ADVERTISEMENT

ಕಾರವಾರ: ಕಡಲು ಸೇರಿದ 103 ಆಮೆ ಮರಿಗಳು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2022, 12:24 IST
Last Updated 6 ಮಾರ್ಚ್ 2022, 12:24 IST
ಕಾರವಾರದ ದೇವಬಾಗ ಕಡಲತೀರದಲ್ಲಿ ಭಾನುವಾರ ಮೊಟ್ಟೆಗಳಿಂದ ಹೊರಬಂದ ‘ಆಲಿವ್ ರಿಡ್ಲೆ’ ಕಡಲಾಮೆಯ ಮರಿಗಳು
ಕಾರವಾರದ ದೇವಬಾಗ ಕಡಲತೀರದಲ್ಲಿ ಭಾನುವಾರ ಮೊಟ್ಟೆಗಳಿಂದ ಹೊರಬಂದ ‘ಆಲಿವ್ ರಿಡ್ಲೆ’ ಕಡಲಾಮೆಯ ಮರಿಗಳು   

ಕಾರವಾರ: ತಾಲ್ಲೂಕಿನ ದೇವಬಾಗ ಕಡಲತೀರವು ಭಾನುವಾರ, ‘ಆಲಿವ್ ರಿಡ್ಲೆ’ ಕಡಲಾಮೆಯ ಮರಿಗಳು ಮೊಟ್ಟೆಯಿಂದ ಹೊರ ಬರುವ ಸಂಭ್ರಮಕ್ಕೆ ಸಾಕ್ಷಿಯಾಯಿತು. 103 ಮರಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು, ಮಕ್ಕಳು, ಸಾರ್ವಜನಿಕರು ಸಮುದ್ರಕ್ಕೆ ಸೇರಿಸಿದರು.

ಇಲ್ಲಿನ ಮರಳಿನಲ್ಲಿ ಕಡಲಾಮೆಯು ಮೊಟ್ಟೆಯಿಟ್ಟಿದ್ದನ್ನು ಸ್ಥಳೀಯರು ಜ.10ರಂದು ಗುರುತಿಸಿದ್ದರು. ಬಳಿಕ ಅರಣ್ಯ ಇಲಾಖೆಯಿಂದ ಆ ಜಾಗಕ್ಕೆ ಗೂಡನ್ನು ಅಳವಡಿಸಿ ರಕ್ಷಿಸಲಾಗಿತ್ತು. ಭಾನುವಾರ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಮರಳಿನ ಕೆಳಗಿನಿಂದ ಒಂದೊಂದೇ ಮರಿಗಳು ಮೇಲೆ ಬರಲಾರಂಭಿಸಿದವು. ಈ ಭಾಗದಲ್ಲಿ ಆಮೆಗಳು ಮೊಟ್ಟೆಯಿಟ್ಟಿರುವುದು ಸುಮಾರು 10 ವರ್ಷಗಳ ನಂತರ ಇದೇ ಮೊದಲಾಗಿದೆ.

ಹೆಚ್ಚಿನ ಮಾಹಿತಿ ನೀಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ, ‘ಮೊದಲ ಬಾರಿಗೆ ಮೊಟ್ಟೆಯಿಡುವ ಆಮೆಗಳು ಸುಮಾರು 80, ನಂತರ 130– 140ರಷ್ಟು ಮೊಟ್ಟೆಗಳನ್ನು ಇಡುತ್ತವೆ. ಕಡಲತೀರದಲ್ಲಿ ಎಲ್ಲಿ ಸಿಗುತ್ತವೋ ಅಲ್ಲೇ ಅವುಗಳನ್ನು ಸಂರಕ್ಷಣೆ ಮಾಡಲಾಗುತ್ತದೆ. ಕಾರವಾರ ತಾಲ್ಲೂಕಿನಲ್ಲಿ ಈ ವರ್ಷ 11 ಮತ್ತು ಅಂಕೋಲಾ ತಾಲ್ಲೂಕಿನಲ್ಲಿ ಮೂರು ಕಡೆಗಳಲ್ಲಿ ಆಮೆಗಳು ಮೊಟ್ಟೆಯಿಟ್ಟಿವೆ. ಅಂದಾಜು 1,400 ಮೊಟ್ಟೆಗಳನ್ನು ರಕ್ಷಿಸಲಾಗಿದೆ. ಇನ್ನು ಕೆಲವು ದಿನಗಳಲ್ಲಿ ಮತ್ತಷ್ಟು ಮರಿಗಳು ಹೊರ ಬರಲಿದ್ದು, ಸಮುದ್ರಕ್ಕೆ ಸೇರಿಸಲಾಗುವುದು’ ಎಂದರು.

ADVERTISEMENT

ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಮೋದ್ ಮಾಹಿತಿ ನೀಡಿ, ‘ಸಮುದ್ರ ತೀರದ ಮರಳಿನಲ್ಲಿ ಸುಮಾರು ಒಂದು ಅಡಿ ಆಳದಲ್ಲಿ ಆಮೆಗಳು ಮೊಟ್ಟೆಯಿಡುತ್ತವೆ. 45 ದಿನಗಳ ನಂತರ ಮರಿಗಳು ಹೊರಬರುತ್ತವೆ. ಈ ಪ್ರಕ್ರಿಯೆ ಆರಂಭವಾಗಿ 12 ಗಂಟೆಗಳ ಅವಧಿಯಲ್ಲಿ ಎಲ್ಲ ಮರಿಗಳು ಮೊಟ್ಟೆಯಿಂದ ಹೊರಬರುತ್ತವೆ’ ಎಂದು ತಿಳಿಸಿದರು.

‘ಆಲಿವ್ ರಿಡ್ಲೆ’ ಕಡಲಾಮೆಯು ಮೊಟ್ಟೆಯಿಟ್ಟಿದ್ದನ್ನು ಗುರುತಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದವರಿಗೆ ಪ್ರತಿ ಗೂಡಿಗೆ ₹ 1,000 ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಇದರಿಂದ ಆಮೆ ಸಂತಾನಾಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಎಂ.ಪ್ರಿಯಾಂಗಾ, ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ರಾಘವೇಂದ್ರ, ವಿಶ್ವನಾಥ, ಗಜಾನನ, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಕಾಶ, ಚಂದ್ರಶೇಖರ, ಯೋಜನಾ ಸಹಾಯಕ ಶಾನವಾಝ್, ಕಾರವಾರದ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ಹಾಗೂ ನೂರಾರು ಸಾರ್ವಜನಿಕರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.