
ಶಿರಸಿ: ಬೇಡ್ತಿ–ವರದಾ ಮತ್ತು ಅಘನಾಶಿನಿ–ವೇದಾವತಿ ನದಿಗಳ ಜೋಡಣೆ ಯೋಜನೆಯ ವಿರುದ್ಧ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಾಗ್ರಹ ದಿನೇ ದಿನೇ ತೀವ್ರಗೊಳ್ಳುತ್ತಿದೆ. ಪರಿಸರಕ್ಕೆ ಮಾರಕವಾಗಲಿರುವ ಈ ಯೋಜನೆಗಳನ್ನು ಸರ್ಕಾರ ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿ ಜಿಲ್ಲೆಯಾದ್ಯಂತ ಪ್ರತಿರೋಧ ವ್ಯಕ್ತವಾಗುತ್ತಿದ್ದು, ಇದೀಗ ಈ ಹೋರಾಟಕ್ಕೆ ಮಾತೃ ಶಕ್ತಿಯ ಬಲ ಬಂದಿದೆ.
ನದಿ ಜೋಡಣೆ ಯೋಜನೆಯ ವಿರುದ್ಧ ನಿರ್ಣಾಯಕ ಹೋರಾಟ ರೂಪಿಸಲು ಜ.11ರಂದು ಶಿರಸಿಯಲ್ಲಿ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಜನ– ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶಕ್ಕೆ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಸ್ವಯಂಪ್ರೇರಿತರಾಗಿ ಆಗಮಿಸಬೇಕು ಎಂದು ಮಹಿಳೆಯರು ‘ಪರಿಸರ ಸಂಕೀರ್ಥನ’ ಸಂಕಲ್ಪದಡಿ ನಗರದ ಪ್ರತಿ ಮನೆಮನೆಗೆ ಪಾದಯಾತ್ರೆಯ ಮೂಲಕ ತೆರಳಿ ಜಾಗೃತಿ ಮೂಡಿಸುವ ಜತೆ ಸಮಾವೇಶಕ್ಕೆ ಬರುವಂತೆ ಮನವಿ ಮಾಡುತ್ತಿದ್ದಾರೆ.
ವಿವಿಧ ಮಹಿಳಾ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಹಲವು ಮಹಿಳೆಯರು ಜತೆಗೂಡಿ ಹಮ್ಮಿಕೊಂಡಿರುವ ವಿಶಿಷ್ಟ ಜನಜಾಗೃತಿ ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಪರಿಸರ ಕಾಳಜಿಯುಳ್ಳ ಮಹಿಳೆಯರಿದ್ದು, ನಗರದ ಪ್ರತಿ ಮನೆಗೆ ಪಾದಯಾತ್ರೆ ಮೂಲಕ ತೆರಳಿ ಜಾಗೃತಿ ಮೂಡಿಸಿ, ಸಮಾವೇಶಕ್ಕೆ ಆಮಂತ್ರಿಸುತ್ತಿದ್ದಾರೆ.
‘ಜಿಲ್ಲೆಯ ಅಸ್ಮಿತೆ, ಜಲಮೂಲಗಳು ಸಂಕಷ್ಟದಲ್ಲಿರುವ ವೇಳೆ ಅವುಗಳ ಉಳಿವಿಗೆ ಮನೆಮನೆಗೆ ತೆರಳಿ ಪ್ರತಿಯೊಬ್ಬರನ್ನೂ ಆಹ್ವಾನಿಸುವುದು ಈ ಪಾದಯಾತ್ರೆ ಉದ್ದೇಶವಾಗಿದೆ. ಜನರ ಸ್ಪಂದನೆಯೂ ಉತ್ತಮವಾಗಿದೆ’ ಎಂಬುದು ಸದಸ್ಯೆಯೊಬ್ಬರ ಮಾತು.
