ADVERTISEMENT

ಗೋವಾ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಸೂಚನೆ

ಹೊರ ರಾಜ್ಯಗಳಿಂದ ಜಿಲ್ಲೆ ಪ್ರವೇಶಿಸುವವರ ಪ್ರಮಾಣಪತ್ರ ಪರಿಶೀಲನೆ: ಜಿಲ್ಲಾಧಿಕಾರಿ ಆದೇಶ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 13:44 IST
Last Updated 29 ನವೆಂಬರ್ 2021, 13:44 IST
ಕಾರವಾರ ತಾಲ್ಲೂಕಿನ ಮಾಜಾಳಿಯ ಗೋವಾ ಗಡಿಯಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಚೆಕ್‌ಪೋಸ್ಟ್‌ನಲ್ಲಿ ಸೋಮವಾರ ಕಾರುಗಳು ಸಾಲುಗಟ್ಟಿ ನಿಂತಿದ್ದವು
ಕಾರವಾರ ತಾಲ್ಲೂಕಿನ ಮಾಜಾಳಿಯ ಗೋವಾ ಗಡಿಯಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಚೆಕ್‌ಪೋಸ್ಟ್‌ನಲ್ಲಿ ಸೋಮವಾರ ಕಾರುಗಳು ಸಾಲುಗಟ್ಟಿ ನಿಂತಿದ್ದವು   

ಕಾರವಾರ: ಕೊರೊನಾ ವೈರಸ್‌ನ ರೂಪಾಂತರ ತಳಿ ‘ಓಮೈಕ್ರಾನ್’ ವ್ಯಾಪಿಸುವ ಆತಂಕ ಉಂಟಾಗಿರುವ ಕಾರಣ ಜಿಲ್ಲೆಯ ಗಡಿಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.

ಕಾರವಾರ ತಾಲ್ಲೂಕಿನ ಮಾಜಾಳಿಯಲ್ಲಿ, ಭಟ್ಕಳದಲ್ಲಿ, ಅನಮೋಡ ತಪಾಸಣಾ ಕೇಂದ್ರಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ ಮುಂತಾದ ವಿವಿಧ ರಾಜ್ಯಗಳಿಂದ ಬರುವ ಪ್ರವಾಸಿಗರ ಬಳಿ ಆರ್.ಟಿ.‍ಪಿ.ಸಿ.ಆರ್ ನೆಗೆಟಿವ್ ಪ್ರಮಾಣಪತ್ರ, ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಿದ್ದಾರೆ.

ಅಲ್ಲದೇ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ರೆಸಾರ್ಟ್, ಹೋಂ ಸ್ಟೇ, ದೇವಸ್ಥಾನಗಳಿಗೆ ಬರುವ ಹೊರ ಜಿಲ್ಲೆಗಳ, ಹೊರ ರಾಜ್ಯಗಳ ಪ್ರವಾಸಿಗರನ್ನು ಪರಿಶೀಲಿಸಬೇಕು. ಅವರ ಸಂಪರ್ಕಕ್ಕೆ ಬರುವವರ ಆರೋಗ್ಯವನ್ನು 10 ದಿನಗಳಿಗೊಮ್ಮೆ ತಪಾಸಣೆ ಮಾಡಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ಗುಂಪುಗೂಡಿ ಸೇರುವಂತಹ ಕಾರ್ಯಕ್ರಮ ನಡೆಸದಂತೆ ಆದೇಶಿಸಿದ್ದಾರೆ.

ADVERTISEMENT

ಜಿಲ್ಲೆಯ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ, ಕೇರಳದಿಂದ ಬಂದಿರುವ ವಿದ್ಯಾರ್ಥಿಗಳು 15 ದಿನಗಳ ಒಳಗಿನ ಪ್ರಯಾಣದ ಹಿನ್ನೆಲೆಯ ಹೊಂದಿದ್ದರೆ ಅವರನ್ನು ಕೂಡಲೇ ಆರೋಗ್ಯ ಪರೀಕ್ಷೆಗೆ ಒಳಪಡಿಸಬೇಕು ಎಂದೂ ನಿರ್ದೇಶನ ನೀಡಿದ್ದಾರೆ.

ಸಿಬ್ಬಂದಿ ಕೊರತೆ

ಮಾಜಾಳಿಯ ಗೋವಾ ಗಡಿಯಲ್ಲಿ ಸ್ಥಾಪಿಸಲಾಗಿರುವ ತಪಾಸಣಾ ಕೇಂದ್ರದಲ್ಲಿ ಸಿಬ್ಬಂದಿಯ ಕೊರತೆಯಿಂದ ಎಲ್ಲ ಪ್ರಯಾಣಿಕರ ತಪಾಸಣೆಗೆ ತೊಡಕಾಗಿದೆ. ಗೋವಾ ಮೂಲಕ ನೂರಾರು ಪ್ರಯಾಣಿಕರು ಏಕಕಾಲಕ್ಕೆ ರಾಜ್ಯ ಪ್ರವೇಶಿಸುತ್ತಾರೆ. ಆದರೆ, ಸೋಮವಾರ ಒಬ್ಬರೇ ಪೊಲೀಸ್ ಸಿಬ್ಬಂದಿಯಿದ್ದು, ಎಲ್ಲ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸುವುದರಲ್ಲೇ ಸುಸ್ತಾದರು. ಹೆಚ್ಚು ಪ್ರಯಾಣಿಕರು ಬಂದಾಗ ಕಂದಾಯ ಇಲಾಖೆಯ ಚೆಕ್‌ಪೋಸ್ಟ್‌ನಲ್ಲಿ ಕೂಡ ತಪಾಸಣೆಗೆ ಜಾಸ್ತಿ ಸಮಯ ಬೇಕಾಗುತ್ತದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.