ADVERTISEMENT

ಭಟ್ಕಳ | ಬತ್ತಿದ ಕೊಳವೆ ಬಾವಿ: ಹಳ್ಳಿಗಳಿಗೆ ಟ್ಯಾಂಕರ್ ನೀರೆ ಗತಿ

ಮೋಹನ ನಾಯ್ಕ
Published 15 ಏಪ್ರಿಲ್ 2025, 4:37 IST
Last Updated 15 ಏಪ್ರಿಲ್ 2025, 4:37 IST
ಭಟ್ಕಳದ ಹೆಬಳೆಯಲ್ಲಿ ಅಮ್ಮ ಮಗಳು ಗ್ರಾಮ ಪಂಚಾಯಿತಿಯಿಂದ ಪೂರೈಸುವ ನೀರಿಗಾಗಿ ಕೊಡ ಹಿಡಿದು ತುಂಬಿಸಕೊಳ್ಳುವ ತವಕದಲ್ಲಿದ್ದಾರೆ
ಭಟ್ಕಳದ ಹೆಬಳೆಯಲ್ಲಿ ಅಮ್ಮ ಮಗಳು ಗ್ರಾಮ ಪಂಚಾಯಿತಿಯಿಂದ ಪೂರೈಸುವ ನೀರಿಗಾಗಿ ಕೊಡ ಹಿಡಿದು ತುಂಬಿಸಕೊಳ್ಳುವ ತವಕದಲ್ಲಿದ್ದಾರೆ   

ಭಟ್ಕಳ: ಬಿಸಿಲ ಝಳ ಹೆಚ್ಚುತ್ತಿರುವಂತೆಯೆ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದ ವಿವಿಧೆಡೆಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಏಪ್ರಿಲ್ ಮೊದಲ ವಾರದಲ್ಲೇ ಜಲಮೂಲಗಳು ಬತ್ತಿರುವುದು ಜನರನ್ನು ಚಿಂತೆಗೆ ತಳ್ಳಿದೆ.

ಹೆಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಆರಂಭಿಸಲಾಗಿದ್ದು, ಉಳಿದ ಕಡೆಯೂ ಆದ್ಯತೆಯ ಮೇಲೆ ಗ್ರಾಮ ಪಂಚಾಯಿತಿ ವತಿಯಿಂದ ನೀರು ಸರಬರಾಜು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬೆಳಕೆಯ ಮೊಗೇರಕೇರಿ, ಸರ್ಪನಕಟ್ಟೆಯ ಹಡೀನ್ ಗ್ರಾಮ, ಮುಂಡಳ್ಳಿಯ ಮೊಗೇರಕೇರಿ, ಹೆಬಳೆಯೆ ಹರ‍್ತಾರ, ಹೊನ್ನಿಗದ್ದೆ, ಗಾಂಧಿನಗರ, ಶಿರಾಲಿಯ ಅಳ್ವೆಕೋಡಿ, ಮಾವಿನಕುರ್ವೆಯ ಬೆಳ್ನಿ ಗ್ರಾಮ, ಬೆಂಗ್ರೆಯ ಸಣಬಾವಿ, ಮುಟ್ಟಳ್ಳಿಯ ಬಿಳಲಖಂಡ, ಮುರುಡೇಶ್ವರದ ಜನತಾ ಕಾಲೊನಿ ಹಾಗೂ ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರುತ್ತದೆ.

ADVERTISEMENT

ಪುರಸಭೆಯ ಆಶ್ರಯ ಕಾಲೊನಿ, ಮಗ್ದುಂಕಾಲೊನಿ, ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಾಲಿಕೋಡಿಯಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡುತ್ತದೆ. ಸಮುದ್ರ ತೀರ ಪ್ರದೇಶಗಳಲ್ಲಿ ನದಿಯಲ್ಲಿ ಸಿಹಿನೀರು ಆವಿಯಾಗಿ ಉಪ್ಪುನೀರು ಸೇರಿಕೊಳ್ಳುವುದರಿಂದ ಬಾವಿ ನೀರು ಕೂಡ ಉಪ್ಪು ಮಿಶ್ರಿತವಾಗಿ ಕುಡಿಯುವ ಸಿಹಿ ನೀರಿಗಾಗಿ ಪರಿತಪಿಸಬೇಕಾಗುತ್ತದೆ. ಈ ಪ್ರದೇಶಗಳಲ್ಲಿ ಬೇಸಿಗೆ ಸಮಯದಲ್ಲಿ ಟ್ಯಾಂಕರ್ ಮೂಲಕ ಮನೆಮನೆಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ.

