
ಶಿರಸಿ: ಮಳೆಯಾಶ್ರಿತವಾಗಿ ಭತ್ತ ಬೆಳೆಯುವ ಬನವಾಸಿ ಹೋಬಳಿಯ ಭತ್ತದ ಬೆಳೆಗಾರರು ಮಳೆ ಕೊರತೆಯ ಕಾರಣಕ್ಕೆ ಕುಡಿಯುವ ನೀರಿನ ಯೋಜನೆಯಿಂದಲಾದರೂ ಗದ್ದೆಗೆ ನೀರು ಕೊಡುವಂತೆ ಗ್ರಾಮ ಪಂಚಾಯಿತಿಗಳಿಗೆ ದುಂಬಾಲು ಬಿದ್ದಿದ್ದಾರೆ.
ಶಿರಸಿ ತಾಲ್ಲೂಕಿನಲ್ಲಿ ಈವರೆಗೆ 132 ಸೆಂ.ಮೀ. ಮಳೆಯಾಗಿದೆ. ಪ್ರಸ್ತುತ ಬಿಸಿಲಿನ ವಾತಾವರಣ ಮುಂದುವರೆದಿದ್ದು, ಸಾವಿರಾರು ಹೆಕ್ಟೇರ್ ಭತ್ತದ ಗದ್ದೆಗಳು ನೀರಿಲ್ಲದೆ ಒಣಗಿ ಹೋಗುತ್ತಿವೆ. ರೈತಾಪಿ ಸಮುದಾಯಕ್ಕೆ ನೀರಿನ ಗಂಭೀರ ಸಮಸ್ಯೆ ಉಂಟಾಗಿದ್ದು, ಕಳೆದ 4 ವರ್ಷದ ಹಿಂದಿನ ಬರಗಾಲ ಸಂದರ್ಭದಲ್ಲಿದ್ದ ಆತಂಕ ಮತ್ತೆ ಕಾಡುತ್ತಿದೆ.
ಪ್ರಸಕ್ತ ಸಾಲಿನ ಜುಲೈ ತಿಂಗಳ ಮೊದಲ ವಾರ ವಾಡಿಕೆಯ ಮಳೆ ಸುರಿದು ಅನ್ನದಾತನ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಮುಂಗಾರು ಆರಂಭಗೊಂಡ ಖುಷಿಯಲ್ಲಿ ರೈತರು ಗದ್ದೆಯತ್ತ ಮುಖ ಮಾಡಿ, ಅಗೆ ಮಡಿ ಸಿದ್ದಪಡಿಸಿದ್ದರು. ಆದರೆ ಹಲವು ದಿನಗಳಿಂದ ಬೇಸಿಗೆ ವಾತಾವರಣ ನಿರ್ಮಾಣವಾಗಿದ್ದು, ಭತ್ತ ಬೆಳೆಯಲು ಆಗದಂಥ ಸನ್ನಿವೇಶ ಎದುರಾಗಿದೆ.
'ಆಗಸ್ಟ್ ತಿಂಗಳಿನಲ್ಲಿ ಗದ್ದೆಗಳಲ್ಲಿ ನೀರಿಲ್ಲದೇ ಅಗೆಮಡಿಗಳು ಒಣಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಕೆಲ ರೈತರು ನಾಟಿ ಕಾರ್ಯಕ್ಕೆ ನೀರು ಪೂರೈಕೆ ಸಾಧ್ಯವಾಗದೇ ನಾಟಿ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ' ಎನ್ನುತ್ತಾರೆ ದಾಸನಕೊಪ್ಪದ ಭತ್ತ ಬೆಳೆಗಾರ ಮಧುಕರ ಗೌಡ.
‘ಜುಲೈನಲ್ಲಿ ಮಳೆ ಸುರಿದು, ಗದ್ದೆಗಳಲ್ಲಿ ನೀರು ಸಂಗ್ರಹವಾಗಿತ್ತು. ನಂತರ ಮಳೆ ಇಲ್ಲದೇ ದಿಕ್ಕು ತೋಚದಂತೆ ಕೈ ಕಟ್ಟಿ ಕುಳಿತುಕೊಳ್ಳುವ ಸ್ಥಿತಿ ಎದುರಾಗಿದೆ’ ಎನ್ನುತ್ತಾರೆ ಅವರು.
