ADVERTISEMENT

ಕಾರವಾರ | ಕೃಷಿ ಕ್ಷೇತ್ರ ಹಸನುಗೊಳಿಸದ ಕೆರೆಗಳು

ನಿಧಾನಗತಿಯ ಕೆಲಸ: ರೈತರ ನೆರವಿಗೆ ಬಾರದ ಬೃಹತ್ ಯೋಜನೆ

ಗಣಪತಿ ಹೆಗಡೆ
Published 10 ಮಾರ್ಚ್ 2025, 5:15 IST
Last Updated 10 ಮಾರ್ಚ್ 2025, 5:15 IST
ಶಿರಸಿಯ ಬನವಾಸಿಯಲ್ಲಿ ವರದಾ ನದಿಗೆ ಏತ ನೀರಾವರಿ ಯೋಜನೆಯಡಿ ನಿರ್ಮಿಸಿರುವ ಪಂಪ್ ಹೌಸ್
ಶಿರಸಿಯ ಬನವಾಸಿಯಲ್ಲಿ ವರದಾ ನದಿಗೆ ಏತ ನೀರಾವರಿ ಯೋಜನೆಯಡಿ ನಿರ್ಮಿಸಿರುವ ಪಂಪ್ ಹೌಸ್   

ಕಾರವಾರ: ‘ಹಳಿಯಾಳದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತರಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಆಯವ್ಯಯದಲ್ಲಿ ಘೋಷಿಸಿದರು. ಆದರೆ, ಆರು ವರ್ಷಗಳ ಹಿಂದೆಯೇ ಈ ಯೋಜನೆ ಕೈಗೆತ್ತಿಕೊಂಡಿದ್ದು, ಈವರೆಗೂ ಕಾರ್ಯಾರಂಭಿಸಿಲ್ಲದ್ದಕ್ಕೆ ಹಳಿಯಾಳದ ರೈತ ವಲಯ ಅಸಮಾಧಾನ ವ್ಯಕ್ತಪಡಿಸಿತು.

ಇದು ಕೇವಲ ಹಳಿಯಾಳದ ಸ್ಥಿತಿಯಷ್ಟೆ ಅಲ್ಲ. ಅರೆ ಮಲೆನಾಡು ಪ್ರದೇಶವನ್ನೊಳಗೊಂಡ ಮುಂಡಗೋಡ, ಶಿರಸಿ ತಾಲ್ಲೂಕಿನ ಬನವಾಸಿ ಭಾಗದ್ದೂ ಇದೇ ಕಥೆ. ಇಲ್ಲಿಯೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರತಿ ಚುನಾವಣೆಯ ಪ್ರಚಾರದ ‘ಸರಕು’. ಕಾರ್ಯಾನುಷ್ಠಾನ ಮಾತ್ರ ತಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಆಡಳಿತ ವ್ಯವಸ್ಥೆ ಇದೆ ಎಂಬುದು ಜನರ ಆರೋಪ.

ಬಹುಕೋಟಿ ವೆಚ್ಚದ ಕೆರೆಗೆ ನೀರು ತುಂಬಿಸುವ ಯೋಜನೆಯ ಕಾರ್ಯಲೋಪಗಳನ್ನು ಈವರೆಗೂ ಸರಿಯಾಗಿ ಗುರುತಿಸುವ ಕೆಲಸ ನಡೆದಿಲ್ಲ. ಪೈಪ್‍ಗಳ ಸಂಪರ್ಕ ಪ್ರಕ್ರಿಯೆ ಆರಂಭಿಸಿ ಹಲವು ವರ್ಷ ಕಳೆದರೂ ನೀರು ಕೆರೆಗಳಿಗೆ ಹರಿಯುತ್ತಿಲ್ಲ.

ADVERTISEMENT

‘ಪೈಪ್‍ಲೈನ್ ಸಂಪರ್ಕಕ್ಕೆ ಕೃಷಿ ಭೂಮಿ, ಅರಣ್ಯ ಭೂಮಿಯನ್ನು ಬಳಕೆ ಮಾಡಿಕೊಳ್ಳಲು ಅನುಮತಿಗೆ ಸಮಯ ತಗುಲಿದೆ. ಕೋವಿಡ್, ಇನ್ನಿತರ ತಾಂತ್ರಿಕ ಕಾರಣದಿಂದ ಯೋಜನೆ ಅನುಷ್ಠಾನಕ್ಕೆ ವಿಳಂಬವಾಗಿದೆ’ ಎಂಬುದು ಬೃಹತ್ ನೀರಾವರಿ ನಿಗಮದ ತಾಂತ್ರಿಕ ವಿಭಾಗದ ಅಧಿಕಾರಿಗಳು ನೀಡುವ ಸಮಜಾಯಿಷಿ.

