ADVERTISEMENT

ಸೂಪಾ ಅಣೆಕಟ್ಟೆಯಿಂದ ಹೆಚ್ಚುವರಿ ನೀರು ಹೊರಕ್ಕೆ

ಕಾಳಿ ನದಿಯ ಬೊಮ್ಮನಹಳ್ಳಿ ಜಲಾಶಯಕ್ಕೆ 7 ಸಾವಿರ ಕ್ಯುಸೆಕ್ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2018, 14:35 IST
Last Updated 29 ಆಗಸ್ಟ್ 2018, 14:35 IST
ಕಾಳಿ ನದಿಗೆ ಜೊಯಿಡಾ ತಾಲ್ಲೂಕಿನಲ್ಲಿ ಕಟ್ಟಲಾಗಿರುವ ಸೂಪಾ ಅಣೆಕಟ್ಟೆಯ ಮೂರು ರೇಡಿಯಲ್‌ ಗೇಟ್‌ಗಳನ್ನು ಬುಧವಾರ ತೆರೆಯಲಾಯಿತು
ಕಾಳಿ ನದಿಗೆ ಜೊಯಿಡಾ ತಾಲ್ಲೂಕಿನಲ್ಲಿ ಕಟ್ಟಲಾಗಿರುವ ಸೂಪಾ ಅಣೆಕಟ್ಟೆಯ ಮೂರು ರೇಡಿಯಲ್‌ ಗೇಟ್‌ಗಳನ್ನು ಬುಧವಾರ ತೆರೆಯಲಾಯಿತು   

ಕಾರವಾರ:ಜೊಯಿಡಾ ತಾಲ್ಲೂಕಿನಲ್ಲಿ ಕಾಳಿ ನದಿಗೆ ಕಟ್ಟಲಾಗಿರುವ ಸೂಪಾ ಜಲಾಶಯವು ಭರ್ತಿಯಾಗುವಮಟ್ಟದ ಅತ್ಯಂತ ಸನಿಹದಲ್ಲಿದೆ. ಹೀಗಾಗಿಬುಧವಾರ ಅಣೆಕಟ್ಟೆಯಿಂದ 7 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ. ಹೆಚ್ಚುವರಿ ನೀರನ್ನು ಹರಿಸುವ ಸಲುವಾಗಿ 12 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಗೇಟ್‌ಗಳನ್ನು ತೆರೆಯಲಾಗಿದೆ.

ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, 16,529ಕ್ಯುಸೆಕ್ಒಳಹರಿವಿದೆ. ಸಮುದ್ರ ಮಟ್ಟದಿಂದ 564 ಮೀಟರ್ ಎತ್ತರವಿರುವ ಈ ಜಲಾಶಯದಲ್ಲಿ147 ಟಿಎಂಸಿ ಅಡಿ ನೀರು ಸಂಗ್ರಹಿಸಲು ಅವಕಾಶವಿದೆ. ಇಷ್ಟು ನೀರಿನ ಸಂಗ್ರಹದಲ್ಲಿ ದಿನವೊಂದಕ್ಕೆ ತಲಾ ಒಂದು ಕೋಟಿ ಯೂನಿಟ್‌ನಂತೆ 360 ದಿನ ವಿದ್ಯುತ್ ಉತ್ಪಾದನೆ ಮಾಡಲುಸಾಧ್ಯವಿದೆ.

1987ರಲ್ಲಿ ಲೋಕಾರ್ಪಣೆಯಾದಸೂಪಾ ಅಣೆಕಟ್ಟೆ 1994ರಲ್ಲಿ ಮೊದಲ ಬಾರಿಗೆ ಭರ್ತಿಯಾಗಿತ್ತು. 2006ರಲ್ಲಿ ಎರಡನೇ ಬಾರಿಗೆ ಭರ್ತಿಯಾಗಿದ್ದಾಗ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೂನದಿಗೆ ನೀರು ಹರಿಸಲಾಗಿತ್ತು.

ADVERTISEMENT

ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್ ಅಬ್ದುಲ್ ಮಜೀದ್, ‘ಜಲಾಶಯದಲ್ಲಿ ಪ್ರಸ್ತುತ 140 ಟಿಎಂಸಿ ಅಡಿ ನೀರು ಇದೆ. ಜಲಾನಯನ ಪ್ರದೇಶದಲ್ಲಿ ಇನ್ನೂ ಮಳೆ ಮುಂದುವರಿಯುವ ಮುನ್ಸೂಚನೆಯಿದೆ. ಆದ್ದರಿಂದ ಅಣೆಕಟ್ಟೆಯಲ್ಲಿ ಒಳಹರಿವು ಮತ್ತು ಹೊರಹರಿವನ್ನು ನಿಭಾಯಿಸಬೇಕಿದೆ. ಈ ಸಲುವಾಗಿ ನೀರು ಬಿಡಲಾಗಿದೆ’ ಎಂದು ತಿಳಿಸಿದರು.

‘ಇಲ್ಲಿಂದ ಹೊರಹೋದ ನೀರು ಕೆಳಭಾಗದಲ್ಲಿರುವ ಬೊಮ್ಮನಹಳ್ಳಿ ಅಣೆಕಟ್ಟೆಗೆ ಹರಿಯುತ್ತದೆ. ಅಲ್ಲಿ ಇನ್ನೂ ಎರಡು ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹಿಸಲು ಸಾಧ್ಯವಿದೆ. ಅದೂ ಭರ್ತಿಯಾದ ನಂತರ ನದಿಗೆ ನೀರು ಹರಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕಾಳಿ ಜಲವಿದ್ಯುತ್ ಯೋಜನೆಯ ಮುಖ್ಯ ಎಂಜಿನಿಯರ್ ಕೆ.ನಂಜುಂಡೇಶ್ವರ ಹಾಜರಿದ್ದರು. ಅಪರೂಪದ ವಿದ್ಯಮಾನಕಣ್ತುಂಬಿಕೊಳ್ಳಲು ಅಣೆಕಟ್ಟೆಯ ಕೆಳಭಾಗದಲ್ಲಿ ನೂರಾರು ಜನರು ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.