ADVERTISEMENT

ಬಡವರ ಕಲ್ಯಾಣ ಯೋಜನೆ ಅನುಷ್ಠಾನದ ಹೊಣೆ ಗ್ರಾ,ಪಂ.ಗೆ ಸಾಧ್ಯತೆ

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2022, 11:14 IST
Last Updated 5 ಮಾರ್ಚ್ 2022, 11:14 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಕಾರವಾರ: ‘ರಾಜ್ಯ ಸರ್ಕಾರದಿಂದ ಬಡವರ ಕಲ್ಯಾಣ ಯೋಜನೆಗಳ ಅನುಷ್ಠಾನದ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗಳಿಗೆ ಕೊಡಲು ಚಿಂತಿಸಲಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಚರ್ಚಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ, ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಂಧ್ಯಾ ಸುರಕ್ಷಾ, ಅಂಗವಿಕಲ ವೇತನ, ವೃದ್ಧಾಪ್ಯ ವೇತನ, ವಿಧವಾ ವೇತನ ಮುಂತಾದವುಗಳಿಗೆ ಅರ್ಜಿ ಸಲ್ಲಿಸಿ ಹಲವು ದಿನ ಕಾಯಬೇಕಿದೆ. ಸಂಧ್ಯಾ ಸುರಕ್ಷಾ ಯೋಜನೆಯಡಿ ನಾಡ ಕಚೇರಿಗೆ, ತಾಲ್ಲೂಕು ಕಚೇರಿಗೆ ಅರ್ಜಿ ಕೊಟ್ಟವರು, ಅದು ಮಂಜೂರಾಗುವ ಮೊದಲು ಮೃತಪಟ್ಟವರಿದ್ದಾರೆ. ಇದನ್ನು ನಾನು ತಮಾಷೆಗೆ ಹೇಳಿದ್ದಲ್ಲ. ಆರು ತಿಂಗಳು, ಒಂದು ವರ್ಷ ಕಾದರೂ ಹಣ ಬರಲಿಲ್ಲ. ಸಹಜವಾಗಿ ಅವರ ಬದುಕಿನ ಕೊನೆಯಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

‘ಅರ್ಜಿ ಸಲ್ಲಿಸಿದವರ ಬಗ್ಗೆ ಆಯಾ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ಇರುತ್ತದೆ. ಬಡವರು ಅವರಿಗೆ ಅರ್ಜಿಗಳನ್ನು ಸಲ್ಲಿಸಿದರೆ 24 ಗಂಟೆಗಳಲ್ಲೇ ಪರಿಶೀಲಿಸಿ ಆದೇಶ ಪತ್ರ ಕೊಡುತ್ತೇವೆ. ಈ ಎಲ್ಲ ಅಧಿಕಾರಗಳೂ ಒಂದಲ್ಲ ಒಂದು ದಿನ ಗ್ರಾಮ ‍ಪಂಚಾಯಿತಿ, ಸ್ಥಳೀಯ ಸಂಸ್ಥೆಗಳಿಗೆ ಬಂದೇ ಬರುತ್ತವೆ. ಆದರೆ, ಅದನ್ನು ಸ್ವೀಕರಿಸುವ ಹೊಣೆ, ಜವಾಬ್ದಾರಿ ನಮಗಿರಬೇಕು. ಈ ಮಾದರಿಯನ್ನು ನಾನು ಕೇರಳದಲ್ಲಿ ಅಧ್ಯಯನ ಮಾಡಿದ್ದೇನೆ. ಅಲ್ಲಿ ಎಲ್ಲ ಕಾರ್ಯಕ್ರಮಗಳೂ ಗ್ರಾಮ ಪಂಚಾಯಿತಿಗಳ ಮೂಲಕ ಆಗುತ್ತಿವೆ. ನಮ್ಮಲ್ಲೂ ಜಾರಿ ಮಾಡುವ ನಿಟ್ಟಿನಲ್ಲಿ ಇಂಥ ಕಾರ್ಯಾಗಾರ, ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.