ADVERTISEMENT

ಸಿದ್ದಾಪುರ: ಕಚ್ಚಾ ರಸ್ತೆ; ಸಂಚಾರ ದುಸ್ತರ

ಮೂಲಸೌಕರ್ಯ ವಂಚಿತ ವಾಜಗೋಡು ಗ್ರಾ.ಪಂ: ನೆಟ್‍ವರ್ಕ್ ಸಿಗದೆ ಪರದಾಟ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 5:05 IST
Last Updated 14 ಆಗಸ್ಟ್ 2024, 5:05 IST
ಕೆಸರು ಗದ್ದೆಯಂತಾದ ಸಿದ್ದಾಪುರ ತಾಲ್ಲೂಕಿನ ಇಟಗಿ ಲಂಬಾಪುರ ಮುಖ್ಯರಸ್ತೆಯಿಂದ ಅರಿನಗೋಡು – ಸುಂಗೊಳ್ಳಿಮನೆಗೆ ಹೋಗುವ ರಸ್ತೆ ಗ್ರಾಮಸ್ಥರು ಸರಿಪಡಿಸಿದರು
ಕೆಸರು ಗದ್ದೆಯಂತಾದ ಸಿದ್ದಾಪುರ ತಾಲ್ಲೂಕಿನ ಇಟಗಿ ಲಂಬಾಪುರ ಮುಖ್ಯರಸ್ತೆಯಿಂದ ಅರಿನಗೋಡು – ಸುಂಗೊಳ್ಳಿಮನೆಗೆ ಹೋಗುವ ರಸ್ತೆ ಗ್ರಾಮಸ್ಥರು ಸರಿಪಡಿಸಿದರು   

ಸಿದ್ದಾಪುರ: ಗುಡ್ಡ–ಬೆಟ್ಟಗಳಿಂದ ಕೂಡಿದ, ಹಸಿರಿನಿಂದ ಕಂಗೊಳಿಸುತ್ತಾ ವಿಶಾಲವಾದ ಭೂ ಪ್ರದೇಶ ಹೊಂದಿದ್ದರೂ ಮೂಲಸೌಕರ್ಯಗಳಿಂದ ವಂಚಿತವಾಗಿದೆ ತಾಲ್ಲೂಕಿನ ವಾಜಗೋಡು ಗ್ರಾಮ ಪಂಚಾಯಿತಿ.

ತಾಲ್ಲೂಕು ಕೇಂದ್ರದಿಂದ ಸುಮಾರು 24 ಕಿ.ಮೀ ದೂರದಲ್ಲಿರುವ ಗ್ರಾಮ ಪಂಚಾಯಿತಿಯು 11 ಗ್ರಾಮಗಳನ್ನು ಒಳಗೊಂಡಿದೆ. 950 ಕುಟುಂಬಗಳ 4,500ಕ್ಕೂ ಹೆಚ್ಚು ಜನರು ವಾಸವಿದ್ದಾರೆ.

ಮುಖ್ಯರಸ್ತೆಗಳನ್ನು ಹೊರತುಪಡಿಸಿದರೆ ಗ್ರಾಮಗಳಿಗೆ ಸಂಪರ್ಕಿಸುವ ಶೇ 60ರಷ್ಟು ರಸ್ತೆಗಳು ಕಚ್ಚಾ ರಸ್ತೆಗಳಾಗಿದ್ದು, ಮಳೆಗಾಲದಲ್ಲಿ ಜನರು ಸಂಚರಿಸಲು ಹರಸಾಹಸಪಡಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.

ADVERTISEMENT

14 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು, 14 ಅಂಗನವಾಡಿಗಳು ಮತ್ತು 1 ಪ್ರೌಢಶಾಲೆ ಇದೆ. ಆದರೆ, ಕೆಳಗಿನಮನೆ ಗ್ರಾಮದಲ್ಲಿ ಅಂಗನವಾಡಿ ಇಲ್ಲದಿರುವುದರಿಂದ ಚಿಕ್ಕ ಮಕ್ಕಳಿಗೆ ತೊಂದರೆ ಉಂಟಾಗುತ್ತಿದೆ. ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ತೆರೆಯಬೇಕು ಎನ್ನುವುದು ಗ್ರಾಮದ ನಿವಾಸಿಗಳ ಆಗ್ರಹ.

