ADVERTISEMENT

ಕಾರವಾರ: ಚತುಷ್ಪಥ ಹೆದ್ದಾರಿ ಸವಾರಿ ಮತ್ತಷ್ಟು ದುಬಾರಿ

ಏ.1ರಿಂದ ಪರಿಷ್ಕೃತ ದರ: ಫಾಸ್ಟ್‌ಸ್ಟ್ಯಾಗ್ ಹೊಂದಿರದಿದ್ದರೆ ದುಪ್ಪಟ್ಟು ಶುಲ್ಕ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2025, 6:04 IST
Last Updated 30 ಮಾರ್ಚ್ 2025, 6:04 IST
ಅಂಕೋಲಾ ತಾಲ್ಲೂಕಿನ ಬೇಲೆಕೇರಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ–66ರ ಟೋಲ್ ಪ್ಲಾಜಾ
ಅಂಕೋಲಾ ತಾಲ್ಲೂಕಿನ ಬೇಲೆಕೇರಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ–66ರ ಟೋಲ್ ಪ್ಲಾಜಾ   

ಕಾರವಾರ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಸಂಚರಿಸುವ ವಾಹನಗಳು ಏ.1 ರಿಂದ ಮತ್ತಷ್ಟು ದುಬಾರಿ ಮೊತ್ತದ ಬಳಕೆದಾರರ ಶುಲ್ಕ (ಟೋಲ್) ಪಾವತಿಸಬೇಕಿದೆ. ಫಾಸ್ಟ್‌ಟ್ಯಾಗ್ ಹೊಂದಿಲ್ಲದ ವಾಹನಗಳು ಪ್ಲಾಜಾದ ಮಾರ್ಗದಲ್ಲಿ ಬಂದರೆ ದುಪ್ಪಟ್ಟು ದಂಡ ವಿಧಿಸುವುದಾಗಿ ಎಚ್ಚರಿಸಲಾಗಿದೆ.

ಪ್ರತಿ ವರ್ಷವೂ ಆರ್ಥಿಕ ವರ್ಷದ ಆರಂಭದಲ್ಲಿ ಹೆದ್ದಾರಿಯ ಬಳಕೆದಾರರ ಶುಲ್ಕ ಪರಿಷ್ಕರಣೆ ಮಾಡಲಾಗುತ್ತದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಟೋಲ್ ದರದಲ್ಲಿ ಅಷ್ಟೇನೂ ಹೆಚ್ಚಳ ಮಾಡಿಲ್ಲ. ಲಘು ವಾಹನಗಳ ಟೋಲ್ ದರವನ್ನು ಸರಾಸರಿ ₹5ರಷ್ಟು, ಬಸ್, ಟ್ರಕ್ ಸೇರಿದಂತೆ 2 ಆ್ಯಕ್ಸೆಲ್ ವಾಹನಗಳ ಟೋಲ್ ದರವನ್ನು ₹10 ರಿಂದ ₹15, ಭಾರಿ ಗಾತ್ರದ ವಾಹನಗಳ ಟೋಲ್ ದರವನ್ನು ₹20 ರಿಂದ ₹25 ರಷ್ಟು ಹೆಚ್ಚಳ ಮಾಡಲಾಗಿದೆ.

ಚತುಷ್ಪಥ ಹೆದ್ದಾರಿ–66ರಲ್ಲಿ ಮೂರು ಟೋಲ್ ಪ್ಲಾಜಾಗಳಿದ್ದು, ಅಂಕೋಲಾ ತಾಲ್ಲೂಕಿನ ಬೇಲೆಕೇರಿ ಮತ್ತು ಕುಮಟಾ ತಾಲ್ಲೂಕಿನ ಹೊಳೆಗದ್ದೆ ಪ್ಲಾಜಾ ಜಿಲ್ಲೆಯ ವ್ಯಾಪ್ತಿಯಲ್ಲಿವೆ. ಉಡುಪಿ ಜಿಲ್ಲೆಯ ಶಿರೂರಿನಲ್ಲಿ ಇನ್ನೊಂದು ಟೋಲ್ ಪ್ಲಾಜಾ ನಿರ್ಮಿಸಲಾಗಿದೆ. ಈ ಮೂರು ಪ್ಲಾಜಾಗಳಲ್ಲಿಯೂ ಪರಿಷ್ಕೃತ ಟೋಲ್ ಸಂಗ್ರಹ ಏ.1 ರಿಂದ ಆರಂಭಗೊಳ್ಳಲಿದೆ ಎಂದು ಹೆದ್ದಾರಿ ನಿರ್ಮಾಣ ಮತ್ತು ನಿರ್ವಹಣೆಯ ಗುತ್ತಿಗೆ ಪಡೆದಿರುವ ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಕಂಪನಿ ತಿಳಿಸಿದೆ.

