ ಸಮಿತಿ ಮೂಲಕ ಆಯ್ಕೆ ಮಾಡಲಾಗುತ್ತಿದೆ. ಅಪರಾಧ ಪ್ರಕರಣಗಳನ್ನು ತಂತ್ರಜ್ಞಾನದ ಮೂಲಕ ಪತ್ತೆಹಚ್ಚಿರುವುದು ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ವಿಶೇಷ ಕಾಳಜಿ ವಹಿಸಿರುವುದರಿಂದ ಯಲ್ಲಾನಾಯಕ ಹಮಾಣಿ ಅವರು ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ' ಎಂದು ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಯತೀಶಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.