ADVERTISEMENT

ಶಿರಸಿ: ಮಹಿಳಾ ಯಕ್ಷ ಸಂಭ್ರಮ 6ರಿಂದ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 14:30 IST
Last Updated 4 ಫೆಬ್ರುವರಿ 2020, 14:30 IST

ಶಿರಸಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ಶಿರಸಿಯ ಯಕ್ಷ ಗೆಜ್ಜೆ ಸಂಘಟನೆಯ ಜಂಟಿ ಆಶ್ರಯದಲ್ಲಿ ಫೆ.6 ಮತ್ತು 7ರಂದು ಇಲ್ಲಿನ ಟಿಎಂಎಸ್ ಸಭಾಭವನದಲ್ಲಿ ಮಹಿಳಾ ಯಕ್ಷ ಸಂಭ್ರಮ ನಡೆಯಲಿದೆ ಎಂದು ಅಕಾಡೆಮಿ ಸದಸ್ಯೆ ನಿರ್ಮಲಾ ಹೆಗಡೆ ಗೋಳಿಕೊಪ್ಪ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬೆಂಗಳೂರಿನ ಎರಡು, ಮಂಗಳೂರು, ತುಮಕೂರು, ಶಿವಮೊಗ್ಗ, ಗುಂದದಿಂದ ತಲಾ ಒಂದು ಯಕ್ಷಗಾನ ತಂಡಗಳು ಭಾಗವಹಿಸಲಿವೆ. ಮೂಡಲಪಾಯ ಗೊಂಬೆಯಾಟ, ಯಕ್ಷಗಾನ, ಮೂಡಲಪಾಯ ಯಕ್ಷಗಾನ, ಯಕ್ಷಗಾನ ಪೂರ್ವರಂಗ, ತೆಂಕುತಿಟ್ಟು ಯಕ್ಷಗಾನ, ತಾಳಮದ್ದಲೆ ಆಯೋಜಿಸಲಾಗಿದೆ. ಉತ್ತರ ಕನ್ನಡದ ಬಡಗು, ತೆಂಕುತಿಟ್ಟು ಯಕ್ಷಗಾನ ಮತ್ತು ಮಹಿಳೆಯರು, ಮೂಡಲಪಾಯ ಯಕ್ಷಗಾನದ ಕುರಿತು ವಿಚಾರ ಸಂಕಿರಣ ನಡೆಯಲಿದೆ ಎಂದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮ ಉದ್ಘಾಟಿಸುವರು. ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ. ಹೆಗಡೆ, ಸಂಸದ ಅನಂತಕುಮಾರ ಹೆಗಡೆ, ಶಾಸಕ ಶಿವರಾಮ ಹೆಬ್ಬಾರ ಭಾಗವಹಿಸುವರು. ‘ನೆಬ್ಬೂರು ನಾರಾಯಣ ಭಾಗವತ’ ಸಾಕ್ಷ್ಯಚಿತ್ರ ಬಿಡುಗಡೆ, ಜಿ.ಎಂ.ಭಟ್ ಕೆವಿ ಅವರ ‘ಪಂಚಧ್ರುಮ’, ಮಹಾಬಲೇಶ್ವರ ಭಟ್ ಇಟಗಿ ಅವರ ‘ಇಟಗಿಯವರ ಯಕ್ಷಗಾನ ಪ್ರಸಂಗಗಳು’ ಪುಸ್ತಕ ಬಿಡುಗಡೆಗೊಳ್ಳಲಿವೆ. ಫೆ.7ರ ಸಂಜೆ 4.30ಕ್ಕೆ ಸಮಾರೋಪ ನಡೆಯಲಿದೆ ಎಂದು ಹೇಳಿದರು. ಯಕ್ಷಗೆಜ್ಜೆ ಕಾರ್ಯದರ್ಶಿ ಎಂ.ಕೆ.ಹೆಗಡೆ, ಸದಸ್ಯ ವಿಘ್ನೇಶ್ವರ ಹೆಗಡೆ, ಸತೀಶ ಹೆಗಡೆ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.