ADVERTISEMENT

ಉಳವಿ ಚನ್ನಬಸವೇಶ್ವರ ತೇರು ಸಂಪನ್ನ: ಮುಗಿಲು ಮುಟ್ಟಿದ ಸಾವಿರಾರು ಭಕ್ತರ ಜಯಘೋಷ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 14:50 IST
Last Updated 16 ಫೆಬ್ರುವರಿ 2022, 14:50 IST
ಜೊಯಿಡಾದ ಉಳವಿಯಲ್ಲಿ ಬುಧವಾರ ನೆರವೇರಿದ ಚನ್ನಬಸವೇಶ್ವರ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು
ಜೊಯಿಡಾದ ಉಳವಿಯಲ್ಲಿ ಬುಧವಾರ ನೆರವೇರಿದ ಚನ್ನಬಸವೇಶ್ವರ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು   

ಜೊಯಿಡಾ: ‘ಅಡಿಕೇಶ್ವರ, ಮಡಿಕೇಶ್ವರ ಉಳವಿ ಚನ್ನಬಸವೇಶ್ವರ’ ಎಂಬ ಜೈಕಾರದೊಂದಿಗೆ ಉಳವಿ ಚನ್ನಬಸವೇಶ್ವರ ಮಹಾ ರಥೋತ್ಸವವು ಬುಧವಾರ ನೆರವೇರಿತು.

ಕೋವಿಡ್ ನಿಬಂಧನೆ ನಡುವೆಯೂ ಸಾವಿರಾರು ಭಕ್ತರು ಭಾಗವಹಿಸಿ ಸಂಭ್ರಮದಿಂದ ತೇರನ್ನೆಳೆದರು. ಹಳಿಯಾಳ– ಜೊಯಿಡಾ ಶಾಸಕ ಆರ್.ವಿ.ದೇಶಪಾಂಡೆ ಚನ್ನ ಬಸವೇಶ್ವರನಿಗೆ ಹಣ್ಣು ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು. ನಂತರ ಜಾತ್ರಾ ರಥವನ್ನೇರಿ ದೇವರ ದರ್ಶನ ಪಡೆದರು.

ಜಾತ್ರೆಯ ಸಂದರ್ಭದಲ್ಲಿ ಸಂಚಾರ ನಿಯಂತ್ರಣಕ್ಕೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹರಸಾಹಸ ಪಟ್ಟರು. ಚಾಹನ ದಟ್ಟಣೆ ನಿಯಂತ್ರಣಕ್ಕೆ ಬಾರದೆ ಸುಮಾರು ಎರಡು ಗಂಟೆಗಳ ಕಾಲ ಜನ ಊರಿಗೆ ಮರಳಲು ಪರದಾಡಬೇಕಾಯಿತು. ದೇವರ ದರ್ಶನಕ್ಕೆ ಮಧ್ಯಾಹ್ನದ ನಂತರ ಬಂದ ಭಕ್ತರು, ಐದಾರು ಕಿಲೋಮೀಟರ್ ನಡೆದುಕೊಂಡೇ ಹೋಗಬೇಕಾಯಿತು.

ADVERTISEMENT

ಉಳವಿ ಟ್ರಸ್ಟ್ ಸಮಿತಿ ಅಧ್ಯಕ್ಷ ಗಂಗಾಧರ ಕಿತ್ತೂರ, ಉಪಾಧ್ಯಕ್ಷ ಸಂಜಯ ಕಿತ್ತೂರ, ಸದಸ್ಯ ಬಿ.ಸಿ.ಉಮಾಪತಿ, ತಹಸೀಲ್ದಾರ್ ಸಂಜಯ ಕಾಂಬಳೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಬಡಕುಂದ್ರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಮೇಶ ನಾಯ್ಕ, ಉಳವಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಲಾ ಮಿರಾಶಿ, ಉಪಾಧ್ಯಕ್ಷ ಮಂಜುನಾಥ ಮುಖಾಶಿ, ಅರ್ಚಕ ಶಂಕ್ರಯ್ಯ ಕಲ್ಮಠ ಶಾಸ್ತ್ರಿ ಮುಂತಾದವರು ರಥೋತ್ಸವದ ಸಂದರ್ಭದಲ್ಲಿ ಇದ್ದರು.

ಜಿಲ್ಲಾಡಳಿತದ ನಿರ್ದೇಶನದಂತೆ ಟ್ರಸ್ಟ್‌ನಿಂದ ಜಾತ್ರೆಗೆ ಹಾಗೂ ರಥೋತ್ಸವಕ್ಕೆ ಜನರು ಸೇರದಂತೆ ಮನವಿ ಮಾಡಲಾಗಿತ್ತು. ಅದರ ಹೊರತಾಗಿಯೂ ವಿವಿಧ ಜಿಲ್ಲೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.