ADVERTISEMENT

ಬೈತಕೋಲ: ಗುಡ್ಡ ಕುಸಿಯುವ ಆತಂಕ

​ಪ್ರಜಾವಾಣಿ ವಾರ್ತೆ
Published 25 ಜೂನ್ 2023, 14:17 IST
Last Updated 25 ಜೂನ್ 2023, 14:17 IST
ಕಾರವಾರ ನಗರದ ಬೈತಕೋಲ ಬಳಿ ಗುಡ್ಡದ ಬಳಿ ಕುಸಿದ ಬಂಡೆಕಲ್ಲುಗಳನ್ನು ತೆರವುಗೊಳಿಸುವ ಕೆಲಸ ನಡೆಯಿತು.
ಕಾರವಾರ ನಗರದ ಬೈತಕೋಲ ಬಳಿ ಗುಡ್ಡದ ಬಳಿ ಕುಸಿದ ಬಂಡೆಕಲ್ಲುಗಳನ್ನು ತೆರವುಗೊಳಿಸುವ ಕೆಲಸ ನಡೆಯಿತು.   

ಕಾರವಾರ: ಮುಂಗಾರು ಮಳೆಯ ಆರಂಭದಲ್ಲೇ ನಗರದ ಬೈತಕೋಲ ಬಳಿ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ನೌಕಾದಳದಿಂದ ಗುಡ್ಡ ಕಡಿದು ನಿರ್ಮಿಸಲಾಗಿದ್ದ ರಸ್ತೆ ಅಲ್ಲಲ್ಲಿ ಕುಸಿಯುವ ಭಯ ಆವರಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಳೆದ ವರ್ಷ ನೌಕಾದಳದ ವತಿಯಿಂದ ಬೈತಕೋಲ ಗ್ರಾಮದಲ್ಲಿರುವ ಗುಡ್ಡವನ್ನು ಕೊರೆದು ರಸ್ತೆ ನಿರ್ಮಾಣ ಕೆಲಸ ನಡೆದಿತ್ತು. ಸ್ಥಳೀಯರ ವಿರೋಧದ ನಡುವೆಯೂ ಕಾಮಗಾರಿ ಮುಕ್ಕಾಲು ಭಾಗದಷ್ಟು ಮುಗಿದಿತ್ತು. ಕೆಲವೆಡೆ ಮಾತ್ರ ರಸ್ತೆಗೆ ಅಡ್ಡಲಾಗಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಪೈಪ್‍ಗಳನ್ನು ಅಳವಡಿಸಿ, ಕಾಂಕ್ರೀಟ್ ಹಾಸು ಹಾಕಲಾಗಿತ್ತು.

‘ಎರಡು ದಿನಗಳಿಂದ ಎಡೆಬಿಡದೆ ಸುರಿದ ಮಳೆಯ ಪರಿಣಾಮವಾಗಿ ಗುಡ್ಡದಿಂದ ವ್ಯಾಪಕವಾಗಿ ನೀರು ಹರಿದು ಬರುತ್ತಿದೆ. ರಸ್ತೆ ನಿರ್ಮಿಸಲು ಗುಡ್ಡ ಕೊರೆದ ಪರಿಣಾಮವಾಗಿ ಭೂ ಕೊರೆತದ ಪ್ರಮಾಣ ಹೆಚ್ಚಿದೆ. ಗುಡ್ಡದ ಬುಡದಲ್ಲಿ 20ಕ್ಕೂ ಹೆಚ್ಚು ಮನೆಗಳಿದ್ದು ಗುಡ್ಡ ಕುಸಿದರೆ ದೊಡ್ಡ ಅವಘಡ ಸಂಭವಿಸಬಹುದು ಎಂಬ ಆತಂಕದಲ್ಲಿದ್ದೇವೆ’ ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ADVERTISEMENT

ಜನರ ದೂರಿನ ಕಾರಣ ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ್ದ ಗ್ರೇಡ್–2 ತಹಶೀಲ್ದಾರ್ ಶ್ರೀದೇವಿ ಭಟ್, ‘ಗುಡ್ಡ ಕುಸಿಯದಂತೆ ತಡೆಯುವ ಜತೆಗೆ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳ ಸಭೆ ನಡೆಸಿ ಕ್ರಮವಹಿಸಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.