ಮುಂಡಗೋಡ: ‘ಸರ್ಕಾರಿ ಕೊಳವೆಬಾವಿಗೆ ಮೋಟರ್ ಕುಂದ್ರಿಸ್ಯಾರಿ. ತಟಕ್, ತಟಕ್ ನೀರ ಬರತೈತಿ. ಕೊಳವೆಬಾವಿ ಇದ್ದವರ ಮನಿಗೆ ಹೋಗಿ, ನಾಲ್ಕ ಕೊಡ ನೀರ ತರ್ತೇವಿ. ಪಂಚಾಯ್ತಿಯವರಿಗೆ ಹೇಳಿದ ಮ್ಯಾಲೆ, ದಿನಕ್ಕೊಂದ ಸಲ ಟ್ಯಾಂಕರ್ ನೀರ ಊರಿಗೆ ಕಳಸ್ತಾರ. ಎಲ್ಲಾರಿಗೂ ಸಾಲಲ್ಲಾರಿ’ ಎಂದು ಕೊಡ ಹಿಡಿದು ನೀರು ತರಲು ಹೊರಟಿದ್ದ ತಾಲ್ಲೂಕಿನ ಕಳಕಿಕೇರಾದ ಸಗ್ಗುಬಾಯಿ ನೀರಿನ ಸಮಸ್ಯೆ ಕುರಿತು ಹೇಳಿದರು.
‘ನಾಲ್ಕೈದು ದಿನಕ್ಕೊಮ್ಮೆ ನೀರು ಬಿಡುತ್ತಾರೆ. ಕರೆಂಟ್ ಸಮಸ್ಯೆಯಾದರೆ, ಐದಾರು ದಿನಗಳವರೆಗೆ ನೀರು ಬರಲ್ಲ. ಊರಾಚೆ ಇರುವ ಪಕ್ಕದ ಜಮೀನುಗಳ ಕೊಳವೆಬಾವಿಯಿಂದ ನೀರು ತರಬೇಕಾಗುತ್ತದೆ. ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆಯಿದ್ದರೂ, ಪಂಚಾಯಿತಿಯವರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ’ ಎನ್ನುತ್ತಾರೆ ಕೋಡಂಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳದಮನೆ ನಿವಾಸಿ ಗಣೇಶ.
ತಾಲ್ಲೂಕಿನ ನಾಲ್ಕೈದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾರ್ಚ್ ತಿಂಗಳಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
‘ಬೇಸಿಗೆ ಸಮಯದಲ್ಲಿ ಕೊಳವೆಬಾವಿ ಕೊರೆಸುವುದು, ಮೋಟರ್ ದುರಸ್ತಿ ಮಾಡಿಸುವುದಕ್ಕೆ ಮಾತ್ರ ಸೀಮಿತರಾಗುವುದರಿಂದ, ಕೆಲವು ಗ್ರಾಮಗಳು ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ’ ಎನ್ನುವ ಆರೋಪವೂ ಸಾರ್ವತ್ರಿಕವಾಗಿದೆ.
ವಡಗಟ್ಟಾ, ಸಾಲಗಾಂವ, ನಂದಿಕಟ್ಟಾ, ಯರೇಬೈಲ್, ಹುಲಿಹೊಂಡ (ಕಾತೂರ ಗ್ರಾಮ ಪಂಚಾಯಿತಿ), ಕಾತೂರ, ಕಲಕೇರಿ, ಅಂದಲಗಿ, ಗುಂಜಾವತಿ, ಚಿಗಳ್ಳಿ, ಹುನಗುಂದ, ಅಗಡಿ, ಹನುಮಾಪುರ, ಆಲಳ್ಳಿ, ಕೋಡಂಬಿ, ಓರಲಗಿ ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗಬಹುದು ಎಂದು ತಾಲ್ಲೂಕು ಪಂಚಾಯಿತಿ ಅಂದಾಜಿಸಿದೆ.
‘ಚಿಗಳ್ಳಿ ಜಲಾಶಯದಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿದರೆ, ಚಿಗಳ್ಳಿ, ಸಾಲಗಾಂವ ಹಾಗೂ ಕಾತೂರ ಈ ಮೂರು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ನೀರಿನ ಬವಣೆಯಿಂದ ಪರಿಹಾರ ಕಾಣಲಿವೆ’ ಎನ್ನುತ್ತಾರೆ ವಕೀಲ ಗುಡ್ಡಪ್ಪ ಕಾತೂರ.
‘ಮೈನಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿವರ್ಷ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದರಿಂದ, ಕ್ಯಾತನಳ್ಳಿ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಿಸಲು ಕ್ರಿಯಾಯೋಜನೆ ತಯಾರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ಈಚೆಗೆ ತಾಲ್ಲೂಕಿಗೆ ಭೇಟಿ ನೀಡಿದ್ದ ವೇಳೆ ಹೇಳಿದ್ದರು.
ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಹಲವು ಗ್ರಾಮಗಳ ಪಟ್ಟಿಯನ್ನು ಈಗಲೇ ಸಿದ್ಧಪಡಿಸಲಾಗಿದ್ದು ಪರ್ಯಾಯ ಸಿದ್ಧತಾ ಕಾರ್ಯಕ್ಕೆ ಸಂಬಂಧಿಸಿದ ಪಿಡಿಒಗಳಿಗೆ ಸೂಚಿಸಲಾಗಿದೆಟಿ.ವೈ.ದಾಸನಕೊಪ್ಪ ತಾಲ್ಲೂಕು ಪಂಚಾಯಿತಿ ಇಒ
ಪ್ರತಿ ವರ್ಷ ಶಾಶ್ವತ ಯೋಜನೆ ಜಾರಿಗೆ ಒತ್ತಾಯಿಸುತ್ತ ಬಂದರೂ ಇನ್ನೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಸರ್ಕಾರ ಯೋಜನೆ ಜಾರಿಗೆ ಅನುಮೋದನೆ ನೀಡಬೇಕುಗುಡ್ಡಪ್ಪ ಕಾತೂರ ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.