‘ಕಚ್ಚಾ ರಸ್ತೆಗಳು ಮಳೆಗಾಲದಲ್ಲಿ ಕೆಸರು ಗದ್ದೆಗಳಂತಾಗುತ್ತಿವೆ. ಸುತ್ತಲಮನೆ ಗ್ರಾಮದ ಗಾಳಮಾವ, ಸಿಂಗುಮನೆಯಲ್ಲಿ 50-60 ಕುಟುಂಬಗಳು ವಾಸವಾಗಿದ್ದರೂ ಈವರೆಗೆ ಪಕ್ಕಾ ರಸ್ತೆ ಆಗಿಲ್ಲ. ಈ ವರ್ಷ ಭಾರಿ ಮಳೆಗೆ ಗ್ರಾಮದ ಸಂಪರ್ಕ ಕಡಿತಗೊಳ್ಳುವ ಭಯ ಉಂಟಾಗಿತ್ತು’ ಎನ್ನುತ್ತಾರೆ ಗ್ರಾಮಸ್ಥ ಎಂ.ಎನ್.ಹೆಗಡೆ ತಲೆಕೇರಿ.

‘ತಂತ್ರಜ್ಞಾನದ ಯುಗದಲ್ಲಿದ್ದರೂ ಇಲ್ಲಿನ ಹಲವು ಹಳ್ಳಿಗಳಿಗೆ ಮೊಬೈಲ್ ನೆಟ್‍ವರ್ಕ್ ಇಲ್ಲ. ತಲೆಕೇರಿ, ಕೆಳಗಿನಮನೆ ಗ್ರಾಮಗಳಲ್ಲಿ ನೆಟ್‍ವರ್ಕ್ ಸಂಪರ್ಕವೇ ಇಲ್ಲದೆ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ’ ಎಂದು ಗಿಳಸೆ ಕುಂಬ್ರಿಯ ಸುನೀಲ ನಾಯ್ಕ ಬೇಸರ ವ್ಯಕ್ತಪಡಿಸಿದರು.

ಸಿದ್ದಾಪುರ ತಾಲ್ಲೂಕಿನ ವಾಜಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊದ್ಲಮನೆ ಎಸ್ಇ ಕೇರಿಗೆ ಹೋಗುವ ರಸ್ತೆಯಲ್ಲಿ ಗುಡ್ಡ ಕುಸಿದಿದೆ
ಸಿದ್ದಾಪುರ ತಾಲ್ಲೂಕಿನ ವಾಜಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊದ್ಲಮನೆ ಎಸ್ ಇ ಕೇರಿಗೆ ಹೋಗುವ ರಸ್ತೆ ಕುಸಿದಿದ್ದು ಸಂಪರ್ಕ ಕಡಿತಗೊಳ್ಳುವ ಭೀತಿ ಉಂಟಾಗಿರುವುದು.

4,500ಕ್ಕಿಂತ ಹೆಚ್ಚು ಜನಸಂಖ್ಯೆ ಹತ್ತಾರು ಹಳ್ಳಿಗಳಿಗೆ ಕಾಲುಸಂಕವೇ ಆಸರೆ ಶೇ 60ರಷ್ಟು ಹಳ್ಳಿಗಳಲ್ಲಿ ಕಚ್ಚಾ ರಸ್ತೆ

ಗ್ರಾಮ ಪಂಚಾಯಿತಿಗೆ ಸರ್ಕಾರದ ಅನುದಾನ ಹೊರತುಪಡಿಸಿ ಉಳಿದ ಆದಾಯ ಕಡಿಮೆ ಇದೆ. ಅದನ್ನೇ ಬಳಸಿ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ
- ಸರಸ್ವತಿ ಗೌಡ ವಾಜಗೋಡ ಗ್ರಾ.ಪಂ ಅಧ್ಯಕ್ಷೆ

ಸೇತುವೆ ನಿರ್ಮಾಣಕ್ಕೆ ಮನವಿ

‘ಗ್ರಾಮ ಪಂಚಾಯಿತಿ ಪ್ರದೇಶವು ಗುಡ್ಡ–ಬೆಟ್ಟಗಳಿಂದ ಕೂಡಿದ್ದು ಹಲವಾರು ಹಳ್ಳ ಕೊಳ್ಳಗಳು ಇವೆ. ಕೆಲವು ಹಳ್ಳಗಳಿಗೆ ಸೇತುವೆ ನಿರ್ಮಾಣವಾಗಿದ್ದರೂ ಹಲವು ಕಡೆ ಹಳ್ಳಗಳನ್ನು ದಾಟಲು ಕಾಲುಸಂಕವನ್ನೇ ಅವಲಂಬಿಸಿದ್ದಾರೆ. ಐಸೂರಿನ ವೀರಭದ್ರ ದೇವಾಲಯದ ಸಮೀಪವಿರುವ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು ದುರಸ್ತಿ ಆಗಬೇಕಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ ಐಸೂರು ಹೇಳುತ್ತಾರೆ. ‘ತಲೆಕೆರೆ ಗ್ರಾಮದ ಮಕ್ಕಿಗದ್ದೆ – ಐಸೂರು ಕೆಳಗಿನಮನೆ ಗ್ರಾಮದ ಗಿಳಸೆ ಕುಂಬ್ರಿ ಸೇತುವೆಗಳು ಶೀಘ್ರ ನಿರ್ಮಾಣವಾದರೆ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.