ಶಿರಸಿ ತಾಲ್ಲೂಕಿನ ಬನವಾಸಿ ಭಾಗದ 31 ಬೃಹತ್ ಕೆರೆಗಳನ್ನು ತುಂಬಲು ಅನುಷ್ಠಾನಗೊಂಡ ಬಹುಕೋಟಿ ರೂಪಾಯಿ ವೆಚ್ಚದ ಏತ ನೀರಾವರಿ ಕಾಮಗಾರಿ ಪೂರ್ಣಗೊಂಡು ಎರಡು ವರ್ಷ ಕಳೆದರೂ ವಿದ್ಯುತ್ ಸಂಪರ್ಕದ ಸಮಸ್ಯೆಯಿಂದಾಗಿ ಯೋಜನೆ ಕಾರ್ಯಾರಂಭಿಸಿಲ್ಲ.

ಬನವಾಸಿ ಹೋಬಳಿಯಲ್ಲಿ ಬೇಸಿಗೆಯಲ್ಲಿ ನೀರಿನ ಬವಣೆ ಎದುರಾಗುತ್ತದೆ. ಅಂತರ್ಜಲದ ಕೊರತೆಯೂ ಇದೆ. ಕೆರೆಗಳು ಸಾಕಷ್ಟಿದ್ದರೂ ಜೀವಜಲ ಇಲ್ಲದೇ ಬರಿದಾಗೇ ಇರುತ್ತವೆ. ಹೀಗಾಗಿ ಇಂಥ ಪ್ರದೇಶಗಳ ಕೃಷಿ ಭೂಮಿಗೆ ಅನುಕೂಲವಾಗಲು ವರದಾ ನದಿಯಲ್ಲಿ ಮಳೆಗಾಲದಲ್ಲಿ ಸಮುದ್ರಕ್ಕೆ ಹರಿದು ಹೋಗುತ್ತಿದ್ದ ನೀರನ್ನು ಕೆರೆಗಳಿಗೆ ತುಂಬಿಸಲು 2018ರಲ್ಲಿ ₹65 ಕೋಟಿ ವೆಚ್ಚದ ಏತ ನೀರಾವರಿ ಯೋಜನೆ ಜಾರಿಯಾಗಿತ್ತು. ಅದರ ಕಾಮಗಾರಿ 2022ರಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಮುಕ್ತಾಯ ಕಂಡಿದೆ. ಆದರೆ ಈವರೆಗೂ ಕೆರೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿದಿಲ್ಲ.

‘ಗ್ರಿಡ್‍ಗೆ ವಿದ್ಯುತ್ ಸಂಪರ್ಕ ನೀಡುವ ಸಂಬಂಧ ವಿದ್ಯುತ್ ಕಂಬಗಳನ್ನು ನಿರ್ಮಿಸುವ  ಕಾಮಗಾರಿ ನಡೆದಿದೆ. ಶೀಘ್ರದಲ್ಲೇ ಏತ ನೀರಾವರಿ ಯೋಜನೆಗೆ ವಿದ್ಯುತ್ ಸಂಪರ್ಕ ನೀಡಲು ಕ್ರಮವಹಿಸಲಾಗುವುದು’ ಎಂಬುದಾಗಿ ಶಾಸಕ ಶಿವರಾಮ ಹೆಬ್ಬಾರ ಭರವಸೆ ನೀಡುತ್ತಾರೆ.

