ADVERTISEMENT

ಒಂದೇ ದಿನ ₹ 1.30 ಲಕ್ಷ ದಂಡ ವಸೂಲಿ!

ದಂಡ ಪ್ರಯೋಗಕ್ಕೆ ಬೆದರಿದ ದ್ವಿಚಕ್ರ ವಾಹನ ಸವಾರರು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 13:27 IST
Last Updated 6 ಸೆಪ್ಟೆಂಬರ್ 2019, 13:27 IST
ಕಾರವಾರದಲ್ಲಿ ಸಂಚಾರ ಮತ್ತು ನಗರಠಾಣೆ ಪೊಲೀಸರು ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಶುಕ್ರವಾರ ದಂಡ ವಿಧಿಸಿದರು
ಕಾರವಾರದಲ್ಲಿ ಸಂಚಾರ ಮತ್ತು ನಗರಠಾಣೆ ಪೊಲೀಸರು ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಶುಕ್ರವಾರ ದಂಡ ವಿಧಿಸಿದರು   

ಕಾರವಾರ:ಇಷ್ಟು ದಿನ ಹೆಲ್ಮೆಟ್ ಧರಿಸದೇ ದಾಖಲೆಗಳನ್ನೂಜೊತೆಗಿಟ್ಟುಕೊಳ್ಳದೇ ದ್ವಿಚಕ್ರ ವಾಹನ ಸವಾರಿ ಮಾಡುತ್ತಿದ್ದವರಿಗೆ ಶುಕ್ರವಾರ ಆಘಾತ ಕಾದಿತ್ತು. ಸಂಚಾರ ಮತ್ತು ನಗರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆಗೆ ಇಳಿದು 130 ಸವಾರರಿಂದ ಬರೋಬ್ಬರಿ ₹ 1.30 ಲಕ್ಷ ದಂಡ ವಸೂಲಿ ಮಾಡಿದರು.

‘ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ನಾವು ಕಾರ್ಯಾಚರಣೆ ಮಾಡಿದ್ದೇವೆ. ಹೆಲ್ಮೆಟ್ ಧರಿಸದವರಿಗೆತಲಾ ₹ 1 ಸಾವಿರದಂತೆ ದಂಡ ವಿಧಿಸಲಾಗಿದೆ. ವಾಹನ ಸವಾರರಿಗೆ ಜಾಗೃತಿ ಮೂಡಲಿ ಎಂಬ ಕಾರಣಕ್ಕಾಗಿ ಆರಂಭಿಕ ಹಂತದಲ್ಲಿ ಕೇವಲ ಹೆಲ್ಮೆಟ್ ಧರಿಸದವರನ್ನು ತಡೆದಿದ್ದೇವೆ. ಈ ಕಾರ್ಯಾಚರಣೆ ಮುಂದುವರಿಯಲಿದ್ದು, ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಸಂಚಾರ ನಿಯಮಗಳ ಉಲ್ಲಂಘನೆಗೂ ದಂಡ ವಸೂಲಿ ಮಾಡಲಾಗುವುದು’ ಎಂದು ಸಂಚಾರ ವಿಭಾಗದ ಪಿಎಸ್‌ಐ ವಿನಾಯಕ ಬಿಲ್ಲವ ತಿಳಿಸಿದರು.

ಹೆಲ್ಮೆಟ್ ಧರಿಸದೇ ಬಂದ ಕೆಲವು ದ್ವಿಚಕ್ರ ವಾಹನ ಸವಾರರು ಪೊಲೀಸರ ಜೊತೆ ವಾಗ್ವಾದಕ್ಕೂ ನಿಂತರು. ಮತ್ತೆ ಕೆಲವರು ಗ್ರೀನ್‌ಸ್ಟ್ರೀಟ್‌ನಲ್ಲಿ ಪೊಲೀಸರನ್ನು ಕಂಡ ಕೂಡಲೇ ತಮ್ಮ ವಾಹನಗಳನ್ನು ತಿರುಗಿಸಿ ಬೇರೆ ಮಾರ್ಗದಲ್ಲಿ ಹೋಗಲು ಯತ್ನಿಸಿದ್ದೂ ಕಂಡುಬಂತು. ಪೊಲೀಸರು ದಂಡ ವಿಧಿಸುತ್ತಿರುವ ಮಾಹಿತಿವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳ ಗ್ರೂಪ್‌ಗಳಲ್ಲಿ ಹರಿದಾಡಿತು. ಇದರಿಂದ ಎಚ್ಚೆತ್ತ ಹಲವರು ಮನೆಯಿಂದ ಹೊರಡುವಾಗ ಹೆಲ್ಮೆಟ್ ಧರಿಸಿ ವಾಹನ ಸವಾರಿ ಮಾಡಿದರು.

ADVERTISEMENT

‘ಸಂಚಾರ ನಿಯಮ ‍ಪಾಲನೆ ಮಾಡುವಂತೆ ಎಷ್ಟು ಹೇಳಿದರೂ ಜಾಗೃತಿ ಮೂಡುತ್ತಿಲ್ಲ. ದಂಡದ ಮೊತ್ತ ಏರಿಕೆಯಾಗಿರುವ ಬಗ್ಗೆ ಕರಪತ್ರಗಳನ್ನು ಮನೆಮನೆಗಳಿಗೆ ಹಂಚಿದ್ದೇವೆ. ಆದರೂವಾಹನ ಸವಾರರು ಎಚ್ಚೆತ್ತುಕೊಳ್ಳಲಿಲ್ಲ.ಇದು ಕೇಂದ್ರ ಸರ್ಕಾರದ ಆದೇಶವಾಗಿದ್ದು, ನಾವೇನೂ ಮಾಡುವಂತಿಲ್ಲ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.