‘ಪಾದಯಾತ್ರೆಯ ಹಾದಿಯುದ್ದಕ್ಕೂ ಮಹಿಳೆಯರು ಹಾಡುತ್ತಿದ್ದ ಹಾಡು ಜನರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಬೆಂಗಳೂರಿನ ವಿಶಾಲಾಕ್ಷಿ ಶರ್ಮ ಅವರು ರಚಿಸಿದ ಬೇಡ್ತಿ–ಅಘನಾಶಿನಿಯನ್ನು ಉಳಿಸೋಣ ಎಂಬ ಗೀತೆಯನ್ನು ಸಂಘಟನೆಯ ಸದಸ್ಯರು ರಾಗಬದ್ಧವಾಗಿ ಹಾಡುತ್ತಾ, ಘೋಷಣೆ ಕೂಗುತ್ತಾ ಸಾಗುತ್ತಾರೆ. ಪರಿಸರದ ಉಳಿವಿನ ತುಡಿತವಿದ್ದ ಗೀತೆ ಮತ್ತು ಅದಕ್ಕೆ ಧ್ವನಿಗೂಡಿಸಿದ ಮಾತೆಯರ ಶ್ರದ್ಧೆ ಇಡೀ ನಗರದ ವಾತಾವರಣದಲ್ಲಿ ನದಿ ಸಂರಕ್ಷಣೆಯ ಗಂಭೀರತೆಯನ್ನು ಬಿಂಬಿಸುತ್ತಿದೆ’ ಎಂಬುದು ನಗರ ನಿವಾಸಿ ರಾಧಿಕಾ ಹೆಗಡೆ ಮಾತು.
‘ನದಿ ಕಣಿವೆಗಳ ಉಳಿವಿಗಾಗಿ ಜಿಲ್ಲೆಯ ನಾಗರಿಕರು ಸಂಘಟಿತರಾಗಿ ಪ್ರಯತ್ನಶೀಲರಾಗಲು ಮಹಿಳೆಯರ ಈ ಅನುಪಮ ಪ್ರಯತ್ನವು ದೊಡ್ಡ ಪ್ರೇರಣೆ ನೀಡಲಿದೆ. ಮನೆಯ ಜವಾಬ್ದಾರಿಯ ಜತೆಗೆ ಪರಿಸರದ ಜವಾಬ್ದಾರಿಯನ್ನು ಹೊತ್ತ ಈ ಮಹಿಳೆಯರ ಕಾರ್ಯವು ಜಿಲ್ಲೆಯ ನದಿ ಜೋಡಣೆ ಹೋರಾಟಕ್ಕೆ ಹೊಸ ಆಯಾಮ ನೀಡಲಿದೆ’ ಎಂಬುದು ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಕೇಶವ ಕೊರ್ಸೆ ಮಾತಾಗಿದೆ.
ಗಮನ ಸೆಳೆಯುತ್ತಿರುವ ಅಭಿಯಾನ
‘ಡಿ.29ರಂದು ನಗರದ ಮಾರಿಕಾಂಬಾ ದೇವಸ್ಥಾನದಿಂದ ಆರಂಭಗೊಂಡಿದ್ದ ಮಹಿಳೆಯರ ಪಾದಯಾತ್ರೆ ಜಾಗೃತಿ ಅಭಿಯಾನವು ಮನೆಮನೆ ಜಾಗೃತಿ ಜತೆ ನಗರದ ಜನನಿಬಿಡ ಮಾರುಕಟ್ಟೆ ಪ್ರದೇಶ ಹಾಗೂ ಹಳೆಯ ಬಸ್ ನಿಲ್ದಾಣದ ಪ್ರಮುಖ ರಸ್ತೆಗಳ ಮೂಲಕವೂ ಸಾಗುತ್ತಿದೆ. ಕೈಯಲ್ಲಿ ಕರಪತ್ರಗಳನ್ನು ಹಿಡಿದು ನದಿ ಸಂರಕ್ಷಣೆಯ ಅವಶ್ಯಕತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾ ಸಾಗುವ ಮಹಿಳೆಯರ ನಡೆ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ’ ಎಂಬುದು ಹೋರಾಟ ಸಮಿತಿ ಪ್ರಮುಖರು ತಿಳಿಸಿದರು.
ನದಿ ಜೋಡಣೆ ಯೋಜನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನತೆಗೆ ಜಾಗೃತಿ ಮೂಡಿಸಿ ಹೋರಾಟ ಬಲಗೊಳಿಸುವುದು ಮಾತೆಯರ ಸಂಕಲ್ಪವಾಗಿದೆ ಮಧುಮತಿ ಹೆಗಡೆ ಬೇಡಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸದಸ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.