ಪಿಡಿಒಗಳ ಸಭೆ ನಡೆಸಿ ನೀರಿನ ಸಮಸ್ಯೆ ತಲೆದೋರದಂತೆ ಪರಿಸ್ಥಿತಿ ನಿಭಾಯಿಸುವಂತೆ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ.
ನಾಗೇಂದ್ರ ಕೊಳಶೆಟ್ಟಿ, ತಹಶೀಲ್ದಾರ್

‘ತಾಲ್ಲೂಕಿನ ಕಡವಿನಕಟ್ಟಾದಲ್ಲಿರುವ ಭೀಮಾ ನದಿಯನ್ನು ಜೀವನದಿ ಎನ್ನಲಾಗುತ್ತದೆ. ಪಟ್ಟಣ ಹಾಗೂ ಗ್ರಾಮೀಣ ಭಾಗದ ಹಲವು ಮನೆಗಳಿಗೆ ಈ ನೀರು ಜೀವಜಲವಾಗಿದೆ. ಈಚಿನ ವರ್ಷಗಳಲ್ಲಿ ಈ ನದಿಯಲ್ಲಿ ಅಗಾಧವಾದ ಹೂಳು ತುಂಬಿಕೊಂಡು ಬೇಸಿಗೆಯಲ್ಲಿ ಜಲಮೂಲ ಬತ್ತಿಹೋಗಿ ನದಿ ಬರಡಾಗುತ್ತಿದೆ. ಇದರಿಂದಾಗಿ ಜನರು ಕುಡಿಯುವ ನೀರಿಗಾಗಿ, ರೈತರು ಕೃಷಿ ಭೂಮಿ ನೀರಿಗಾಗಿ ಪರತಪಿಸುವ ಸ್ಥಿತಿ ತಲೆದೋರುತ್ತಿದೆ. ಸರ್ಕಾರ ಈ ನದಿ ಹೂಳೆತ್ತಲು ಕ್ರಮವಹಿಸಿದರೆ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನೀಗುತ್ತದೆ’ ಎನ್ನುತ್ತಾರೆ ಸ್ಥಳೀಯರಾದ ರಾಜೇಶ ನಾಯ್ಕ.

ಉಪಯೋಗಕ್ಕೆ ಬಾರದ ಜಲಸಂಗ್ರಹಾಗಾರ

ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಇರುವ ಕಡೆ ಜಲಜೀವನ ಮೀಷನ್ ಯೋಜನೆಯಡಿ ಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಮೇಲ್ಮಟ್ಟದ ಜಲಸಂಗ್ರಹಾಗಾರ (ಓವರ್ ಹೆಡ್ ಟ್ಯಾಂಕ್) ಉಪಯೋಗಕ್ಕೆ ಬರದಂತಾಗಿದೆ ಎಂಬುದು ಜನರ ದೂರು. ‘ಜಲಸಂಗ್ರಹಾಗಾರ ನಿರ್ಮಿಸಿ ಸಮೀಪದಲ್ಲಿ ಕೊಳವೆಬಾವಿ ಕೊರೆದು ಮನೆಮನೆಗೆ ನೀರಿನ ಸಂಪರ್ಕ ನೀಡಲಾಗಿದೆ. ಆದರೆ ಬಹುತೇಕ ಕೊಳವೆ ಬಾವಿಯಲ್ಲಿ ಜಲಮೂಲ ಬತ್ತಿಹೋದ ಕಾರಣ ಯೋಜನೆ ಕಾರ್ಯಗತವಾಗದೆ ಹಳ್ಳಹಿಡಿದಿದೆ. ಗ್ರಾಮೀಣ ಭಾಗದಲ್ಲಿ ಜನರು ಬೇಸಿಗೆಯಲ್ಲಿ ನೀರಿಗಾಗಿ ಕಿಲೋಮೀಟರ್ ಅಲೆದಾಡುವ ಸ್ಥಿತಿ ಇದೆ’ ಎಂಬುದು ತಾಲ್ಲೂಕಿನಿ ಹಲವು ಹಳ್ಳಿಗಳ ಜನರ ದೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.