ADVERTISEMENT

ಉತ್ತರ ಕನ್ನಡ | ಆಳಸಮುದ್ರದಿಂದ ಸಂವಹನಕ್ಕೆ ‘ಟ್ರಾನ್ಸ್‌ಪಾಂಡರ್’

ಮೊದಲ ಹಂತದಲ್ಲಿ ಯಾಂತ್ರೀಕೃತ ದೋಣಿಗಳಿಗೆ ಅಳವಡಿಕೆ

ಗಣಪತಿ ಹೆಗಡೆ
Published 10 ಮೇ 2025, 5:21 IST
Last Updated 10 ಮೇ 2025, 5:21 IST
ಕಾರವಾರದ ಬೈತಕೋಲ ಬಂದರಿನಲ್ಲಿರುವ ಮೀನುಗಾರಿಕೆ ಬೋಟ್‌ವೊಂದರಲ್ಲಿ ಪರಸ್ಪರ ಸಂವಹನಕ್ಕೆ ಅನುಕೂಲವಾಗುವ  ಟ್ರಾನ್ಸ್‌ಪಾಂಡರ್ ಉಪಕರಣ ಅಳವಡಿಸಿರುವುದು.
ಕಾರವಾರದ ಬೈತಕೋಲ ಬಂದರಿನಲ್ಲಿರುವ ಮೀನುಗಾರಿಕೆ ಬೋಟ್‌ವೊಂದರಲ್ಲಿ ಪರಸ್ಪರ ಸಂವಹನಕ್ಕೆ ಅನುಕೂಲವಾಗುವ  ಟ್ರಾನ್ಸ್‌ಪಾಂಡರ್ ಉಪಕರಣ ಅಳವಡಿಸಿರುವುದು.   

ಕಾರವಾರ: ಆಳಸಮುದ್ರ ಮೀನುಗಾರಿಕೆಗೆ ತೆರಳುವ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳ ಚಲನವಲನದ ಮೇಲೆ ನಿಗಾ ಇಡಲು ದ್ವಿಮಾರ್ಗದ ಸಂವಹನ ಯಂತ್ರ (ಟು ವೇ ಟ್ರಾನ್ಸ್‌ಪಾಂಡರ್) ಅಳವಡಿಸುವ ಕಾರ್ಯ ನಡೆದಿದೆ.

ಮೊದಲ ಹಂತದಲ್ಲಿ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಳಸಮುದ್ರಕ್ಕೆ ಸಾಗುವ ಯಾಂತ್ರೀಕೃತ ದೋಣಿಗಳಿಗೆ ಉಪಕರಣ ಅಳವಡಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಯಾಂತ್ರೀಕೃತ ನಾಡದೋಣಿಗಳಿಗೂ ಉಪಕರಣ ಅಳವಡಿಸಲು ಮೀನುಗಾರಿಕೆ ಇಲಾಖೆ ಉದ್ದೇಶಿಸಿದೆ.

‘ಮೀನುಗಾರಿಕೆಗೆ ಕಡಲತೀರದಿಂದ ನೂರಾರು ನಾಟಿಕಲ್ ಮೈಲು ದೂರ ಸಾಗುವ ದೋಣಿಗಳು ಅವಘಡಕ್ಕೆ ತುತ್ತಾದರೆ, ತೊಂದರೆಗೆ ಸಿಲುಕಿದರೆ ಪತ್ತೆ ಮಾಡಲು ಸುಲಭವಾಗುವಂತೆ ಈ ಸಾಧನ ಅಳವಡಿಕೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸಾವಿರಾರು ಮೌಲ್ಯದ ಉಪಕರಣವನ್ನು ಉಚಿತವಾಗಿ ಅಳವಡಿಸುತ್ತಿದೆ’ ಎಂದು ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಬಿನ್ ಬೋಪಣ್ಣ ತಿಳಿಸಿದರು.

