ADVERTISEMENT

ಸಿದ್ದಾಪುರ | ಕುಸಿತದ ಅಪಾಯದಲ್ಲಿ ‘ಭುವನಗಿರಿ’

ಹೆದ್ದಾರಿ ವಿಸ್ತರಣೆಗೆ ಮಣ್ಣು ತೆರವು: ಐತಿಹಾಸಿಕ ದೇವಾಲಯಕ್ಕೆ ಹಾನಿ, ಆತಂಕ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 5:26 IST
Last Updated 4 ಜುಲೈ 2025, 5:26 IST
ಸಿದ್ದಾಪುರ ತಾಲ್ಲೂಕಿನ ಕುಮಟಾ- ಕೊಡಮಡಗಿ ರಾಜ್ಯ ಹೆದ್ದಾರಿಯಲ್ಲಿರುವ ಭುವನಗಿರಿ ಗುಡ್ಡ ಕುಸಿತದ ಪರಿಣಾಮ ಚರಂಡಿಯ ನೀರು ರಸ್ತೆಯ ಮೇಲೆ ಹರಿಯುತ್ತಿರುವುದು 
ಸಿದ್ದಾಪುರ ತಾಲ್ಲೂಕಿನ ಕುಮಟಾ- ಕೊಡಮಡಗಿ ರಾಜ್ಯ ಹೆದ್ದಾರಿಯಲ್ಲಿರುವ ಭುವನಗಿರಿ ಗುಡ್ಡ ಕುಸಿತದ ಪರಿಣಾಮ ಚರಂಡಿಯ ನೀರು ರಸ್ತೆಯ ಮೇಲೆ ಹರಿಯುತ್ತಿರುವುದು    

ಸಿದ್ದಾಪುರ: ರಾಜ್ಯದ ಏಕೈಕ ಭುವನೇಶ್ವರಿ ದೇವಾಲಯ ಹೊಂದಿರುವ ತಾಲ್ಲೂಕಿನ ಭುವನಗಿರಿ ಗುಡ್ಡ ಕುಸಿತದ ಅಪಾಯ ಎದುರಿಸುತ್ತಿದೆ. ಹೆದ್ದಾರಿ ವಿಸ್ತರಣೆಗಾಗಿ ಕೆಲ ತಿಂಗಳ ಹಿಂದೆ ಗುಡ್ಡದ ಬುಡದಲ್ಲಿ ಜೆಸಿಬಿ ಬಳಸಿ ಕಾಮಗಾರಿ ನಡೆಸಿದ ಬಳಿಕ ಇಂತಹ ಅಪಾಯ ಎದುರಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಕುಮಟಾ–ಕೊಡಮಡಗಿ ರಾಜ್ಯ ಹೆದ್ದಾರಿಯ ಅಂಚಿನಲ್ಲಿಯೇ ಭುವನಗಿರಿ ಗುಡ್ಡವಿದೆ. ಅದರ ಮೇಲೆ ಐತಿಹಾಸಿಕ ಭುವನಗಿರಿ ದೇವಾಲಯವಿದೆ. ಬಿಳಗಿ ರಾಜರ ಕಾಲದಲ್ಲಿ ನಿರ್ಮಾಣವಾಗಿದ್ದ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಮಳೆಗಾಲದ ಆರಂಭದಲ್ಲೇ ಪ್ರಸಿದ್ಧ ತಾಣದಲ್ಲಿ ಕುಸಿತ ಸಮಸ್ಯೆ ಎದುರಾಗಿರುವುದು ಜನರಲ್ಲಿ ಆತಂಕವನ್ನೂ ಉಂಟುಮಾಡಿದೆ.

‘ನಾಡದೇವಿ ಎಂದು ಪರಿಗಣಿತವಾಗಿರುವ ಭುವನಗಿರಿಯ ಭುವನೇಶ್ವರಿ ದೇವಸ್ಥಾನ ಅಭಿವೃದ್ಧಿ ವಿಚಾರದಲ್ಲಿ ಹಿಂದಿನಿಂದಲೂ ನಿರ್ಲಕ್ಷಕ್ಕೆ ಒಳಗಾಗುತ್ತಲೇ ಇದೆ. ಸ್ಥಳೀಯರು ಮತ್ತು ಭಕ್ತರ ಸಹಕಾರದಿಂದ ದೇವಾಲಯವನ್ನು ಅಭಿವೃದ್ಧಿಪಡಿಸಿ ತಕ್ಕ ಮಟ್ಟಿಗಿನ ಸೌಕರ್ಯಗಳನ್ನು ಒದಗಿಸಿದ್ದೇವೆ. ಬೇಸಿಗೆಯಲ್ಲಿ ರಸ್ತೆ ವಿಸ್ತರಣೆಗೆ ಗುಡ್ಡದ ಬುಡದ ಮಣ್ಣನ್ನು ತೆಗೆಯಲಾಗಿತ್ತು. ನಂತರ ಸುರಿಯುತ್ತಿರುವ ಭಾರಿ ಮಳೆಯಿಂದ ಗುಡ್ಡ ಕುಸಿಯಲಾರಂಭಿಸಿದೆ’ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು ಹೇಳಿದರು.

