ಅಂಕೋಲಾ: ತಾಲ್ಲೂಕಿನ ಕೇಣಿಯಲ್ಲಿ ನಿರ್ಮಾಣ ಮಾಡಲು ಉದ್ದೇಶಿತ ವಾಣಿಜ್ಯ ಬಂದರು ಕಾಮಗಾರಿಯನ್ನು ಕೈಬಿಡುವಂತೆ ಶೇಡಿಕುಳಿ ಗ್ರಾಮದ ಮೀನುಗಾರ ಸಮಾಜದವರಿಂದ ತಹಶೀಲ್ದಾರ್ ಚಿಕ್ಕಪ್ಪ ನಾಯಕ ಅವರಿಗೆ ಮನವಿ ಸಲ್ಲಿಸಲಾಯಿತು.
‘ಕೇಣಿ ಸಮುದ್ರ ತೀರವು ಮೀನುಗಾರಿಕೆಗೆ ಅತ್ಯಂತ ಸೂಕ್ತ ಸ್ಥಳವಾಗಿದೆ. ಇಲ್ಲಿ ಸಿಗುವ ವಿವಿಧ ಜಾತಿಯ ಮೀನುಗಳನ್ನು ಹಿಡಿದು ತಂದು ಮಾರಾಟ ಮಾಡಿ, ಸುತ್ತಲಿನ ಹತ್ತಾರು ಹಳ್ಳಿಯ ಮೀನುಗಾರರು ಜೀವನ ಮಾಡುತ್ತಿದ್ದೇವೆ. ಬೇರೆ ಬೇರೆ ಊರಿನವರಾದರು ನಾವು ಸಮುದ್ರವನ್ನೇ ನಮ್ಮ ತಾಯಿ ಎಂದು ಭಾವಿಸಿ ಸಹೋದರರಂತೆ ಅನ್ಯೋನ್ಯತೆಯಿಂದ ಬದುಕುತ್ತಿದ್ದೇವೆ. ನಮಗೆ ಮೀನುಗಾರಿಕೆ ಬಿಟ್ಟರೆ ಯಾವುದೇ ಮೂಲ ಕಸುಬು ಇಲ್ಲ. ಈ ಸ್ಥಳದಲ್ಲೇ ಬಂದರು ನಿರ್ಮಾಣವಾದರೆ ನಮ್ಮ ಬದುಕೇ ನಾಶವಾಗಲಿದೆ’ ಎಂದರು.
‘ಈಗಾಗಲೇ ನೌಕಾನೆಲೆ ಮತ್ತಿತರ ಯೋಜನೆಗಳಿಂದ ಕಾರವಾರ-ಅಂಕೋಲಾ ಭಾಗದ ಸಮುದ್ರ ತೀರಗಳು ಇದ್ದೂ ಇಲ್ಲದಂತಾಗಿವೆ. ಆದ್ದರಿಂದ ಸರ್ಕಾರ ಈ ಯೋಜನೆಯನ್ನು ಕೂಡಲೇ ಕೈ ಬಿಡಬೇಕು. ಒಂದಾನು ವೇಳೆ ವಾಣಿಜ್ಯ ಬಂದರು ನಿರ್ಮಾಣಕ್ಕೆ ಅವಕಾಶ ಅಥವಾ ಅನುಮತಿ ನೀಡಿದರೆ ಮುಂದಿನ ದಿನಗಳಲ್ಲಿ ನಮ್ಮ ಬದುಕು ಮತ್ತು ಮೂಲಭೂತ ಹಕ್ಕಿಗಾಗಿ ಯಾವುದೇ ಹಂತದ ಹೋರಾಟಕ್ಕೂ ಸಿದ್ಧರಿದ್ದೇವೆ’ ಎಂದು ತಿಳಿಸಿದರು.
ಉಮೇಶ್ ಶಂಕರ್, ಚಂದ್ರಶೇಖರ, ಹರೀಶ್ ಮಹದೇವ್, ಸಂತೋಷ ಕುರ್ಲೆ, ಸತೀಶ್ ಎಂ., ಮಾರುತಿ ಗೋವಿಂದ, ಆಕಾಶ್ ಗಿರಾಫ್, ಮಂಜುನಾಥ್ ಸಾಧಿಯೇ, ದಂಡು ಫಿರನಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.