ADVERTISEMENT

‘ಟ್ರಾನ್ಸ್‌ಪಾಂಡರ್ ಅಳವಡಿಕೆ ಬಳಿಕ ದೋಣಿ ಚಲಾಯಿಸುವವರು ಅಥವಾ ಮಾಲೀಕರು ಮೊಬೈಲ್‍ ಫೋನ್‌ನಲ್ಲಿ ‘ನಾಭ ಮಿತ್ರ’ ಎಂಬ ಆ್ಯಪ್ ಅಳವಡಿಸಿಕೊಳ್ಳಬೇಕು. ಸಮುದ್ರದಲ್ಲಿ ದೋಣಿಯು ಅಪಾಯಕ್ಕೆ ಸಿಲುಕಿದರೆ ತಕ್ಷಣವೇ ಮೀನುಗಾರಿಕೆ ಇಲಾಖೆ ಕಚೇರಿಗೆ ಸಂದೇಶ ರವಾನೆಯಾಗುತ್ತದೆ. ರಕ್ಷಣೆ ಕಾರ್ಯಾಚರಣೆಗೆ ಧಾವಿಸುವ ಪ್ರತಿ ಕ್ಷಣದ ಮಾಹಿತಿಯು ಆ್ಯಪ್ ಮೂಲಕ ದೋಣಿಯಲ್ಲಿದ್ದವರಿಗೆ ರವಾನೆಯಾಗುತ್ತದೆ. ಸಂದೇಶದ ಮೂಲಕ ಪ್ರತಿ ಕ್ಷಣವೂ ಸ್ವಯಂಚಾಲಿತವಾಗಿ ಸಂವಹನ ನಡೆಯುತ್ತಿರುತ್ತದೆ’ ಎಂದೂ ತಿಳಿಸಿದರು.

ಮೀನುಗಾರಿಕೆ ದೋಣಿಗಳ ಚಲನವಲನಗಳ ಮೇಲೆ ನಿಗಾ ಇಡಲು ಟ್ರಾನ್ಸ್‌ಪಾಂಡರ್ ಅನುಕೂಲವಾಗುತ್ತದೆ. ದೋಣಿಯು ಸಮುದ್ರದಲ್ಲಿ ಯಾವ ಸ್ಥಳದಲ್ಲಿದೆ ಎಂಬುದನ್ನು ತಿಳಿಯಬಹುದು.
ಬಬಿನ್ ಬೋಪಣ್ಣ ಜಂಟಿ ನಿರ್ದೇಶಕ ಮೀನುಗಾರಿಕೆ ಇಲಾಖೆ

ಸುಧಾರಿತ ಉಪಕರಣ ‘2018ರ ಡಿಸೆಂಬರ್ 14ರಂದು ಉಡುಪಿ ಜಿಲ್ಲೆ ಮಲ್ಪೆಯ ‘ಸುವರ್ಣ ತ್ರಿಭುಜ’ ಹೆಸರಿನ ಮೀನುಗಾರಿಕೆ ದೋಣಿ ಮಹಾರಾಷ್ಟ್ರದ ಮಾಲ್ವಣ ಸಮೀಪ ಸಮುದ್ರದಲ್ಲಿ ಕಣ್ಮರೆಯಾಗಿತ್ತು. ಈ ಅವಘಡದ ಬಳಿಕ 20 ಮೀಟರ್‌ಗಿಂತ ಉದ್ದದ ದೋಣಿಗಳಿಗೆ ಸ್ವಯಂಚಾಲಿತ ಮಾಹಿತಿ ವ್ಯವಸ್ಥೆ ಸಾಧನ (ಎಐಎಸ್) ಅಳವಡಿಕೆ ಕಡ್ಡಾಯಗೊಳಿಸಲಾಗಿತ್ತು. ಆದರೆ ಅವು ಕೇವಲ ದೋಣಿಗಳ ಚಲನವಲನದ ಮಾಹಿತಿ ನೀಡುತ್ತಿದ್ದವು. ದಡದಲ್ಲಿದ್ದವರ ಜೊತೆಗೆ ಸಂವಹನ ಸಾಧ್ಯವಾಗುತ್ತಿರಲಿಲ್ಲ. ಆದರೆ ಟ್ರಾನ್ಸ್‌ಪಾಂಡರ್‌ಗಳು ಎರಡೂ ಕಡೆಯಿಂದ ಪರಸ್ಪರ ಸಂವಹನಕ್ಕೆ ಅನುಕೂಲವಾಗಿವೆ’ ಎಂದು ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಬಿನ್ ಬೋಪಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.