ಮುಂಡಗೋಡ ತಾಲ್ಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಕಳೆದ ನಾಲ್ಕು ಚುನಾವಣೆಗಳಲ್ಲಿ ಪ್ರಚಾರದ ಸರಕು ಆಗಿರುವಂತ, ಕೆರೆಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ನಿರೀಕ್ಷೆಯಂತೆ ವೇಗ ಪಡೆದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಕವಲಗಿ ಹಾಗೂ ಬೇಡ್ತಿ ಹಳ್ಳದಿಂದ ತಾಲ್ಲೂಕಿನ 213 ಕೆರೆಗಳಿಗೆ ನೀರು ತುಂಬಿಸುವ ಬೃಹತ್‌ ನೀರಾವರಿ ಯೋಜನೆಯಾಗಿದೆ. ಕವಲಗಿ ಹಳ್ಳದಿಂದ ನೀರು ತುಂಬಿಸುವ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಬೇಡ್ತಿ ಹಳ್ಳದ ಕಾಮಗಾರಿ ಶೇ 70ರಷ್ಟು ಆಗಿದೆ.

‘ಬೇಡ್ತಿ ಹಳ್ಳದಿಂದ ಅಗಡಿ, ಇಂದೂರ ಮಾರ್ಗವಾಗಿ ಮುಖ್ಯ ಪೈಪ್‌ಲೈನ್‌ ಅಳವಡಿಸುವ ಕಾರ್ಯ ಮುಗಿದಿದೆ. ಕವಲಗಿ ಹಳ್ಳದಿಂದ ನೀರು ತುಂಬಿಸುವ ಕಾಮಗಾರಿ ಮುಗಿದಿದ್ದು, ಎರಡು ಬಾರಿ ನೀರು ಹರಿಸುವ ಪರೀಕ್ಷೆ ಸಹ ಮಾಡಲಾಗಿದೆ. ವಿದ್ಯುತ್‌ ಸಂಪರ್ಕ ಇನ್ನಿತರ ಕಾರಣಗಳಿಂದ ಕೆಲಸ ನಿಧಾನವಾಗಿದೆ. ಆದಷ್ಟು ಬೇಗ ಯೋಜನೆ ಮುಕ್ತಾಯಗೊಳ್ಳಲಿದೆ’ ಎಂದು ನೀರಾವರಿ ನಿಗಮದ ಎಇಇ ಮಂಜುನಾಥ ಬಿಂಡಿ ಹೇಳಿದರು.

ಹಳಿಯಾಳ ತಾಲ್ಲೂಕಿನಲ್ಲಿ ಕಾಳಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ 2018ರಲ್ಲಿ ಆರಂಭಗೊಂಡಿದ್ದು, ಈವರೆಗೆ ಶೇ 90ರಷ್ಟು ಕೆಲಸ ಮುಗಿದಿದೆ.

ಒಟ್ಟು ₹220.35 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, 124 ಕಿ.ಮೀ ಉದ್ದದ ವರೆಗೆ ಪೈಪ್‌ಲೈನ್‌ ಅಳವಡಿಸಲಾಗಿದೆ. ತಾಲ್ಲೂಕಿನ 46 ಕೆರೆ 19 ಬಾಂದಾರಗಳನ್ನು ತುಂಬಿಸುವ ಯೋಜನೆ ಹೊಂದಿದ್ದು ಹಳಿಯಾಳ ತಾಲ್ಲೂಕಿನ ಸಾಂಬ್ರಾಣಿ ವರೆಗೆ ಹಾಗೂ ಕಾವಲವಾಡ, ದುಸಗಿ ಬ್ಯಾರೇಜ್‍ವರೆಗೆ ಪೈಪ್‍ಲೈನ್ ಅಳವಡಿಕೆಯಾಗಿದೆ.

‘ಆರು ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿಯಾಗಲಿದೆ. ಜನವರಿಯಿಂದ ಜೂನ್ ತಿಂಗಳಲ್ಲಿ ಕೆರೆಗಳನ್ನು ತುಂಬಿಸಲಾಗುವುದು. ಯೋಜನೆಯ ಕಾಮಗಾರಿ ಸಂಪೂರ್ಣ ಮುಗಿದ ನಂತರ ಪೂರ್ವಭಾವಿಯಾಗಿ ಪರೀಕ್ಷೆಗೋಸ್ಕರ ನೀರನ್ನು ಬಿಡಲಾಗುವುದು. ತಾಂತ್ರಿಕ ಸಮಸ್ಯೆಗಳಿದ್ದರೆ ಪರಿಹರಿಸಿಕೊಂಡು ಕೆಲವೇ ತಿಂಗಳಲ್ಲಿ ಯೋಜನೆ ಕಾರ್ಯಾರಂಭಗೊಳ್ಳಲಿದೆ’ ಎಂದು ನೀರಾವರಿ ನಿಗಮ ಮಂಡಳಿಯ ಸಹಾಯಕ ಎಂಜಿನಿಯರ್ ಮಹೇಶ ಕುಮಾರ ಹೇಳಿದರು.