'20 ದಿನಗಳಿಂದ ಮಳೆ ಕೈ ಕೊಟ್ಟಿದ್ದರಿಂದ ಎತ್ತರದ ಪ್ರದೇಶದಲ್ಲಿರುವ ಗದ್ದೆಗಳು ಬಿಸಿಲಿನ ಝಳಕ್ಕೆ ನೀರಿಲ್ಲದೇ ಬಿರುಕುಬಿಟ್ಟಿವೆ. ಕೆಲವೆಡೆ ಬಿಸಿಲ ತಾಪಕ್ಕೆ ಭತ್ತದ ಸಸಿಗಳು ಕೆಂಬಣ್ಣಕ್ಕೆ ತಿರುಗಿದೆ. ಇನ್ನೂ ಕೆಲವು ಕಡೆಗಳಲ್ಲಿ ಗದ್ದೆಗಳಲ್ಲಿ ನೀರಿಲ್ಲದೇ ನಾಟಿ ಕಾರ್ಯಕ್ಕೆ ತೊಂದರೆ ಎದುರಾಗಿದೆ' ಎಂಬುದು ಹಲವು ರೈತರ ಮಾತಾಗಿದೆ.
'ಭತ್ತದ ಕೃಷಿ ಚಟುವಟಿಕೆ ನಡೆಸಲು ಪೂರಕವಾಗಿ ಟ್ಯಾಂಕರ್ ಅಥವಾ ಇತರ ನೀರಿನ ಮೂಲಗಳಿಂದ ನೀರು ಪೂರೈಕೆ ಮಾಡುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಮನವಿ ಸಲ್ಲಿಸಲಾಗಿದೆ. ಮಳೆಯಾಶ್ರಿತ ಭತ್ತದ ಕೃಷಿಗೆ ಮಳೆ ಬಾರದ ಕಾರಣ ಅಸಹಾಯಕ ಸ್ಥಿತಿಯಲ್ಲಿ ನಾವಿದ್ದೇವೆ' ಎನ್ನುತ್ತಾರೆ ಬನವಾಸಿಯ ಕೃಷಿಕ ಮಲ್ಲಿಕಾರ್ಜುನ ಗೌಡ. ಬನವಾಸಿ ಹೋಬಳಿಯನ್ನು ಒಳಗೊಂಡು ಇಡೀ ಯಲ್ಲಾಪುರ ವಿಧಾನಸಭಾ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿ ಅಧಿಕ ಮೊತ್ತದ ಪರಿಹಾರ ನೀಡುವಂತೆ ಸಿಎಂಗೆ ಮನವಿ ನೀಡಲಾಗಿದೆ ಶಿವರಾಮ ಹೆಬ್ಬಾರ್ ಶಾಸಕ
ರೈತರಿಗೆ ಎದುರಾದ ಸಂಕಷ್ಟ ಪರಿಹರಿಸಲು ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ಯೋಜನೆಯಿಂದ ನೀರನ್ನು ನೀಡುವ ಸಂಬಂಧ ಸಭೆ ನಡೆಸುವ ಜತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗುವುದುಬಿಬಿ ಆಯಿಷಾ ಖಾಸಿಂ ಸಾಬ್ ಬನವಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಬನವಾಸಿ ಹೋಬಳಿಯನ್ನು ಒಳಗೊಂಡು ಇಡೀ ಯಲ್ಲಾಪುರ ವಿಧಾನಸಭಾ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿ ಅಧಿಕ ಮೊತ್ತದ ಪರಿಹಾರ ನೀಡುವಂತೆ ಸಿಎಂಗೆ ಮನವಿ ನೀಡಲಾಗಿದೆಶಿವರಾಮ ಹೆಬ್ಬಾರ್ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.