ಕಾರವಾರ: ತಾಲ್ಲೂಕಿನ ಚಿತ್ತಾಕುಲ ಗ್ರಾಮ ಪಂಚಾಯಿತಿಗೆ ಸೇರಿದ ಘನ ತ್ಯಾಜ್ಯ ವಿಲೇವಾರಿ ಘಟಕದಿಂದ ದುರ್ನಾತ ಹರಡುತ್ತಿದ್ದು, ಪಕ್ಕದಲ್ಲಿನ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿ ಪಾಲಕರು ಶುಕ್ರವಾರ ಪ್ರತಿಭಟಿಸಿದರು.
ಪ್ರೌಢಶಾಲೆ ಕಟ್ಟಡಕ್ಕೆ ಹೊಂದಿಕೊಂಡಿರುವ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದರು.
‘ತ್ಯಾಜ್ಯ ಘಟಕದಿಂದ ನಿರಂತರವಾಗಿ ಕೆಟ್ಟ ವಾಸನೆ ಹೊರಸೂಸುತ್ತಿದೆ. ಇದರಿಂದ ಗುರುವಾರ 9ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ತರಗತಿ ಕೊಠಡಿಯಲ್ಲಿ ಕುಳಿತು ಪಾಠ ಕೇಳಲಾಗದೆ, ಬಯಲಿನಲ್ಲಿ ಕುಳಿತು ಪಾಠ ಕೇಳುವ ಸ್ಥಿತಿ ವಿದ್ಯಾರ್ಥಿಗಳಿಗೆ ಬಂದಿದೆ. ಇಂತ ಸ್ಥಿತಿ ಮುಂದುವರಿದರೆ ಮಕ್ಕಳ ಆರೋಗ್ಯ ಹದಗೆಡಲಿದೆ’ ಎಂದು ಪಾಲಕರು ಆರೋಪಿಸಿದರು.
‘ಘಟಕದ ಪಕ್ಕದಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ, ಜನವಸತಿ ಪ್ರದೇಶ, ಮೀನು ಮಾರುಕಟ್ಟೆ ಇದೆ. ಎಲ್ಲರ ಆರೋಗ್ಯದ ಕಾಳಜಿಗೆ ವಿಲೇವಾರಿ ಘಟಕ ಸ್ಥಳಾಂತರಿಸುವುದು ಉತ್ತಮ’ ಎಂದರು.
ಸ್ಥಳಕ್ಕೆ ತಹಶೀಳ್ದಾರ್ ನಿಶ್ಚಲ್ ನೊರ‍್ಹೋನಾ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ಪಾಲಕರಾದ ಪ್ರಕಾಶ ಕಾಮತ್, ಮಂಗೇಶ, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.