ADVERTISEMENT

‘ಗುಡ್ಡಕ್ಕೆ ತಡೆಗೋಡೆ ನಿರ್ಮಿಸದಿದ್ದರೆ ಭಾರಿ ಪ್ರಮಾಣದಲ್ಲಿ ಕುಸಿತ ಉಂಟಾಗುವ ಸಾಧ್ಯತೆ ಇದೆ. ಗುಡ್ಡ ಕುಸಿದರೆ ಪುರಾತನ ಕಾಲದ ದೇವಸ್ಥಾನಕ್ಕೂ ಧಕ್ಕೆ ಉಂಟಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

‘ಸರ್ಕಾರಕ್ಕೆ, ಕನ್ನಡಪರ ಸಂಘಟನೆಗಳಿಗೆ ನವೆಂಬರ್ ತಿಂಗಳಿನಲ್ಲಿ ಮಾತ್ರ ಭುವನೇಶ್ವರಿ ದೇವಿಯ ನೆನಪಾಗುತ್ತದೆ. ಆ ನಂತರ ದೇವಾಲಯದ ಕಡೆ ಯಾರೂ ಲಕ್ಷ ವಹಿಸುವುದಿಲ್ಲ. ಸರ್ಕಾರ ಮತ್ತು ಕನ್ನಡ ಪರ ಸಂಘಟನೆಗಳು ಕೇವಲ ಕನ್ನಡ ಪರ ಕಾರ್ಯಕ್ರಮ ಆಯೋಜಿಸಲು ದೇವಾಲಯವನ್ನು ಸೀಮಿತಗೊಳಿಸದೇ ದೇವಾಲಯದ ಅಭಿವೃದ್ಧಿಗೆ, ಸಂಭವಿಸಬಹುದಾದ ಆಪತ್ತಿನಿಂದ ದೇವಾಲಯವನ್ನು ರಕ್ಷಿಸಲು ಬೆಂಬಲವಾಗಿ ನಿಂತರೆ ಉತ್ತಮ’ ಎನ್ನುತ್ತಾರೆ ಸ್ಥಳೀಯರಾದ ಪರಮೇಶ್ವರ ಭಟ್ಟ.

‘ಭುವನಗಿರಿ ಗುಡ್ಡದ ಬಳಿ ಮಣ್ಣು ರಸ್ತೆಗೆ ಕುಸಿದ ಕಾರಣ ಬೇಸಿಗೆಯಲ್ಲಿ ಸುಮಾರು 2 ಮೀಟರ್‌ನಷ್ಟು ಮಣ್ಣನ್ನು ತೆರವುಗೊಳಿಸಲಾಗಿತ್ತು. ಮಳೆಯ ಕಾರಣದಿಂದ ಪುನಃ ಗುಡ್ಡ ಕುಸಿತ ಉಂಟಾಗಿದೆ. ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಶಶಿಕಾಂತ ಗೌಡ ಪ್ರತಿಕ್ರಿಯಿಸಿದ್ದಾರೆ.

ಭುವನಗಿರಿಯಲ್ಲಿ ಭುಕುಸಿತ ತಡೆಗೆ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲು ಕಳೆದ ವರ್ಷ ₹1.5 ಕೋಟಿ ಮೊತ್ತಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಹಣ ಮಂಜೂರಾಗಿರಲಿಲ್ಲ. ಮರುಪ್ರಸ್ತಾವ ಸಲ್ಲಿಸಲಾಗುತ್ತದೆ
ಶಶಿಕಾಂತ ಗೌಡ ಲೋಕೋಪಯೋಗಿ ಇಲಾಖೆ ಎಇಇ

ಪುಷ್ಕರಣಿಗೆ ಚರಂಡಿ ನೀರು! ‘ರಾಜರ ಆಳ್ವಿಕೆ ಕಾಲದಲ್ಲಿ ನಿರ್ಮಿಸಿದ ಪುಷ್ಕರಣಿ ಭುವನಗಿರಿ ಗುಡ್ಡದಲ್ಲಿದೆ. ಅದರ ಪಕ್ಕದಲ್ಲಿದ್ದ ಅಡ್ಡ ಚರಂಡಿ (ಸಿಡಿ) ಸಂಪೂರ್ಣ ಮುಚ್ಚಿಹೋಗಿದೆ. ಸರಿಪಡಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದರೂ ಸ್ಪಂದನೆ ಸಿಕ್ಕಿಲ್ಲ. ರಸ್ತೆ ಪಕ್ಕದ ಚರಂಡಿ ನೀರು ಪುಷ್ಕರಣಿ ಸೇರುತ್ತಿದೆ’ ಎಂದು ದೇವಾಲಯದ ಆಡಳಿತ ಮಂಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.