ಯಲ್ಲಾಪುರ ತಾಲ್ಲೂಕು ಮದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಗೋಡಿನಲ್ಲಿ ಕೆರೆಗೆ ನೀರು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಬೇಡ್ತಿ ನದಿಗೆ ಶಿಡ್ಲಗುಂಡಿ ಸೇತುವೆಯ ಸಮೀಪ ಬಾಂದಾರು ನಿರ್ಮಿಸಿ ಹುಲಗೋಡಿನ ಕೆರೆಗಳಿಗೆ ನೀರು ತುಂಬಿಸುವ ಈ ಯೋಜನೆ ಕಾರ್ಯಗತವಾದಾಗ 80 ಕುಟುಂಬಗಳ ಸುಮಾರು 200 ರೈತರಿಗೆ ಅನುಕೂಲವಾಗಲಿದೆ. ಯೋಜನೆಯಿಂದ ಅಂದಾಜು 220 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಲಿದೆ.

‘ಹುಲಗೋಡದಲ್ಲಿ ಕೆರೆಗೆ ನೀರು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದ್ದು ಮಾರ್ಚ್ ಅಂತ್ಯದ ಒಳಗೆ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ತುಂಬಿಸಲಾಗುವುದು’ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಆರ್.ಎನ್.ನಾಯ್ಕ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಶಾಂತೇಶ ಬೆನಕನಕೊಪ್ಪ, ವಿಶ್ವೇಶ್ವರ ಗಾಂವ್ಕರ.

ಮುಂಡಗೋಡ ತಾಲ್ಲೂಕಿನ ಯರೇಬೈಲ್‌ ಸನಿಹದ ಬೇಡ್ತಿ ಹಳ್ಳದಿಂದ ನೀರು ಎತ್ತಲು ನಿರ್ಮಿಸಿರುವ ಪಂಪ್‌ಹೌಸ್‌
ಹಳಿಯಾಳ ತಾಲ್ಲೂಕಿನ ಮಾಗವಾಡ ರಸ್ತೆ ಹತ್ತಿರ ಕಾಳಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ ಪೈಪ ಲೈನ್‌ ಅಳವಡಿಸುತ್ತಿರುವುದು
ಹಳಿಯಾಳ ತಾಲ್ಲೂಕಿನ ಮಾಗವಾಡ ಹವಗಿ ಕೂಡು ರಸ್ತೆಯ ಬಳಿ ಕಾಳಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ ಅಳವಡಿಸಲು ಪೈಪ್‍ಗಳನ್ನು ರಸ್ತೆ ಬದಿಯಲ್ಲಿ ಇರಿಸಿರುವುದು
ಬನವಾಸಿ ಭಾಗದಲ್ಲಿ ವಿದ್ಯುತ್ ವೋಲ್ಟೇಜ್ ಸಮಸ್ಯೆ ನಿವಾರಿಸುವಂತೆ ದಶಕದ ಬೇಡಿಕೆಯ ಕಾರಣಕ್ಕೆ ನೂತನ ಗ್ರಿಡ್ ಸ್ಥಾಪಿಸಿದ್ದರೂ ವಿದ್ಯುತ್ ಸಂಪರ್ಕ ನೀಡಿಲ್ಲ. ಇದರಿಂದ ಏತ ನೀರಾವರಿ ಯೋಜನೆ ಸಾಕಾರಗೊಂಡರೂ ಪ್ರಯೋಜನಕ್ಕೆ ಬರುತ್ತಿಲ್ಲ
ಚಂದ್ರಶೇಖರ ಗೌಡರ್ ಬನವಾಸಿ ನಿವಾಸಿ
ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ರೈತರ ಗದ್ದೆಗಳಲ್ಲಿ ಕಾಲುವೆ ನಿರ್ಮಿಸಿ ಪೈಪ್‌ಗಳನ್ನು ಹಾಕಿದ್ದಾರೆ. ಈ ವರ್ಷ ಗದ್ದೆ ತೋಟಗಳಿಗೆ ನೀರಿನ ಅಭಾವ ಆಗುವ ಸಾಧ್ಯತೆ ಇದ್ದು ಇಂತಹ ಸಮಯದಲ್ಲಿ ಯೋಜನೆ ಸಾಕಾರಗೊಂಡಿದ್ದರೆ ಬಹಳ ಅನುಕೂಲ ಆಗುತ್ತಿತ್ತು
ಶಿವಕುಮಾರ ಪಾಟೀಲ ರೈತ
ಗುತ್ತಿಗೆದಾರರ ವಿಳಂಬದಿಂದ ಕಾಮಗಾರಿ ತಡವಾಗಿದೆ. ಯೋಜನೆ ಮುಕ್ತಾಯಕ್ಕೆ ಅನುದಾನದ ಕೊರತೆಯಿಲ್ಲ. ಬಜೆಟ್‌ನಲ್ಲಿ ಮುಂದುವರೆದ ಕಾಮಗಾರಿಗೆ ಅಗತ್ಯಕ್ಕೆ ತಕ್ಕಂತೆ ಹಣ ನೀಡಲಾಗಿದೆ. ಈ ವರ್ಷದ ಅಂತ್ಯದೊಳಗೆ ಯೋಜನೆ ಉದ್ಘಾಟನೆಯಾಗಲಿದೆ
ಶಿವರಾಮ ಹೆಬ್ಬಾರ ಶಾಸಕ
- ಹುಲಗೋಡು ಗ್ರಾಮದಲ್ಲಿ ಪೈಪ್‍ಲೈನ್ ಕಾಮಗಾರಿ ನಡೆಯುತ್ತಿದ್ದು ಆದಷ್ಟು ಶೀಘ್ರ ಈ ಯೋಜನೆ ಪೂರ್ಣಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕು
ನರಸಿಂಹ ಭಾಗ್ವತ ಹಲಗೋಡು ಕೃಷಿಕ

