ADVERTISEMENT

ಕುಡಿಯುವ ನೀರಿನ ಸಮಸ್ಯೆ ಹೇಳಿಕೊಂಡ ಗ್ರಾಮಸ್ಥರು

ಕಾರವಾರ ತಾಲ್ಲೂಕಿನ ಹೊಟೆಗಾಳಿಯಲ್ಲಿ ತಹಶೀಲ್ದಾರ್ ಗ್ರಾಮ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 14:00 IST
Last Updated 20 ಮಾರ್ಚ್ 2021, 14:00 IST
ಕಾರವಾರ ತಾಲ್ಲೂಕಿನ ಹೊಟೆಗಾಳಿಯಲ್ಲಿ ಶನಿವಾರ ತಹಶೀಲ್ದಾರ್ ಆರ್.ವಿ.ಕಟ್ಟಿ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳಲಾಯಿತು
ಕಾರವಾರ ತಾಲ್ಲೂಕಿನ ಹೊಟೆಗಾಳಿಯಲ್ಲಿ ಶನಿವಾರ ತಹಶೀಲ್ದಾರ್ ಆರ್.ವಿ.ಕಟ್ಟಿ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳಲಾಯಿತು   

ಕಾರವಾರ: ‘ಸರ್, ನಮಗಿಲ್ಲಿ ಕುಡಿಯುವ ನೀರಿಲ್ಲ. ಬಹುಗ್ರಾಮ ಕುಡಿಯುವ ನೀರು ಯೋಜನೆಯಿಂದಲೂ ಪ್ರಯೋಜನವಾಗಿಲ್ಲ. ಏಪ್ರಿಲ್ ಬರುತ್ತಿದ್ದಂತೆ ಬಾವಿಗಳಲ್ಲಿ ನೀರು ಬತ್ತಿರುತ್ತದೆ. ಈ ಸಮಸ್ಯೆಗೆ ಪರಿಹಾರ ಕೊಡಿಸಿ...’

ತಾಲ್ಲೂಕಿನ ಹಣಕೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಟೆಗಾಳಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾದ ತಹಶೀಲ್ದಾರ್ ಗ್ರಾಮ ವಾಸ್ತವ್ಯದಲ್ಲಿ ಹಲವು ಗ್ರಾಮಸ್ಥರು ಈ ಸಮಸ್ಯೆಯನ್ನು ತೋಡಿಕೊಂಡರು.

‘ಹೊಟೆಗಾಳಿ– ಭೀಮಕೋಲ್ ರಸ್ತೆಯ ಇಕ್ಕೆಲಗಳಲ್ಲಿ ಸುಮಾರು 400 ಮನೆಗಳಿವೆ. ಊರಿನ ಮೇಲ್ಭಾಗದಲ್ಲಿ ನಿರ್ಮಿಸಿರುವ ಟ್ಯಾಂಕ್‌ಗೆ ಪೈಪ್‌ ಮೂಲಕ ನೀರು ಹರಿಯುತ್ತಿಲ್ಲ. ರಸ್ತೆಯ ಕೆಳಭಾಗದಲ್ಲಿರುವ ಮನೆಗಳಿಗೆ ಉಪ್ಪು ನೀರಿನ ಸಮಸ್ಯೆಯಿದೆ. ಒಟ್ಟಿನಲ್ಲಿ ಎರಡೂ ಕಡೆಗಳಲ್ಲಿ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಕೊನೆಗೆ ಟ್ಯಾಂಕರ್‌ಗಳ ಮೂಲಕ ಸಿಗುವ ನೀರನ್ನೇ ಅವಲಂಬಿಸಬೇಕಾಗಿದೆ’ ಎಂದು ಹಿರಿಯ ಗ್ರಾಮದ ಶ್ರೀಕಾಂತ ಹೇಳಿದರು.

ADVERTISEMENT

ಗ್ರಾಮ ವಾಸ್ತವ್ಯದಲ್ಲಿ ಒಟ್ಟು 59 ಅರ್ಜಿಗಳು ಸಲ್ಲಿಕೆಯಾಗಿದ್ದು, ಅರಣ್ಯ ಅತಿಕ್ರಮಣವನ್ನು ಸಕ್ರಮ ಮಾಡಿಕೊಡುವಂತೆ ಹಲವು ಗ್ರಾಮಸ್ಥರು ಮನವಿ ಮಾಡಿದರು. ಆದರೆ, ಅವುಗಳು ತಹಶೀಲ್ದಾರ್ ಮಟ್ಟದಲ್ಲಿ ಪರಿಹರಿಸಲು ಸಾಧ್ಯವಿಲ್ಲ. ಹಾಗಾಗಿ ಉಪ ವಿಭಾಗಾಧಿಕಾರಿಗೆ ಕಳುಹಿಸಿಕೊಡುವುದಾಗಿ ಅಧಿಕಾರಿಗಳು ತಿಳಿಸಿದರು.

ಉಳಿದಂತೆ, ವಿವಿಧ ಪಿಂಚಣಿ, ಮಾಸಾಶನಗಳ ಸಮಸ್ಯೆ, ಅಂಗವಿಕಲರ ಬಸ್ ಪಾಸ್ ಮುಂತಾದ ಅಹವಾಲುಗಳನ್ನು ಅಧಿಕಾರಿಗಳು ಸ್ವೀಕರಿಸಿದರು.

ಸ್ಥಳ ಪರಿಶೀಲಿಸಿದ ಅಧಿಕಾರಿಗಳು

‘ಹೊಟೆಗಾಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗ್ರಾಮಸ್ಥರು ಗಮನಕ್ಕೆ ತಂದಿದ್ದಾರೆ. ನೀರಿನ ಟ್ಯಾಂಕ್ ಇರುವ ಪ್ರದೇಶದಲ್ಲಿ ಸ್ಥಳ ಪರಿಶೀಲನೆ ಮಾಡಲಾಗಿದೆ. ಹೊಸದಾಗಿ ಬಾವಿ ತೋಡಲು ಗ್ರಾಮಸ್ಥರೊಬ್ಬರು ಸ್ಥಳಾವಕಾಶ ಕೊಡುವುದಾಗಿ ತಿಳಿಸಿದ್ದಾರೆ. ಅಲ್ಲಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’‌ ಎಂದು ತಹಶೀಲ್ದಾರ್ ಆರ್.ವಿ.ಕಟ್ಟಿ ತಿಳಿಸಿದ್ದಾರೆ.

ಗ್ರಾಮ ವಾಸ್ತವ್ಯದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಆನಂದಕುಮಾರ ಬಾಲಪ್ಪನವರ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.