ADVERTISEMENT

ಯಲ್ಲಾಪುರದ ಶಾಲೆಯೊಂದರ 21 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರಿಗೆ ಕೋವಿಡ್ ದೃಢ

ಯಲ್ಲಾಪುರದ ಒಂದೇ ಶಾಲೆಯ ಮಕ್ಕಳು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 16:17 IST
Last Updated 29 ಮಾರ್ಚ್ 2021, 16:17 IST
   

ಯಲ್ಲಾಪುರ: ಪಟ್ಟಣದ ವೈ.ಟಿ.ಎಸ್.ಎಸ್. ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಪ್ರೌಢಶಾಲೆಯ 21 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರಿಗೆ ಸೋಮವಾರ ಕೋವಿಡ್ ದೃಢಪಟ್ಟಿದೆ.

ಕೆಲವು ದಿನಗಳ ಹಿಂದೆ 10ನೇ ತರಗತಿಯ ಒಬ್ಬ ವಿದ್ಯಾರ್ಥಿನಿಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿದಂತೆ 123 ಜನರ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.

ಸಂಸ್ಥೆಯಲ್ಲಿ ಕನ್ನಡ ಪ್ರೌಢಶಾಲೆಯ ಆವರಣ ಪ್ರತ್ಯೇಕವಾಗಿದೆ. ಹಾಗಾಗಿ ಸಮೀಪದಲ್ಲಿರುವ ಇಂಗ್ಲಿಷ್ ಮಾಧ್ಯಮ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳು ಆತಂಕ ಪಡಬೇಕಾಗಿಲ್ಲ ಎನ್ನಲಾಗಿದೆ.

ADVERTISEMENT

ಈ ಕುರಿತು ತಹಶೀಲ್ದಾರ್ ಶ್ರೀಕೃಷ್ಣ ಕಾಮಕರ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕ ಹೊಂದಿದವರ ಗಂಟಲು ದ್ರವವನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗುವುದು. ಇತರ ವಿದ್ಯಾರ್ಥಿಗಳ ಗಂಟಲು ದ್ರವವನ್ನು ಮಂಗಳವಾರ ಪರೀಕ್ಷೆ ಮಾಡಲಾಗುವುದು. ಶಿಕ್ಷಣ ಸಂಸ್ಥೆಯನ್ನು ಸೀಲ್‌ಡೌನ್ ಮಾಡುವ ಕುರಿತು ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.