ADVERTISEMENT

ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ

ಪಟ್ಟಣ ಪಂಚಾಯಿತಿ: ವಿಶೇಷ ಸಭೆ ಕರೆಯುಂತೆ ಮುಖ್ಯಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 5:14 IST
Last Updated 28 ಜೂನ್ 2022, 5:14 IST
ಮುಂಡಗೋಡ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಹಾವೇರಿ, ಉಪಾಧ್ಯಕ್ಷ ಮಂಜುನಾಥ ಹರಮಲಕರ್‌ ಹತ್ತು ಜನ ಸದಸ್ಯರೊಂದಿಗೆ ಮುಖ್ಯಾಧಿಕಾರಿಗೆ ಸೋಮವಾರ ಮನವಿ ನೀಡಿದರು
ಮುಂಡಗೋಡ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಹಾವೇರಿ, ಉಪಾಧ್ಯಕ್ಷ ಮಂಜುನಾಥ ಹರಮಲಕರ್‌ ಹತ್ತು ಜನ ಸದಸ್ಯರೊಂದಿಗೆ ಮುಖ್ಯಾಧಿಕಾರಿಗೆ ಸೋಮವಾರ ಮನವಿ ನೀಡಿದರು   

ಮುಂಡಗೋಡ: ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಲು ವಿಶೇಷ ಸಭೆ ಕರೆಯುವಂತೆ, 12 ಜನ ಸದಸ್ಯರು ಸಹಿ ಮಾಡಿರುವ ಮನವಿಯನ್ನು ಸೋಮವಾರ ಮುಖ್ಯಾಧಿಕಾರಿಗೆ ನೀಡಿದರು. ಇದಕ್ಕೆ ಪ್ರತಿಯಾಗಿ ಅಧ್ಯಕ್ಷ, ಉಪಾಧ್ಯಕ್ಷರು ಹತ್ತು ಜನ ಸದಸ್ಯ ಬಲದೊಂದಿಗೆ, ಸಂಜೆ ಮುಖ್ಯಾಧಿಕಾರಿಗೆ ಮನವಿ ನೀಡಿದರು. ಅಲ್ಲದೇ, ಮೂರು ಜನ ಸದಸ್ಯರು ಎರಡೂ ಮನವಿಗೆ ಸಹಿ ಹಾಕಿರುವುದು ಕುತೂಹಲ ಮೂಡಿಸಿದೆ.

ಒಟ್ಟು 19 ಸದಸ್ಯ ಬಲವನ್ನು ಹೊಂದಿರುವ ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ 10 ಜನ ಬಿಜೆಪಿ ಹಾಗೂ 9ಜನ ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾದ ಸದಸ್ಯರಿದ್ದಾರೆ. ಬಿಜೆಪಿ ಪಕ್ಷದಿಂದ ಆಯ್ಕೆಯಾಗಿರುವ ರೇಣುಕಾ ಹಾವೇರಿ ಅಧ್ಯಕ್ಷೆಯಾಗಿ ಹಾಗೂ ಉಪಾಧ್ಯಕ್ಷರಾಗಿ ಮಂಜುನಾಥ ಹರಮಲಕರ್‌ ಅಧಿಕಾರ ನಡೆಸುತ್ತಿದ್ದಾರೆ. ಆದರೆ, ಆಡಳಿತ ಪಕ್ಷದ ಐದು ಜನ ಸದಸ್ಯರು ಸಹಿತ ಒಟ್ಟು 12ಜನ ಸದಸ್ಯರು ಸಹಿ ಮಾಡಿರುವ ಮನವಿಯಲ್ಲಿ, ಅವಿಶ್ವಾಸ ಮಂಡನೆಗೆ ವಿಶೇಷ ಸಭೆ ಕರೆಯುವಂತೆ ಒತ್ತಾಯಿಸಿದ್ದರು.

ಇದಕ್ಕೆ ಪ್ರತಿಯಾಗಿ ಸಂಜೆಯ ವೇಳೆಗೆ ಅಧ್ಯಕ್ಷ, ಉಪಾಧ್ಯಕ್ಷರು ಹತ್ತು ಜನ ಸದಸ್ಯ ಬಲದೊಂದಿಗೆ ಮುಖ್ಯಾಧಿಕಾರಿಯನ್ನು ಭೇಟಿಯಾಗಿ, ಬಹುಮತ ತೋರಿಸುವ ಪ್ರಯತ್ನ ಮಾಡಿದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಲು ಕೆಲವು ಸದಸ್ಯರು ಸಹಿ ಮಾಡಿ ಮನವಿ ಸಲ್ಲಿಸಿದ್ದಾರೆ. ಆದರೆ, ಹತ್ತು ಜನ ಸದಸ್ಯರು ಹಾಲಿ ಇರುವ ಅಧ್ಯಕ್ಷ, ಉಪಾಧ್ಯಕ್ಷರ ಪರವಾಗಿ ಇದ್ದೇವೆ ಎಂದು ಮುಖ್ಯಾಧಿಕಾರಿಗೆ ಮನವಿ ನೀಡಿದರು.

ADVERTISEMENT

ತಪ್ಪು ತಿಳುವಳಿಕೆಯಿಂದ ಸಹಿ: ಪಟ್ಟಣ ಪಂಚಾಯಿತಿ ಸದಸ್ಯರಾದ ಶಿವರಾಜ ಸುಬ್ಬಾಯವರ, ರಾಜೇಶ್ವರಿ ಅಂಡಗಿ, ನಿರ್ಮಲಾ ಬೆಂಡ್ಲಗಟ್ಟಿ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಅವರಿಗೆ ಪ್ರತ್ಯೇಕ ಮನವಿ ನೀಡಿದ್ದು, ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಲು ಸಲ್ಲಿಸಿದ್ದ ಮನವಿಯಲ್ಲಿ ತಿಳಿಯದೇ ಸಹಿ ಮಾಡಿದ್ದು, ಹಾಲಿ ಅಧ್ಯಕ್ಷೆ ರೇಣುಕಾ ಹಾವೇರಿ ಹಾಗೂ ಉಪಾಧ್ಯಕ್ಷ ಮಂಜುನಾಥ ಹರಮಲಕರ್‌ ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಈ ಮೊದಲು ನೀಡಿದ್ದ ಅರ್ಜಿಯಲ್ಲಿ ತಮ್ಮ ಹೆಸರುಗಳನ್ನು ಪರಿಗಣಿಸಬಾರದು ಎಂದು ಮನವಿ ಮಾಡಿದ್ದಾರೆ.

ಪಟ್ಟಣ ಪಂಚಾಯಿತಿಯ ಅಧಿಕಾರದ ಗದ್ದುಗೆಗಾಗಿ ಸೋಮವಾರ ಒಂದೇ ದಿನದಲ್ಲಿ ನಾಟಕೀಯ ಬೆಳವಣಿಗೆ ನಡೆದಿರುವುದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.