ನಿಧಾನಗತಿಯಲ್ಲಿ ಯೋಜನೆ 2018ರ ವಿಧಾನಸಭೆ ಚುನಾವಣೆಗೆ ಕೆಲ ದಿನಗಳ ಮುನ್ನ ಕಾಳಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿಗೆ ಶಾಸಕ ಆರ್.ವಿ.ದೇಶಪಾಂಡೆ ಚಾಲನೆ ನೀಡಿದ್ದರು. 2019ರಲ್ಲಿಯೇ ಕಾಮಗಾರಿ ಮುಗಿಯಬೇಕಿತ್ತು. ನಿಧಾನಗತಿಯಲ್ಲಿ ಕೆಲಸ ನಡೆದಿದೆ. ಕಾಮಗಾರಿಯಿಂದ ಅನೇಕ ರಸ್ತೆಗಳು ಹಾಳಾಗಿವೆ. ಪೈಪ್ ಅಳವಡಿಕೆಗೆ ಅಗೆದ ರಸ್ತೆಗಳನ್ನು ಸರಿಪಡಿಸುವ ಕೆಲಸ ನಡೆದಿಲ್ಲ. ಮಳೆಗಾಲ ಬಂದರೆ ಈ ರಸ್ತೆಗಳಲ್ಲಿ ಸಂಚಾರವೂ ಕಷ್ಟ ಎನ್ನುತ್ತಾರೆ ಸ್ಥಳೀಯ ಗ್ರಾಮಗಳ ಜನರು. ‘ಬಹುಕೋಟಿ ವೆಚ್ಚದಿಂದ ಕಾಮಗಾರಿ ಕೈಗೊಂಡಾಗ ಶೀಘ್ರವಾಗಿ ಗುಣಮಟ್ಟವಾಗಿ ಕಾಮಗಾರಿ ರೈತರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಈ ಹಿಂದೆ ಅನೇಕ ರೈತ ಮುಖಂಡರು ಸಹ ಕಾಳಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಶೀಘ್ರಗತಿಯಿಂದ ಆಗಬೇಕೆಂದು ಹೋರಾಟ ಮಾಡಿದ್ದರು’ ಎಂದು ತೇರಗಾಂವ ಗ್ರಾಮದ ಶಂಕರ ಕಾಜಗಾರ ಕಾಳಗಿನಕೊಪ್ಪ ಗ್ರಾಮದ ಅಶೋಕ ಮೇಟಿ ಚಿಬ್ಬಲಗೇರಿ ಗ್ರಾಮದ ಸಹದೇವ ಪಿಶಪ್ಪಾ ಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.