ADVERTISEMENT

‘ಪರಿಷ್ಕೃತ ದರವು ಫಾಸ್ಟ್‌ಟ್ಯಾಗ್ ಹೊಂದಿರುವ ವಾಹನಗಳಿಗೆ ಮಾತ್ರ ಅನ್ವಯ. ಫಾಸ್ಟ್‌ಟ್ಯಾಗ್ ಇಲ್ಲದೆ ಪ್ಲಾಜಾದ ಮಾರ್ಗದಲ್ಲಿ ಬಂದು ನಿಲ್ಲುವ ವಾಹನಕ್ಕೆ ಆ ವಾಹನದ ಮಿತಿಗೆ ಇರುವ ಶುಲ್ಕದ ಎರಡು ಪಟ್ಟು ಶುಲ್ಕ ಆಕರಿಸಲಾಗುತ್ತದೆ’ ಎಂದೂ ಹೇಳಿದೆ.

‘ಟೋಲ್ ಪ್ಲಾಜಾಗಳಿರುವ 20 ಕಿ.ಮೀ ಪ್ರದೇಶದ ವ್ಯಾಪ್ತಿಯಲ್ಲಿರುವ ಜನರ ವಾಣಿಜ್ಯೇತರ ಉದ್ದೇಶದ ವಾಹನಗಳಿಗೆ ಮಾಸಿಕ ಪಾಸ್ ಶುಲ್ಕವನ್ನು ₹340ರ ಬದಲಾಗಿ ₹350ಕ್ಕೆ ನಿಗದಿಗೊಳಿಸಲಾಗಿದೆ. ಎಲ್ಲ ಬಗೆಯ ವಾಹನಗಳು 24 ತಾಸಿನೊಳಗೆ ಹಿಂದಿರುಗಿ ಬಂದಲ್ಲಿ ಪಾವತಿಸಬೇಕಾದ ಟೋಲ್‍ನಲ್ಲಿ ಶೇ25 ರಷ್ಟು ರಿಯಾಯಿತಿ ಸಿಗಲಿದೆ. ಟೋಲ್ ಪಾವತಿ ದಿನದಿಂದ ಒಂದು ತಿಂಗಳಿನಲ್ಲಿ 50 ಬಾರಿ ಪ್ರಯಾಣಿಸಿದ ವಾಹನಗಳಿಗೆ ಶೇ33ರ ವರೆಗೂ ರಿಯಾಯಿತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಜಿಲ್ಲೆಯ ವ್ಯಾಪ್ತಿಯಲ್ಲೇ ನೋಂದಣಿಯಾದ ವಾಣಿಜ್ಯ ಉದ್ದೇಶದ ಬಳಕೆಯ ವಾಹನಗಳಿಗೆ ಶೇ50 ರಷ್ಟು ರಿಯಾಯಿತಿ ನೀಡಲಾಗುವುದು’ ಎಂದು ಕಂಪನಿ ಹೇಳಿದೆ.

‘189 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನೂ ಪೂರ್ಣರೂಪದಲ್ಲಿ ಕಾಮಗಾರಿ ನಡೆದಿಲ್ಲ. ಕಾರವಾರ, ಭಟ್ಕಳ, ಕುಮಟಾದಲ್ಲಿ ಹಲವೆಡೆ ಕೆಲಸ ಸ್ಥಗಿತಗೊಂಡಿದೆ. ಆದರೆ, ಕಂಪನಿ ಮಾತ್ರ ಟೋಲ್ ದರ ಪ್ರತಿ ಬಾರಿ ಏರಿಕೆ ಮಾಡುತ್ತಿದೆ’ ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಅಂಕಿ–ಅಂಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.