ADVERTISEMENT

ಹತಾಶ ಸ್ಥಿತಿಯಲ್ಲಿ ಕಾಂಗ್ರೆಸ್‌: ಕಾಗೇರಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 14:20 IST
Last Updated 18 ಏಪ್ರಿಲ್ 2024, 14:20 IST
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ   

ಭಟ್ಕಳ: ‘ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಹತಾಶ ಸ್ಥಿತಿಯಲ್ಲಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸ್ಪರ್ಧಿಸಲು ಸಮರ್ಥ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಇನ್ನು ಆ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಾದರೂ ಹೇಗೆ?’ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಲೇವಡಿ ಮಾಡಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಕಾಂಗ್ರೆಸ್ ಅಂತೂ ಇಂತೂ 250 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಇದರಲ್ಲಿ 50 ಸ್ಥಾನ ಗೆಲ್ಲುವುದೂ ಕಷ್ಟವಿದೆ. ಆದರೂ ತಾನು ಅಧಿಕಾರಕ್ಕೆ ಬರುತ್ತೇನೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಸೋನಿಯಾ, ರಾಹುಲ್ ಗಾಂಧಿ ನಾಯಕತ್ವವನ್ನು ಯಾರೂ ಒಪ್ಪುತ್ತಿಲ್ಲ. ಕಾಂಗ್ರೆಸ್ಸಿನ ಪ್ರಣಾಳಿಕೆಗೆ ನೈತಿಕತೆ ಇಲ್ಲವಾಗಿದೆ. ರಾಜ್ಯದಲ್ಲಿ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳು ಹಳ್ಳ ಹಿಡಿದಿದ್ದು, ಯೋಜನೆ ಸಮರ್ಪಕವಾಗಿ ಜನರಿಗೆ ತಲುಪಿಲ್ಲ. ಕಾಂಗ್ರೆಸ್ ಪಕ್ಷ ಅಗ್ಗದ ಪ್ರಚಾರ ಮತ್ತು ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಸದ್ಯ ಕಾಂಗ್ರೆಸ್ಸಿಗೆ ಗ್ಯಾರಂಟಿ ಬಿಟ್ಟರೆ ಬೇರೆ ಏನೂ ಇಲ್ಲ’ ಎಂದು ಲೇವಡಿ ಮಾಡಿದರು.

‘ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಹಗರಣಗಳು ಕಾಂಗ್ರೆಸ್ಸನ್ನು ಮುಗಿಸಿ ಹಾಕಿವೆ. ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ. ಬರಗಾಲ ಇದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಸರ್ಕಾರದಲ್ಲಿ ಒಳಜಗಳ, ಭ್ರಷ್ಟಾಚಾರ ಹೆಚ್ಚಿದೆ. ಕಾಂಗ್ರೆಸ್ ಸರ್ಕಾರ ಒಂದು ವರ್ಷದಲ್ಲೇ ಜನರ ವಿಶ್ವಾಸ ಕಳೆದುಕೊಂಡಿದೆ’ ಎಂದು ಟೀಕಿಸಿದರು.

ADVERTISEMENT

‘ಕಾಂಗ್ರೆಸ್ಸಿನವರು ಈ ಚುನಾವಣೆಯನ್ನು ಸ್ಥಳೀಯ ಚುನಾವಣೆ ಎಂಬಂತೆ ಬಿಂಬಿಸುತ್ತಿದ್ದಾರೆ. ಲೋಕಸಭೆ ಚುನಾವಣೆಗೆ ಏನು ವಿಷಯ ಇಟ್ಟುಕೊಂಡು ಮಾತನಾಡಬೇಕೋ ಅದನ್ನು  ಮಾಡುತ್ತಿಲ್ಲ’ ಎಂದರು.

‘ಜಿಲ್ಲೆಯಲ್ಲಿ ಅರಣ್ಯ ಭೂಮಿ ಅತಿಕ್ರಮಣ, ಅಂಕೋಲಾ-ಹುಬ್ಬಳ್ಳಿ ರೈಲು, ತಾಳಗುಪ್ಪ- ಹೊನ್ನಾವರ ರೈಲು, ಬಂದರು, ರಾಷ್ಟ್ರೀಯ ಹೆದ್ದಾರಿ ಹೀಗೆ ಹಲವು ಸಮಸ್ಯೆಗಳಿದ್ದು, ಇದನ್ನು ಬಗೆಹರಿಸಲು ಆದ್ಯತೆ ನೀಡುತ್ತೇನೆ’ ಎಂದು ಹೇಳಿದರು.

ಮಾಜಿ ಸಚಿವ ಶಿವಾನಂದ ನಾಯ್ಕ, ಲೋಕಸಭೆ ಚುನಾವಣೆಯ ಬಿಜೆಪಿ ಜಿಲ್ಲಾ ಸಂಚಾಲಕ ಗೋವಿಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ರಾಜ್ಯ ಘಟಕದ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಈಶ್ವರ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಶಿವಾನಿ ಶಾಂತರಾಮ, ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಸುಬ್ರಾಯ ದೇವಡಿಗ, ಶ್ರೀಕಾಂತ ನಾಯ್ಕ, ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಖೇದಾರ ಕೊಲ್ಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.